ಪತ್ರಕರ್ತರಲ್ಲೂ ಅಲ್ಪಸಂಖ್ಯಾತರನ್ನು ಹುಡುಕಿ, ಅವರನ್ನು ಒಡೆಯುವ ಸಿದ್ದರಾಮಯ್ಯನವರೇ ನಿಮಗೆ ಜ್ಞಾನ ಇಲ್ಲವೇ?
ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಕೆ ಹೀಗೆ? ಇವರಿಗೆ ಏನಾಗಿದೆ? ಸಮಾಜವಾದದ ತಕ್ಕಡಿ ಹಿಡಿದು ಅಧಿಕಾರಕ್ಕೆ ಬಂದ ಇವರು, ಆ ತಕ್ಕಡಿಯ ಒಂದು ಬದಿ ಅಲ್ಪಸಂಖ್ಯಾತರನ್ನೇ ಏಕೆ ಜಾಸ್ತಿ ಇಟ್ಟು ತೂಗಬೇಕು? ಯಾಕೆ ಇಂತಹ ಕೀಳು ರಾಜಕಾರಣ ಮಾಡಬೇಕು?
ಇಂತಹ ಕುತ್ಸಿತ ಮನಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದಲೇ ಮುನ್ನುಡಿ ಬರೆದರು. ಮುಸ್ಲಿಂ ಸಮುದಾಯದವರಿಗಷ್ಟೇ ಶಾದಿಭಾಗ್ಯ ತಂದು ಟೀಕೆಗೊಳಗಾದರು. ಒಂದೇ ಸಮುದಾಯ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿ ಮಕ್ಕಳಲ್ಲೂ ಜಾತಿಯ ವಿಷ ಬೀಜ ಬಿತ್ತಲು ಮುಂದಾದರು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಲ್ಲೂ ಜಾತಿ, ಅಲ್ಪಸಂಖ್ಯಾತರನ್ನು ಹುಡುಕಿ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯನವರು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಅಲ್ಪಸಂಖ್ಯಾತರ ಒಡೆತನದ ಮಾಧ್ಯಮ ಸಂಸ್ಥೆ ಹಾಗೂ ಪತ್ರಕರ್ತರಿಗೆ ಚುನಾವಣೆ ಹೊಸ್ತಿಲಲ್ಲಿ ಭಾರಿ ಉಡುಗೊರೆ ನೀಡಲು ಹೊರಟಿದ್ದಾರೆ.
ಅಲ್ಪಸಂಖ್ಯಾತರ ಒಡೆತನದ ಮಾಧ್ಯಮ ಸಂಸ್ಥೆಗಳಿಗೆ ಪ್ರತಿ ತಿಂಗಳು ಎರಡು ಪುಟ ಜಾಹೀರಾತು, ಹಾಗೂ ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಲ್ಯಾಪ್ ಟಾಪ್, ಕ್ಯಾಮೆರಾ ಸೇರಿ ಮಾಧ್ಯಮ ಕಿಟ್ ನೀಡಲು ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯನವರೇ ಇಂತಹ ಒನ್ ವೇ ಯೋಜನೆಗಳನ್ನು ಜಾರಿಗೆ ತಂದು ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ? ಯಾಕೆ ಹೀಗೆ ಒಂದೇ ಸಮುದಾಯಕ್ಕೆ ಸೌಲಭ್ಯ ನೀಡಿ, ನಿಮ್ಮ ಪರ ಕೆಲಸ ಮಾಡಿ ಎಂದು ಪರೋಕ್ಷವಾಗಿ ಆಮಿಷ ಒಡ್ಡುತ್ತಿದ್ದೀರಿ? ಯಾಕೆ ಪತ್ರಕರ್ತರನ್ನೂ ನಿಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿದ್ದೀರಿ? ಹೀಗೆ ಮಾಡುವ ನೀವೆಂತಹ ಜನನಾಯಕ ಸ್ವಾಮಿ?
ಖಂಡಿತ, ನೀವು ಒಬ್ಬ ಮುಖ್ಯಮಂತ್ರಿಯಾಗಿ ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ನೀಡುವುದು ಒಳ್ಳೆಯದು. ಕಳೆದ ಬಜೆಟ್ಟಿನಲ್ಲಿ ಪತ್ರಕರ್ತರಿಗೆ ವಿಮಾ ಸೌಲಭ್ಯ ನೀಡಿರುವುದು ಸಹ ಸ್ವಾಗತಾರ್ಹವೇ? ಆದರೆ ಇದೆಂತಹ ಓಲೈಕೆಯ ಯೋಜನೆ ಸ್ವಾಮಿ?
ಯಾವ ಪತ್ರಿಕಾ ಸಂಸ್ಥೆಯೂ ಜಾಹೀರಾತು ಪಡೆಯದಷ್ಟು ಸಾಮರ್ಥ್ಯ ಹೊಂದಿಲ್ಲ ಎಂದಲ್ಲ. ಯಾವ ಪತ್ರಕರ್ತರೂ ವರದಿ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್, ಕಂಪ್ಯೂಟರ್ ಹೊಂದಿಲ್ಲ ಎಂದಲ್ಲ. ಹೀಗಿರುವಾಗ ಈಗ ಇರುವ ಸೌಲಭ್ಯಗಳನ್ನೇ ನೀಡಿ ನೀವು ಏನು ಸಾಧಿಸಲು ಹೊರಟಿದ್ದೀರಿ?
ನೀವೇನೋ ಅಹಿಂದ ಪರ ಮುಖ್ಯಮಂತ್ರಿ ಎಂದು ಈಗ ನಾನೂ ಹಿಂದೂ ಎಂದು ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದೀರಿ. ಆದರೆ ನಿಮ್ಮ ಅಜೆಂಡಾಯುತ ಯೋಜನೆ ಜಾರಿಯಿಂದ ಪತ್ರಕರ್ತರು ನಿಮ್ಮ ಪರ ಕೆಲಸ ಮಾಡಬೇಕೇ? ನಿಮ್ಮನ್ನು ಹಾಡಿ ಹೊಗಳಬೇಕೆ? ಅದಕ್ಕಾಗಿಯೇ ಈ ಅಲ್ಪಸಂಖ್ಯಾತ ಪತ್ರಕರ್ತರ ಪರವಾಗಿ ಯೋಜನೆ ಜಾರಿಗೊಳಸಿದ್ದೀರಾ? ನಿಮಗೆ ಬುದ್ಧಿ, ಜ್ಞಾನ ಎರಡೂ ಇಲ್ಲವೇ ಸಿಎಂ ಅಥವಾ ನಿಮ್ಮ ಒಳಮರ್ಮ ಅರಿಯದಷ್ಟು ದಡ್ಡರೇ ಜನ?
Leave A Reply