ಶಕ್ತಿನಗರದ ಯೋಜನೆಗೆ ಕುಲಶೇಖರದಲ್ಲಿ ಗುದ್ದಲಿ ಪೂಜೆ ಮಾಡುವಷ್ಟು ಗತಿಗೇಡು ಶಾಸಕರಿಗೆ ಬರಬಾರದಿತ್ತು!
ಶನಿವಾರ ಬೆಳಿಗ್ಗೆ ಕುಲಶೇಖರ ಚರ್ಚ್ ಹಾಲ್ ನಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ ಆರ್ ಲೋಬೊ ಅವರು ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ಇದೇನೋ ಸಭಾಂಗಣದೊಳಗೆ ಶಿಲಾನ್ಯಾಸ ಮಾಡುವುದಾ ಎಂದು ಕೇಳಬೇಡಿ. ಒಂದು ಖಾಲಿ ಜಾಗದಲ್ಲಿ ಏನಾದರೂ ಕಟ್ಟಡ ಕಟ್ಟಬೇಕಾದರೆ ಶಿಲಾನ್ಯಾಸ, ಭೂಮಿ ಪೂಜೆ ಅಥವಾ ಗುದ್ದಲಿ ಪೂಜೆ ಮಾಡುವುದು ವಾಡಿಕೆ. ಅದು ಹತ್ತನೆ ತರಗತಿ ಕಲಿತವರಿಗೂ ಗೊತ್ತಿರುತ್ತದೆ. ಶಾಲೆಗೆ ಹೋಗದವರಿಗೂ ಗೊತ್ತಿರುತ್ತದೆ. ಆದರೆ ಒಂದು ಕಟ್ಟಡದೊಳಗೆ ಗುದ್ದಲಿ ಪೂಜೆ, ಭೂಮಿ ಪೂಜೆ ಮಾಡುವುದು ಹೊಸತು. ಯಾರಾದರೂ ಸಭಾಂಗಣದೊಳಗೆ ಗುದ್ದಲಿ ಪೂಜೆ ಮಾಡುವುದು ಯಾಕೆ ಎಂದು ನಿಮಗೆ ಅನಿಸಿದರೆ ನೆನಪಿಸಿಕೊಳ್ಳಿ, “ಚುನಾವಣೆ ಹತ್ತಿರದಲ್ಲಿದೆ” ಮಂಗಳೂರು ನಗರ ದಕ್ಷಿಣ ಶಾಸಕರು ಎಲ್ಲಿ ಬೇಕಾದರೂ ಅಲ್ಲಿ ಈಗ ಗುದ್ದಲಿ ಪೂಜೆ ಮಾಡುತ್ತಾರೆ. ಅವರಿಗೆ ಈಗ ಗುದ್ದಲಿ ಪೂಜೆ ಮಾಡುವುದು ಮಾತ್ರ ಮುಖ್ಯ. ಒಂದು ವೇಳೆ ನೀವು ನಿಮ್ಮ ಮನೆಯಿರುವ ರಸ್ತೆಗೆ ಕಾಂಕ್ರೀಟಿಕರಣ ಆಗಬೇಕು ಎಂದು ಮನವಿ ಮಾಡಿ. ನಾಳೆಯೇ ಬಂದು ನಿಮ್ಮ ಮನೆಯ ಒಳಗೆನೆ ಗುದ್ದಲಿ ಪೂಜೆ ಮಾಡಿದರೂ ಮಾಡಬಹುದು. ಅವರಿಗೆ ಅರ್ಜೆಂಟಾಗಿ ತಾವು ಏನಾದರೂ ಮಾಡುತ್ತಿದ್ದೇನೆ ಎನ್ನುವುದು ತೋರಿಸಬೇಕಾಗಿದೆ.
ಎಲ್ಲೆಲ್ಲಿಯೋ ಗುದ್ದಲಿ ಪೂಜೆ ಯಾಕೆ?
ಸರ್, ಯಾರಾದರೂ ಗುದ್ದಲಿ ಪೂಜೆಯನ್ನು ಎಲ್ಲಿ ಮಾಡಬೇಕೊ ಅಲ್ಲಿ ಬಿಟ್ಟು ಎಲ್ಲೆಲ್ಲಿಯೋ ಮಾಡುತ್ತಾರಾ ಎಂದು ಕೇಳಿ ನೋಡಿ. ಅದಕ್ಕೆ ಉತ್ತರ ಏನು ಬರಬಹುದು ಗೊತ್ತಾ “ಆದಷ್ಟು ಬೇಗ ಹೆಚ್ಚೆಚ್ಚು ಪಬ್ಲಿಸಿಟಿ ಪಡೆಯುವುದು ಮುಖ್ಯ, ಅಷ್ಟಕ್ಕೂ ನಾವು ಗುದ್ದಲಿ ಪೂಜೆ ಮಾಡಿದ ಕೂಡಲೇ ಶಕ್ತಿನಗರದಲ್ಲಿ ಫ್ಲಾಟ್ ನಿರ್ಮಾಣ ಆಗುವುದಿಲ್ಲ. ಅದರ ಕೆಲಸ ಸದ್ಯಕ್ಕೆ ಪ್ರಾರಂಭ ಕೂಡ ಆಗುವುದಿಲ್ಲ. ಆದರೆ 930 ಕುಟುಂಬದವರ ಕಿವಿ ಮೇಲೆ ಅರ್ಜೆಂಟಾಗಿ ಹೂ ಇಡಲೇಬೇಕಾಗಿದೆ. ಯಾಕೆಂದರೆ ಗುದ್ದಲಿ ಪೂಜೆ ಮಾಡಿದರೆ ಅವರು ನಂಬಿ ಬಿಡ್ತಾರೆ. ನಂತರ ವೋಟ್ ಹಾಕಿಸಿಕೊಳ್ಳುವುದು. ಬಳಿಕ ಫ್ಲಾಟ್ ಎರಡು ವರ್ಷ ಬಿಟ್ಟು ಆಗಲಿ, ನಾಲ್ಕು ವರ್ಷ ಬಿಟ್ಟು ಆಗಲಿ ನಮಗೇನು. ನಮ್ಮ ರಾಜ್ಯ ಸರಕಾರವನ್ನು ನಂಬಿದ್ರೆ ಅವರು ಹತ್ತು ವರ್ಷ ತೆಗೆದುಕೊಂಡರೂ ಆಶ್ಚರ್ಯವಿಲ್ಲ. ಮಂಗಳೂರಿನ ಕೋರ್ಟ್ ರಸ್ತೆ, ಜಿಎಚ್ ಎಸ್ ರಸ್ತೆ, ಭವಂತಿ ರಸ್ತೆ ನಮಗೆ ಮುಗಿಸಲು ಎಷ್ಟೋ ವರ್ಷ ಹಿಡಿದಿದೆ. ಇನ್ನೂ ಮುಗಿದಿಲ್ಲ. ಹಾಗಿರುವಾಗ 930 ಮನೆಗಳ ಫ್ಲಾಟ್ ಬೇಗನೆ ಆಗುತ್ತದಾ. ಹಾಗಂತ ಶಕ್ತಿನಗರದಲ್ಲಿ ಗುದ್ದಲಿ ಪೂಜೆ ಮಾಡಲು ಸಾಧ್ಯವಿಲ್ಲ. ಅಲ್ಲಿ ಭೂಮಿಯೇ ಸಮತಟ್ಟು ಮಾಡಿಲ್ಲ. ಅಲ್ಲಿ ಭೂಮಿ ಪೂಜೆ ಮಾಡಲು ಸಾಧ್ಯವೇ ಇಲ್ಲ. ಸಭಾಂಗಣದೊಳಗೆ ಮಾಡಿದರೆ ರಗಳೆ ಇಲ್ಲ. ಇಲ್ಲದಿದ್ದರೆ ಎಲ್ಲಿಯಾದರೂ ಮಿನಿಸ್ಟರ್ ಕೃಷ್ಣಪ್ಪ ಮಾಧ್ಯಮದವರು ಎದುರಿಗೆ ಇರುವಾಗಲೇ “ಇದೇನು ಇಲ್ಲಿ ಭೂಮಿ ಸಮತಟ್ಟು ಮಾಡಿಲ್ಲ. ಕಂಪೌಂಡ್ ಗೋಡೆ ಕಟ್ಟಿಲ್ಲ. ಇಲ್ಲಿ ಹೋಗಿ ಬರುವುದಕ್ಕೆ ತುಂಬಾ ಕಷ್ಟವಾಗುತ್ತದೆ. ಇಲ್ಲಿ ಎಂತಹ ಭೂಮಿ ಪೂಜೆ ಮಾಡುವುದು ಎಂದು ಕೇಳಿದರೆ? ಮೊದಲೇ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಮಂಗಳೂರಿಗೆ ಬಂದು ಕುಡ್ಸೆಂಪ್ ಕಾಮಗಾರಿ ನೋಡಿ ಇದರಲ್ಲಿ ಅವ್ಯವಹಾರ ನಡೆದಿದೆ. ಅದಕ್ಕೆ ಕಾರಣರಾಗಿರುವ ಯಾರನ್ನೂ ಬಿಡುವ ಪ್ರಶ್ನೆನೆ ಇಲ್ಲ ಎಂದು ಬಹಿರಂಗವಾಗಿ ಹೇಳಿ ಹೋಗಿದ್ದಾರೆ. ಅರ್ಧ ಮಾನ ಮರ್ಯಾದೆ ತೆಗೆದಿದ್ದಾರೆ. ಹಾಗಿರುವಾಗ ಇವರು ಕೂಡ ಕಾನೂನು ಪ್ರಕಾರ ಮಾತನಾಡಿದರೆ ಕಷ್ಟವಾಗುತ್ತದೆ. ಇರುವ ಉಳಿದ ಮರ್ಯಾದೆ ಹೊರಟು ಹೋಗುತ್ತದೆ. ಆದ್ದರಿಂದ ಸೈಲೆಂಟ್ ಆಗಿ ಕಟ್ಟಡದೊಳಗೆ ಮುಗಿಸಿಬಿಡೋಣ” ಎಂದು ಅವರು ಹೇಳಬಹುದು.
ಡಿವೈಎಫ್ ಐ ಪ್ರತಿಭಟನೆಯಿಂದ ಎಚ್ಚೆತ್ತ ಲೋಬೋ…
ರಸ್ತೆ ಕಾಮಗಾರಿಗೆ ಪಿಕ್ಕಾಸು ಹಿಡಿದು ಅದೇ ರಸ್ತೆ ಮೇಲೆನೆ ಗುದ್ದಲಿ ಪೂಜೆ ಮಾಡುವ ಶಾಸಕರಿಗೆ ಆಶ್ರಯ ಯೋಜನೆಯ ಫ್ಲಾಟ್ ಗಳನ್ನು ಕಟ್ಟುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಗೊತ್ತಿರುವುದರಿಂದ ಅವರು ಚರ್ಚ್ ಸಭಾಂಗಣದೊಳಗೆ ಮಾಡಲು ಹೊರಟಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಇದು ದೊಡ್ಡ ಬೋಗಸ್ ಎನ್ನುವುದು ಇಲ್ಲಿಯೇ ಗೊತ್ತಾಗುತ್ತದೆ.
ಅಷ್ಟಕ್ಕೂ ಸಿಕ್ಕಿದ ಕಡೆಗಳೆಲ್ಲಾ ಜೆ ಆರ್ ಲೋಬೊ ಅವರು ಈ ಆಶ್ರಯ ಮನೆಗಳ ಯೋಜನೆಯನ್ನು ತಾವೇ ತಂದಿದ್ದು ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಅದು ಮತ್ತೊಂದು ಸುಳ್ಳು. ಈ ಮೊದಲೇ ತಮ್ಮದೇನೂ ಪ್ರಯತ್ನವಿಲ್ಲದೆ ಕೇವಲ ಹಕ್ಕುಪತ್ರ ಕೊಡುವುದಕ್ಕೆ ಸೀಮಿತವಾಗಿರುವ ಲೋಬೊ ಪ್ರತಿಯೊಂದು ವೇದಿಕೆಯಲ್ಲಿಯೂ ಹಕ್ಕುಪತ್ರ ಕೊಡುವಾಗಲೇ ಅವರ ಮತ ತಮಗೆ ಎನ್ನುವಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದೆ ಯಡಿಯೂರಪ್ಪನವರು ಎಲ್ಲಾ ಸಿದ್ಧಮಾಡಿ ಹೋಗಿರುವ ಯೋಜನೆಗೆ ಲೋಬೋ ಕೇವಲ ಹಂಚುವಿಕೆಯ ಮೂಲಕ ಅದು ಕೂಡ ತಾಲೂಕು ಪಂಚಾಯತ್ ಕಚೇರಿ ಮಾಡುವಂತಹ ಕೆಲಸವನ್ನು ತಾವು ಮಾಡಿ ಮೈಲೇಜ್ ಗಿಟ್ಟಿಸಿಕೊಳ್ಳುವ ಕೆಲಸ ಆಯಿತು. ಈಗ ಹಿಂದಿನ ಶಾಸಕ ಯೋಗೀಶ್ ಭಟ್ ಅವರು ಎಲ್ಲಾ ಸಿದ್ಧಪಡಿಸಿ ಹೋಗಿರುವ ಯೋಜನೆಗೆ ಈಗ ಐದು ವರ್ಷ ಮುಗಿಯುವ ಹೊತ್ತಿಗೆ ಭೂಮಿ ಪೂಜೆ ಮಾಡಿ ಮತ್ತೆ ಮೈಲೇಜ್ ಪಡೆದುಕೊಳ್ಳುತ್ತಿದ್ದಾರೆ. ಅದು ಕೂಡ ಶಕ್ತಿನಗರದ ಕಾಮಗಾರಿಗೆ ಕುಲಶೇಖರದಲ್ಲಿ ಭೂಮಿ ಪೂಜೆ. ಇದಕ್ಕಿಂತ ನಾಚಿಕೆಗೇಡಿತನ ಬೇರೆ ಇರಲಾರದು. ಗೆಲ್ಲಬೇಕು ಎನ್ನುವ ಗಡಿಬಿಡಿಯಲ್ಲಿ ನಾಟಕ ಮಾಡುವ ಭರದಲ್ಲಿ ಒಬ್ಬರು ಕೆಎಎಸ್ ಕಲಿತ ವ್ಯಕ್ತಿಗೆ ಇಂತಹ ಪರಿಸ್ಥಿತಿ ಬರಬಾರದು. ಅಷ್ಟಕ್ಕೂ ಲೋಬೋ ತಾನು ಕಟ್ಟಿಸಿಕೊಡುತ್ತಿದ್ದೇನೆ ಎಂದು ಎದೆ ತಟ್ಟಿ ಹೇಳುತ್ತಿರುವ ಯೋಜನೆಗೆ ತಮ್ಮ ಮನೆಯಿಂದ ಏನು ಹಣ ತರುತ್ತಿಲ್ಲ. ಇದು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಅದರೊಂದಿಗೆ ರಾಜ್ಯ ಸರಕಾರ ಕೂಡ ಪಾಲು ಕೊಡುತ್ತದೆ. ಮಂಗಳೂರು ಮಹಾನಗರ ಪಾಲಿಕೆ ಕೂಡ ಹಣ ಹಾಕುತ್ತದೆ. ಅಷ್ಟಕ್ಕೂ ಶಾಸಕ ಲೋಬೋ ಅವರು ಈ ಪರಿ ಅವಸರ ಮಾಡಿ ಗುದ್ದಲಿ ಪೂಜೆ ಎಲ್ಲೆಲ್ಲಿಯೋ ಮಾಡುವ ಅವಶ್ಯಕತೆ ಯಾಕೆ ಬಂತು ಅಂತಿರಾ? ಅದಕ್ಕೆ ಡಿವೈಎಫ್ ಐ ಅವರ ಪ್ರತಿಭಟನೆಯೇ ಕಾರಣ. ಶಕ್ತಿನಗರದಲ್ಲಿ ಫ್ಲಾಟ್ ಆಗುವ ಜಾಗದಲ್ಲಿ ಕಾಮಗಾರಿ ಆಗುವ ಯಾವುದೇ ಲಕ್ಷಣ ಇಲ್ಲ. ಅಲ್ಲಿ ಭೂಮಿ ಸಮತಟ್ಟು ಮಾಡಿಲ್ಲ. ಶಾಸಕರು ಸುಮ್ಮನೆ ಬೋಗಸ್ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಶಾಸಕರಿಗೆ ಜನರು ತಮ್ಮನ್ನು ಅಷ್ಟು ಸುಲಭವಾಗಿ ನಂಬುವ ಮಂಗಗಳಲ್ಲ ಎಂದು ಅನಿಸಿದೆ. ಅದಕ್ಕೆ ನಾಟಕ ಮಾಡುವುದಕ್ಕಾದರೂ ಎಲ್ಲಿಯಾದರೂ ಗುದ್ದಲಿ ಪೂಜೆ ಮಾಡಬೇಕೆನ್ನುವ ಗಡಿಬಿಡಿಯಲ್ಲಿ ಅವರು ಹುಡುಕುವಾಗಲೇ ಅವರಿಗೆ ಸಿಕ್ಕಿದ್ದು ಕುಲಶೇಖರ ಚರ್ಚ್!
Leave A Reply