ಜಮ್ಮು-ಕಾಶ್ಮೀರ ಜೈಲಿನಲ್ಲೂ ಉಗ್ರ ಕೃತ್ಯದ ಕುರುಹುಗಳು ಸಿಕ್ಕಿರುವುದೇ ಆಘಾತಕಾರಿ ವಿಷಯ ಗೊತ್ತಾ?
ಶ್ರೀನಗರ: ಇದುವರೆಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ, ಪ್ರತ್ಯೇಕತಾವಾದಿಗಳ ಆಜಾದ್ ಕಾಶ್ಮಿರ, ಉಗ್ರರ ಗುಂಡಿನ ಮೊರೆತ ಮಾತು ಕೇಳುತ್ತಿತ್ತು. ಆದರೆ ಈ ಉಗ್ರವಾದ ಜೈಲಿಗೂ ಅಂಟಿದೆ ಎಂಬುದೇ ಆಘಾತಕಾರಿ ವಿಷಯವಾಗಿದೆ.
ಹೌದು, ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಜೈಲೊಂದರಲ್ಲಿ 25 ಮೊಬೈಲ್, ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಹಾಗೂ ಐಪಾಡ್ ಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಅಷ್ಟೇ ಆಗಿದ್ದಿದ್ದರೆ ಇದಾವುದೋ ಕೈದಿಗಳ ಕೃತ್ಯ ಎಂದು ಸುಮ್ಮನಾಗಬಹುದಿತ್ತು. ಆದರೆ, ಜೈಲಿನಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿರುವ ಜಿಹಾದಿ ಪತ್ರ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪೋಸ್ಟರ್ ಹಾಗೂ ಪಾಕಿಸ್ತಾನಿ ಧ್ವಜಗಳು ಶ್ರೀನಗರದ ಜೈಲಿಗೂ ಉಗ್ರವಾದದ ನಂಟಿದೆ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಶಂಕಿಸಿದ್ದಾರೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ದನೀಶ್ ಗುಲಾಮ್ ಲೋನ್ ಹಾಗೂ ಸೋಹೆಲ್ ಅಹ್ಮದ್ ಎಂಬುವವರನ್ನು ವಿಚಾರಣೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದಾಗ ಈ ವಸ್ತುಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಆದಾಗ್ಯೂ, ಪ್ರತ್ಯೇಕತಾವಾದಿಗಳು ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನಿ ಉಗ್ರ ಸಂಘಟನೆಗಳಿಂದ ಹಣ ಪಡೆದು, ಜಮ್ಮು ಕಾಶ್ಮೀರದಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಕರಣದ ಕುರಿತು ಸಹ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಪ್ರಕರಣ ಮತ್ತಷ್ಟು ಸುಳಿವು ನೀಡುವ ಸಾಧ್ಯತೆ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
Leave A Reply