ಅಯ್ಯಪ್ಪ ಸ್ವಾಮಿ ಕ್ಷಮಿಸಬಹುದು, ಹಿಂದೂಗಳು ಕ್ಷಮಿಸುತ್ತಾರಾ??
ಮಂಗಳೂರು ನಗರ ಉತ್ತರದ ಶಾಸಕ ಮೊಯ್ದೀನ್ ಬಾವ ಅವರು ಇತ್ತೀಚೆಗೆ ಕೇಸರಿ ಸಂಘಟನೆಯೊಂದರ ಸತ್ಯನಾರಾಯಣ ಪೂಜೆಗೆ ಹೋಗಿದ್ದರು. ಅಲ್ಲಿ ಕೇಸರಿ ಶಾಲನ್ನು ಹಾಕಿ ಪ್ರಸಾದ ಸ್ವೀಕರಿಸಿದರು. ಅಲ್ಲಿನ ಯುವಕರೊಂದಿಗೆ ನಿಂತು ಫೋಟೋ ತೆಗೆಸಿಕೊಂಡರು. ಅದು ಎಲ್ಲಾ ಕಡೆ ಪ್ರಚಾರವಾಗುವಂತೆ ಮಾಡಿದರು. ಅಲ್ಲಿಗೆ ತಾವು ದೊಡ್ಡ ಜಾತ್ಯಾತೀತವಾದಿ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡಿದರು. ಹಿಂದೂಗಳ ಸತ್ಯನಾರಾಯಣ ಪೂಜೆಗೆ ಹೋಗೋದು, ಕೋಲ, ನೇಮಕ್ಕೆ ಹೋಗುವುದು, ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗೋದು ಶಾಸಕ ಮೊಯ್ದೀನ್ ಬಾವ ಸಚಿವ ಯುಟಿ ಖಾದರ್ ಅವರಿಂದ ಕಲಿತು ಅಳವಡಿಸಿಕೊಂಡಿರಬೇಕು. ಅದೆಲ್ಲಾ ಒಕೆ. ಚುನಾವಣೆಯ ಸಂದರ್ಭದಲ್ಲಿ ಮೊಯ್ದೀನ್ ಬಾವ ಇದೆಲ್ಲಾ ಮಾಡಬೇಕಾದದ್ದು ಅವರ ಅನಿವಾರ್ಯತೆ. ಆದರೆ ಹಿಂದೂಗಳು ಆರಾಧಿಸುವ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯೊಂದರ ಸಂಗೀತವನ್ನು ಕದ್ದು ಅದಕ್ಕೆ ತಮ್ಮನ್ನು ಹೊಗಳುವ ಸಾಹಿತ್ಯ ಹಾಕಿರುವುದು ಮಾತ್ರ ಯಾಕೋ ಅತಿಯಾಯಿತು.
ಶಾಸಕರಿಗೆ ಗೊತ್ತಿಲ್ಲದೆ ಸಾಧ್ಯಾನಾ?
ಮೊಯ್ದೀನ್ ಬಾವ ಅವರು ಇದು ತಮಗೆ ಗೊತ್ತಿರಲಿಲ್ಲ, ಇದನ್ನು ಯಾರೋ ಅಭಿಮಾನಿಗಳು ಮಾಡಿದ್ದಾರೆ ಅಥವಾ ತಮ್ಮ ವಿರೋಧಿಗಳು ಮಾಡಿ ವೈರಲ್ ಮಾಡಿದ್ದಾರೆ ಎಂದು ಅದಕ್ಕೆ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ. ಎರಡೂ ಕೂಡ ಅಪ್ಪಟ ಸುಳ್ಳು ಎನ್ನುವುದರಲ್ಲಿ ಸಂಶಯ ಯಾರಿಗೂ ಇಲ್ಲ. ಯಾಕೆಂದರೆ ಮೊದಲನೇಯದಾಗಿ ಯಾರೋ ವೈರಿಗಳು ಮಾಡಿದ್ದಾರೆ ಎನ್ನುವ ಶಾಸಕರ ಹೇಳಿಕೆಯನ್ನೇ ತೆಗೆದುಕೊಳ್ಳೋಣ. ವೈರಿಗಳು ಮಾಡಿ ವೈರಲ್ ಮಾಡುವುದಕ್ಕೆ ಅದೇನೂ ಅಂಕಣ ಬರಹ ಅಲ್ಲ. ಆ ಹಾಡು ವೈರಲ್ ಆಗಿ ವಿವಾದ ಆಗುವ ಮೊದಲು ಮೊಯ್ದೀನ್ ಬಾವ ಪ್ರಾರಂಭದಲ್ಲಿ ತಮ್ಮ ಪಾದಯಾತ್ರೆಯ ರಥದಲ್ಲಿ ಸ್ಪೀಕರ್ ನಲ್ಲಿ ಎಲ್ಲರಿಗೂ ಧ್ವನಿವರ್ಧಕದ ಮೂಲಕ ಕೇಳಿಸುವಂತೆ ಮಾಡಿದ್ದಾರೆ. ಅದರ ಅರ್ಥ ಅವರಿಗೆ ಇಂತಹ ಒಂದು ಹಾಡು ರೆಕಾಡ್ಡ್ ಆಗಿದೆ ಎಂದು ಗೊತ್ತಿದೆ. ಅದನ್ನು ಎಲ್ಲರೂ ಕೇಳಬೇಕು ಎನ್ನುವ ಆಸೆ ಅವರಿಗೆ ಆಗಿದೆ. ಹಾಗೆ ಎಲ್ಲರಿಗೂ ಕೇಳಿಸುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಅದು ತಮ್ಮ ವರ್ಚಸ್ಸಿಗೆ ದಕ್ಕೆ ತರುವ ವಿಷಯವಾಗಿದ್ದಲ್ಲಿ ಅವರು ಅದನ್ನು ಯಾಕೆ ಧ್ವನಿವರ್ಧಕದ ಮೂಲಕ ಪ್ಲೇ ಮಾಡುತ್ತಿದ್ದರು ಎಂದು ಅವರೇ ಹೇಳಬೇಕು. ಇನ್ನೊಂದು ತಮ್ಮ ಅಭಿಮಾನಿಗಳು ಯಾರೋ ಮಾಡಿದ್ದಾರೆ ಎಂದಿದ್ದಾರೆ. ಮತ್ತೆ ದ್ವಂದ್ವದ ಹೇಳಿಕೆ. ಅಭಿಮಾನಿಗಳು ಮಾಡಿದಿದ್ದರೆ ಇವರಿಗೆ ಗೊತ್ತಾದ ಕೂಡಲೇ ಇದನ್ನು ಹೊರಗೆ ಎಲ್ಲಿಯೂ ಪ್ಲೇ ಮಾಡದಿರಿ. ಇದು ಹಿಂದೂಗಳ ಜನಪ್ರಿಯ ಭಕ್ತಿಗೀತೆಯೊಂದರ ಸಂಗೀತ. ಇದು ಹಿಂದೂಗಳಿಗೆ ಮನಸ್ಸಿಗೆ ಬೇಸರವಾಗುತ್ತದೆ ಎಂದು ಅಲ್ಲಿಯೇ ತಡೆಯುತ್ತಿದ್ದರು. ಅದನ್ನು ಕೂಡ ಮಾಡಲಿಲ್ಲ. ಯಾವಾಗ ಈ ಹಾಡು ವಾಟ್ಸಾಪ್ ಮೂಲಕ ಎಲ್ಲರ ಮೊಬೈಲಿನಲ್ಲಿ ಹರಡಲು ಶುರುವಾಗುವಾಗ ಬಾವ ಅವರಿಗೆ ಖುಷಿಯಾಗಿದೆ. ಯಾವಾಗ ವಿರೋಧ ವ್ಯಕ್ತವಾಯಿತೋ ಮೊಯ್ದೀನ್ ಬಾವ ಅವರಿಗೆ ಜ್ಞಾನೋದಯವಾಗಿದೆ. ಹಿಂದೂಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಹಿಂದೂಗಳ ಮನಸ್ಸಿಗೆ “ನೋವಾಗಿದ್ದರೆ” ಎನ್ನುವ ವಿಷಯವೇ ಸರಿಯಲ್ಲ. ನೂರಕ್ಕೆ ನೂರು ಒಬ್ಬ ಆಸ್ತಿಕನಿಗೆ ನೋವು ಆಗಿಯೇ ಆಗುತ್ತದೆ. ಯಾಕೆಂದರೆ ಒಬ್ಬರು ಯಕಶ್ಚಿತ್ ರಾಜಕಾರಣಿ ದೇವರ ಜನಪ್ರಿಯ ಹಾಡನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದು ತಪ್ಪು. ಇಲ್ಲಿ ಮೊಯ್ದೀನ್ ಬಾವ ಮುಸ್ಲಿಂ ಎನ್ನುವ ಕಾರಣಕ್ಕೆ ವಿರೋಧ ಅಲ್ಲ. ಅದೇ ಜಾಗದಲ್ಲಿ ಒಬ್ಬ ಹಿಂದೂ ರಾಜಕಾರಣಿ ತನ್ನ ತೆವಲಿಗೆ ದೇವರ ಭಕ್ತಿಗೀತೆಯನ್ನು ಬಳಸಿದರೆ ಅದು ಕೂಡ ನೂರಕ್ಕೆ ನೂರರಷ್ಟು ತಪ್ಪು. ಯಾಕೆಂದರೆ ಭಕ್ತಿಗೀತೆಗಳು ಜನರ ಮನಸ್ಸಿನ ಮೇಲೆ ಶಾಂತಿ, ಸಂಯಮ ಮತ್ತು ಭಕ್ತಿಯ ಪರಾಕಷ್ಟೆಯನ್ನು ಮೀಟುತ್ತವೆ. ದೇವರ ಹೆಸರಿರುವ ಕಡೆ ಒಬ್ಬ ಮನುಷ್ಯ ತನ್ನ ಹೆಸರು ಹಾಕಿ ವೈರಲ್ ಮಾಡಿದರೆ ಸಹಿಸಲು ಆಗುತ್ತದೆಯಾ?
ಕಿವಿ ಮೇಲೆ ಹೂ ಇಡುವ ಕೆಲಸ..
ಇನ್ನು ಒಬ್ಬ ಅಭಿಮಾನಿ ಈ ರೀತಿ ಮೊಯ್ದೀನ್ ಬಾವ ಅವರಿಗೆ ಗೊತ್ತಿಲ್ಲದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮಾಡಿದ ಎಂದಿಟ್ಟುಕೊಳ್ಳಿ, ಆತ ಶಾಸಕರಿಗೆ ತೋರಿಸದೆ, ಅವರ ಅನುಮತಿ ಪಡೆಯದೇ ಖಂಡಿತ ಹೊರಗೆ ಹಾಕುವುದಿಲ್ಲ. ಯಾಕೆಂದರೆ ಅವನಿಗೆ ಹೆದರಿಕೆ ಇದ್ದೇ ಇರುತ್ತದೆ. ಮೊದಲೇ ಮೊಯ್ದೀನ್ ಬಾವ ಅವರು ದಿನಕ್ಕೊಂದು ವಿವಾದ ಮಾಡಿ ಪ್ರಚಾರದಲ್ಲಿರುವವರು. ಅದರಲ್ಲಿಯೂ ಈ ವಿಷಯ ವಿವಾದ ಆದರೆ ಅದು ಮೊಯ್ದೀನ್ ಬಾವ ಅವರ ರಾಜಕೀಯ ಜೀವನದ ಕೊನೆಯ ತಪ್ಪು ಆಗಬಹುದು ಎಂದು ಯಾರಿಗಾದರೂ ಡೌಟು ಬಂದೇ ಬರುತ್ತದೆ.
ಇನ್ನು ಕೆಲವು ಭಾರತೀಯ ಜನತಾ ಪಾರ್ಟಿಯವರು ಮೊಯ್ದೀನ್ ಬಾವ ಅವರಿಗೆ ಧೈರ್ಯ ಇದ್ದರೆ ಮುಸಲ್ಮಾನರ ಹಾಡಿನ ಸಂಗೀತವನ್ನು ತಮ್ಮ ಪ್ರಚಾರಕ್ಕೆ ಬಳಸಲಿ ಎನ್ನುತ್ತಿದ್ದಾರೆ. ಬಹುಶ: ಅಂತಹ ರಿಸ್ಕ್ ಮೊಯ್ದೀನ್ ಬಾವ ತೆಗೆದುಕೊಳ್ಳಲು ಹೋಗುವುದಿಲ್ಲ. ಹಿಂದೂಗಳಾದರೆ ಒಂದು ಪ್ರತಿಭಟನೆ ಮಾಡುತ್ತಾರೆ. ಹೆಚ್ಚೆಂದರೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ. ದೂರನ್ನು ಸರಿಯಾಗಿ ವಿಚಾರಿಸಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರೆ ಮುಗಿಯಿತು. ಯಾಕೆಂದರೆ ರಾಜ್ಯದಲ್ಲಿ ಇರುವುದು ತಮ್ಮದೇ ಸರಕಾರ. ಹೇಗೂ ನಡೆಯುತ್ತೆ. ಅದೇ ಮುಸಲ್ಮಾನರ ಹಾಡಿನ ಸಂಗೀತವನ್ನು ಬಳಸಿದ್ದರೆ ಮೊಯ್ದೀನ್ ಬಾವ ವಿರುದ್ಧ ಪತ್ವಾ ಹೊರಡುತ್ತದೆ. ಮೊಯ್ದೀನ್ ಬಾವ ವಿರುದ್ಧ ಮತ ನೀಡಿ ಎಂದು ಅವರ ಧರ್ಮಬೋಧಕರು ಹೇಳಿದರೆ ಮುಗಿಯಿತು, ಮೊಯ್ದೀನ್ ಬಾವ ರಾಜಕೀಯ ಜೀವನ ಆವತ್ತೆ ಮುಗಿಯುತ್ತದೆ.
ಒಂದು ವೇಳೆ ಮೊಯ್ದೀನ್ ಬಾವ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇ ನಿಜವಾಗಿದ್ದರೆ ಇಂತಹ ಚೀಪ್ ಗಿಮಿಕ್ಸ್ ಅವರಿಗೆ ಅಗತ್ಯ ಇರುವುದಿಲ್ಲ. ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ತಮ್ಮ ಸ್ವಅಭಿವೃದ್ಧಿ ಮಾಡಿದವರನ್ನು ಮರೆಯುವುದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಿದವರನ್ನು ಕೈ ಬಿಡುವುದಿಲ್ಲ. ಅದೇ ಚುನಾವಣೆಯ ಸಂದರ್ಭದಲ್ಲಿ ವೇಷ ಹಾಕಿ ಪೋಸ್ ಕೊಡುವವರನ್ನು ನಂತರ ಎಲ್ಲಿಡಬೇಕೋ ಅಲ್ಲಿಯೇ ಇಡುತ್ತಾರೆ. ಆ ನಿಟ್ಟಿನಲ್ಲಿ ಶಾಸಕ ಮೊಯ್ದೀನ್ ಬಾವ ಅವರನ್ನು ಮತದಾರರು ಎಲ್ಲಿಡುತ್ತಾರೆ? ಕಾಲವೇ ಉತ್ತರ ನೀಡಲಿದೆ!
Leave A Reply