ಸಿಎಂ ಸಿದ್ದರಾಮಯ್ಯನವರೇ, ಸಾಮಾನ್ಯ ಜನ ಬಿಡಿ, ಲೋಕಾಯುಕ್ತರಿಗೂ ರಕ್ಷಣೆ ಇಲ್ಲವೇ?
ಒಬ್ಬ ದಕ್ಷ ಆಡಳಿತಗಾರನಾದವನು, ರಾಜ್ಯದ ಚುಕ್ಕಾಣಿ ಹಿಡಿದವನು, ನಾಯಕನಾದವನು ಹೇಗಿರಬೇಕು? ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿರಬೇಕು, ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿಯಾದವರು ಜನರಿಗೆ ನೆಮ್ಮದಿ ಸಿಗುವಂತೆ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ನೈತಿಕತೆ ರಾಜ್ಯದಲ್ಲಿ ನೆಲೆಯೂರಿರಬೇಕು. ಆಗ ಆ ರಾಜ್ಯ ಸುಭೀಕ್ಷೆಯಲ್ಲಿದೆ ಅಂತ ಅರ್ಥ. ಆದರೆ ಇದಾವುದೂ ಇಲ್ಲದಿದ್ದರೆ, ಆ ರಾಜ್ಯ ಅರಾಜಕತೆಯಲ್ಲಿ ಸಿಲುಕಿ ಒದ್ದಾಡುತ್ತಿದೆ ಅಂತಲೇ ಅರ್ಥ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕರ್ನಾಟಕದ ಪರಿಸ್ಥಿತಿ ನೋಡಿದರೆ ನಿಮಗೆ ರಾಜ್ಯ ಸುಭೀಕ್ಷೆಯಲ್ಲಿದೆ, ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ, ಶಾಂತಿ ನೆಲೆಯೂರಿದೆ ಎಂದು ಅನಿಸುತ್ತಿದೆಯಾ? ರಾಜ್ಯದ ಜನರಿಗೆ ಅಷ್ಟರಮಟ್ಟಿಗೆ ಅಭಯ ನೀಡಬಲ್ಲಿರಾ?
ನಾಚಿಕೆಯಾಗಬೇಕು ನಿಮಗೆ…
ನಾನು ಅಹಿಂದ ಪರ ಮುಖ್ಯಮಂತ್ರಿ, ನಾನು ಸಮಾಜವಾದಿ, ಶಾಂತಿಪ್ರಿಯ ಎಂಬ ಸೋಗು ಹಾಕಿಕೊಂಡು ಅಧಿಕಾರಕ್ಕೆ ಬಂದು ಏನು ಮಾಡಿದಿರಿ ಸ್ವಾಮಿ ನೀವು? ಎಲ್ಲಿದೆ ರಾಜ್ಯದಲ್ಲಿ ಶಾಂತಿ? ನೀವು ಹೇಗೆ ಕಾನೂನು ಸುವ್ಯವಸ್ಥೆ ಕಾಪಾಡಿದಿರಿ? ಒಬ್ಬ ಸಾಮಾನ್ಯ ವ್ಯಕ್ತಿ ಬಿಡಿ, ರಾಜ್ಯದ ನೈತಿಕತೆ ತಂಗುದಾಣ, ತಂಗುದಾಣದ ಮುಖ್ಯಸ್ಥ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆಯೇ ಹಲ್ಲೆಯಾಯಿತಲ್ಲ ಸ್ವಾಮಿ, ಒಬ್ಬ ಲೋಕಾಯುಕ್ತರಿಗೇ ರಕ್ಷಣೆ ನೀಡದ ನೀವು ರಾಜ್ಯದ ಜನರ ಹಿತ ಕಾಪಾಡುವಿರಿ?
ಹೌದು, ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರೋ, ಅಲ್ಲಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಬಿಡಿ, ಕನಿಷ್ಠ ಶಾಂತಿಯೂ ರಾಜ್ಯದಲ್ಲಿ ನೆಲೆಸಲಿಲ್ಲ. ಮೊದಲಿಗೆ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯಾಯಿತು. ರಾಜ್ಯಾದ್ಯಂತ ಕಲಬುರ್ಗಿಯವರ ಹಂತಕರನ್ನು ಹಿಡಿಯಬೇಕು ಎಂದು ಒಕ್ಕೊರಲ ಒತ್ತಾಯ ಕೇಳಿಬಂತು. ಆದರೆ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದತ್ತ ಬೆರಳು ತೋರಿದರೇ ಹೊರತು, ಇದುವರೆಗೂ ಕಲಬುರ್ಗಿ ಹಂತಕರನ್ನು ಹಿಡಿಸಿಲ್ಲ.
ಇದೆಲ್ಲ ಪ್ರಹಸನದ ನಡುವೆ, ಕೋಲಾರ-ಚಿಕ್ಕಬಳ್ಳಾಪುರ ರೈತರು, ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ, ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಹೊರಟರು. ಪ್ರತಿಭಟನೆ ಹಾಗೂ ಆಕ್ರೋಶದ ಮಡುವಿನಲ್ಲಿದ್ದ ಆ ರೈತರನ್ನು ಬೆಂಗಳೂರಿಗೇ ಬಿಡದ ಮುಖ್ಯಮಂತ್ರಿಯವರು, ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿ, ರೈತರ ಹೋರಾಟವನ್ನೇ ಹತ್ತಿಕ್ಕಿದರು. ಆ ಮೂಲಕ ರೈತರ ನೋವಿಗೆ ಮುಲಾಮಾಗಬೇಕಾದ ಸಿಎಂ ಸಾಹೇಬರೇ ವಿಲನ್ ಆದರು. ಇನ್ನು ಯೋಜನೆ ಜಾರಿಯಂತೂ ಕನಸಿನ ಮಾತಾಯಿತು. ಮಹದಾಯಿ, ಕಾವೇರಿ ವಿಷಯ ಬಗೆಹರಿಸಲು ಹೋರಾಟ ಮಾಡಿದ ರೈತರ ವಿರುದ್ಧವೇ ಪ್ರಕರಣ ದಾಖಲಿಸಿದ ಹೆಗ್ಗಳಿಕೆಯೂ ಸಿದ್ದರಾಮಯ್ಯನವರದ್ದಾಯಿತು.
ಇನ್ನು, ಹಿಂದೂಗಳ ಹತ್ಯೆಯ ಕುರಿತು ಬರೆದರೆ, ಅದೇ ಒಂದು ದೊಡ್ಡ ಲೆಕ್ಕವಾಗುತ್ತದೆ. ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರಾಗಿದ್ದ, ಕುಟ್ಟಪ್ಪ, ರಾಜು, ದೀಪಕ್ ರಾವ್, ಒಬ್ಬರೇ, ಇಬ್ಬರೇ? 20ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಯಿತು. ರಕ್ತಪಾತವಾಯಿತು. ಇಷ್ಟಾದರೂ ಸಿದ್ದರಾಮಯ್ಯನವರು ಎಚ್ಚೆತ್ತುಕೊಳ್ಳಲೇ ಇಲ್ಲ.
ಆದಾಗ್ಯೂ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ವಿಜಯಪುರದಲ್ಲಿ ದಾನಮ್ಮಳ ಕೊಲೆ, ಬೀದರ್ ನಲ್ಲಿ ಪೂಜಾ ಎಂಬ ಬಾಲಕಿಯ ಮೇಲೆ ಅತ್ಯಾಚಾರ, ಕರಾವಳಿ ಭಾಗದಲ್ಲಿ ಗಲಭೆ… ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ಸಿದ್ದರಾಮಯ್ಯನವರ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾದರು.
ಇದು ದುಷ್ಕರ್ಮಿಗಳ ಕೃತ್ಯ, ಸರ್ಕಾರದ ವೈಫಲ್ಯವಾದರೆ, ಕಾಂಗ್ರೆಸ್ಸಿಗರ ಗೂಂಡಾಗಿರಿಯದ್ದೇ ಒಂದು ಅಧ್ಯಾಯ. ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ವಿದ್ವತ್ ಎಂಬ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ. ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಪೆಟ್ರೊಲ್ ಹಿಡಿದು ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಹೆದರಿಸಿದ. ರಮಾನಾಥ ರೈ ಪುತ್ರ ಕಾಡಿಗೆ ನುಗ್ಗಿ ಪುಂಡಾಟ ಮಾಡಿದ. ಸಿದ್ದರಾಮಯ್ಯನವರು ಮಾತ್ರ ಮಗುಮ್ಮಾದರು.
ಆರಂಭದಲ್ಲಿ ಲೋಕಾಯುಕ್ತದ ಹಲ್ಲು ಕಿತ್ತಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಈಗ ಲೋಕಾಯುಕ್ತರ ಮೇಲೆಯೇ ಹಲ್ಲೆ ಮಾಡಲಾಗಿದೆ. ಆ ಮೂಲಕ ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾರಿಗೂ ರಕ್ಷಣೆಯಿಲ್ಲ ಎಂಬುದು ಖಾತರಿಯಾಗಿದೆ. ನಾಲ್ಕೂ ಮುಕ್ಕಾಲು ವರ್ಷ ನಿರ್ಲಕ್ಷ್ಯದಲ್ಲೇ ಕಾಲ ಕಳೆದ ಸಿದ್ದರಾಮಯ್ಯನವರು ಇನ್ನೆರಡು ತಿಂಗಳಲ್ಲಿ ರಾಜ್ಯದ ಹಿತ ಕಾಪಾಡುತ್ತಾರೆ, ಕಾನೂನು ಸುವ್ಯವಸ್ಥೆ ಹಿಡಿತದಲ್ಲಿ ಹಿಡಿದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದೇ ತಪ್ಪೇನೋ? ಇಂತಹವರಿಗೆ ಮತ ಹಾಕಿದೆವಲ್ಲ, ನಮಗೆ ನಾವೇ…?
Leave A Reply