ಲೋಬೋ ಅವರಿಗೆ ಸಿದ್ಧರಾಮಯ್ಯ, ರಮಾನಾಥ ರೈ ಅವರಂತಹ ನಾಯಕರು ಬೇಡವಾದರೆ!!
ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಂಸ್ಕೃತಿ ಇದೆ. ಅವರ ಪಕ್ಷದ ಯಾವುದೇ ಜನಪ್ರತಿನಿಧಿಯಾಗಲಿ, ಪದಾಧಿಕಾರಿಯಾಗಲಿ ತಮ್ಮ ಯಾವುದಾದರೂ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಕುವಾಗ ತಮ್ಮ ಪಕ್ಷದ ಉನ್ನತ ನಾಯಕರಿಂದ ಹಿಡಿದು ತನ್ನ ಗಾಡ್ ಫಾದರ್ ತನಕ ಪ್ರತಿಯೊಬ್ಬ ನಾಯಕನ ಮುಖವನ್ನು ಹಾಕಿಯೇ ಪ್ರಚಾರ ಮಾಡುತ್ತಾರೆ. ಪಕ್ಷದ ಚಿನ್ನೆಯಾದ ಹಸ್ತದ ಗುರುತು ಮರೆತುಬಿಡುವ ಚಾನ್ಸ್ ಇಲ್ಲ.
ಒಂದಿಷ್ಟು ವರ್ಷಗಳ ಹಿಂದೆ ಇಂದಿರಾಗಾಂಧಿಯವರ ಫೋಟೋ ಹೋರ್ಡಿಂಗ್ ನ ಟಾಪ್ ನಲ್ಲಿ ಪ್ರಥಮವಾಗಿ ಕಾಣುತ್ತಿತ್ತು. ನಂತರ ಕ್ರಮಪ್ರಕಾರವಾಗಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಾಲಿ ಮುಖ್ಯಮಂತ್ರಿಯ ಫೋಟೋ, ಎಸ್ ಎಂ ಕೃಷ್ಣ, ಧರಂ ಸಿಂಗ್, ಜನಾರ್ಧನ ಪೂಜಾರಿ, ಮಲ್ಲಿಕಾರ್ಜುನ್ ಖರ್ಗೆ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಲಿ, ರಮಾನಾಥ್ ರೈ ಹೀಗೆ ಹಂತಹಂತವಾಗಿ ನಾಯಕರ ಫೋಟೋಗಳು ಬಂದ ನಂತರ ಕೆಳಗೆ ದೊಡ್ಡದಾಗಿ ಆ ಹೋರ್ಡಿಂಗ್ ಹಾಕಿದ ಮುಖಂಡರ ಫೋಟೋ, ಉದ್ದೇಶ ಎಲ್ಲವನ್ನು ಕಾಣಸಿಗುತ್ತಿತ್ತು. ಇದು ಕಾಂಗ್ರೆಸ್ ಸಂಸ್ಕೃತಿ. ಈಗ ಎಸ್ ಎಂ ಕೃಷ್ಣ ಕಾಂಗ್ರೆಸ್ಸಿನಲ್ಲಿ ಇಲ್ಲದೆ ಇರುವುದರಿಂದ ಅವರ ಫೋಟೋ ಹಾಕುವ ಅವಶ್ಯಕತೆ ಇರುವುದಿಲ್ಲ. ಆದರೆ ಉಳಿದವರ ಫೋಟೋ ಹಾಕಲೇಬೇಕು. ಈ ಮೂಲಕ ಅವರು ತಮ್ಮ ನಾಯಕರನ್ನು ಸ್ಮರಿಸುವ, ಅವರು ಪಕ್ಷಕ್ಕಾಗಿ ಮಾಡಿದ ಸೇವೆಯನ್ನು ಗೌರವಿಸುವ ಕೆಲಸ ಮಾಡಲೇಬೇಕು.
ಲೋಬೋ ಹೋರ್ಡಿಂಗ್ ನಲ್ಲಿ ತಾವೇ ಎಲ್ಲ..
ಆದರೆ ಕಳೆದ ಕೆಲವು ತಿಂಗಳುಗಳಿಂದ ಮಂಗಳೂರು ನಗರ ದಕ್ಷಿಣದಲ್ಲಿ ಅನೇಕ ಕಡೆ ಶಾಸಕ ಜೆ ಆರ್ ಲೋಬೋ ಅವರು ತಮ್ಮ ಫುಲ್ ಸ್ಕೇಪ್ ಕೈ ಮುಗಿದ ಫೋಟೋ ಹಾಕಿ ಹೋರ್ಡಿಂಗ್ ನಿಲ್ಲಿಸಿದ್ದಾರೆ. ಅದರಲ್ಲಿ ಮೇಲೆ ಒಂದಿಷ್ಟು ಯೋಜನೆಗಳ ಫೋಟೋ ಹಾಕಿ ತಮ್ಮನ್ನು ತಾವು ಅಭಿವೃದ್ಧಿಯ ಹರಿಕಾರ ಅದು ಇದು ಎಂದು ಹೊಗಳಿಸಿಕೊಂಡಿದ್ದಾರೆ. ಹೋರ್ಡಿಂಗ್ ಕೆಳಗೆ ಎರಡು ಮೂರು ಕಾಂಗ್ರೆಸ್ಸಿಗರ ಫೋಟೋ ಹಾಕಿ, ಹೆಸರು ಬರೆದು ಅಭಿಮಾನಿಗಳು ಹಾಕಿಸಿರುವುದು ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ. ಯಾರಾದರೂ ಹೊಸಬರು ಸಡನ್ನಾಗಿ ಆ ಫೋಟೋ ನೋಡುತ್ತಿದ್ದರೆ ಮಂಗಳೂರು ನಗರ ದಕ್ಷಿಣದಲ್ಲಿ ಕಳೆದ ಐದು ವರ್ಷ ಶಾಸಕರಾಗಿರುವ ವ್ಯಕ್ತಿ ಲೋಬೋ ಅವರು ಕಾಂಗ್ರೆಸ್ ಪಕ್ಷದವರು ಎಂದು ಅಂದುಕೊಳ್ಳಲು ಚಾನ್ಸೆ ಇಲ್ಲ. ಯಾಕೆಂದರೆ ಆ ಬೃಹದಾಕಾರದ ಹೋರ್ಡಿಂಗ್ ನಲ್ಲಿ ಎಲ್ಲಿಯೂ ಕಾಂಗ್ರೆಸ್ಸಿನ ಒಂದು ಚಿನ್ನೆ ಕೂಡ ಇಲ್ಲ. ಒಬ್ಬನೆ ಒಬ್ಬ ಕಾಂಗ್ರೆಸ್ಸಿನ ನಾಯಕನ ಫೋಟೋ ಇಲ್ಲ. ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರೇ ಒಬ್ಬ ಮುಖಂಡರ ಮುಖ ಕೂಡ ಅದರಲ್ಲಿ ಕಾಣಿಸುವುದಿಲ್ಲ. ಇಡೀ ಹೋರ್ಡಿಂಗ್ ನಲ್ಲಿ ಕಾಣುವುದು ಒನ್ಲೀ ಜೆಆರ್ ಲೋಬೋ.
ಒಂದೆರಡು ಹೋರ್ಡಿಂಗ್ ಅರ್ಜೆಂಟಲ್ಲಿ ಹಾಕುವಾಗ ಒಂದಿಬ್ಬರು ನಾಯಕರ ಫೋಟೋ ಮಿಸ್ ಆದರೂ ಚಡಪಡಿಸುವ ಕಾಂಗ್ರೆಸ್ಸಿಗರಿದ್ದಾರೆ. ಒಮ್ಮೆ ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸಭೆ ನಡೆಯುವಾಗ ಹಿಂದೆ ಒಬ್ಬ ದೊಡ್ಡ ನಾಯಕನ ಫೋಟೋ ಮಿಸ್ ಆದದ್ದಕ್ಕೆ ಇಡೀ ಬ್ಯಾನರ್ ಬದಲಾಯಿಸಲಾಗಿತ್ತು. ಉತ್ತರ ಕರ್ನಾಟಕದಲ್ಲಿ ಬ್ಯಾನರ್, ಹೋರ್ಡಿಂಗ್ ಗಳಲ್ಲಿ ತಮ್ಮ ತಮ್ಮ ನಾಯಕನ ಫೋಟೋ ಇಲ್ಲದಿದ್ದರೆ ಮಾರಾಮಾರಿ ಆಗುತ್ತದೆ. ಹಾಗಾದರೆ ಮಂಗಳೂರು ನಗರ ದಕ್ಷಿಣದ ಶಾಸಕರಿಗೆ ತಮ್ಮ ರಾಷ್ಟ್ರ, ರಾಜ್ಯಮಟ್ಟದ ನಾಯಕರ ಫೋಟೋ ಹೋರ್ಡಿಂಗ್ ನಲ್ಲಿ ಹಾಕಲು ನಾಚಿಕೆ ಆಗುತ್ತದಾ? ಅಥವಾ ಜೆ ಆರ್ ಲೋಬೋ ಒಬ್ಬರಿಗೆ ಮಾತ್ರ ಯಾಕೆ ಬೇರೆಯವರ ಫೋಟೋ ಹಾಕಬೇಕು ಎನ್ನುವ ಅಹಂ ತಲೆಯಲ್ಲಿ ತುಂಬುತ್ತಿದೆಯಾ?
ರೈಗಳಿಗೆ ಈ ಬಗ್ಗೆ ಕೋಪ ಇದೆ…
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಅವರು ಒಂದು ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು-” ನಾವೆಲ್ಲ ಮೊದಲು ಕಾಂಗ್ರೆಸ್ಸಿಗರಾಗಿ ನಂತರ ಶಾಸಕರಾಗಿರುವುದು. ಆದರೆ ಇತ್ತೀಚೆಗೆ ಕೆಲವರು ಮೊದಲು ಶಾಸಕರಾಗಿ ನಂತರ ಕಾಂಗ್ರೆಸ್ಸಿಗರಾಗಿದ್ದಾರೆ” ಈ ಮಾತನ್ನು ಅವರು ಹೇಳಿರುವುದು ಜೆ ಆರ್ ಲೋಬೋ ಅವರಿಗೆ ಎಂದು ಪ್ರತ್ಯೇಕವಾಗಿ ಹೇಳಬೇಕಂತಿಲ್ಲ. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇರವಾಗಿ ಕಾಂಗ್ರೆಸ್ಸಿಗೆ ಬಂದು ತಕ್ಷಣ ಶಾಸಕರಾದದ್ದು ಲೋಬೋ ಅವರು ಮಾತ್ರ. ಅವರು ಬಿಟ್ಟರೆ ಶಕುಂತಳಾ ಶೆಟ್ಟಿ. ಶಕುಂತಳಾ ಶೆಟ್ಟಿಯವರಾದರೆ ಕನಿಷ್ಟ ರಾಜಕಾರಣದಲ್ಲಿ ಏಳು ಬೀಳು ಕಂಡಿದ್ದಾರೆ. ಆದರೆ ಲೋಬೋ ಅವರದ್ದು ಹಾಗಲ್ಲ. ಇಂತಹ ಅವಕಾಶ ಯಾರಿಗಾದರೆ ಸಿಗುವುದು ಅಪರೂಪದಲ್ಲಿ ಅಪರೂಪ. ಹಾಗಿರುವಾಗ ತಮ್ಮನ್ನು ಬರಮಾಡಿಕೊಂಡು ಶಾಸಕರನ್ನಾಗಿ ಮಾಡಿದ ಪಕ್ಷಕ್ಕೆ ಅವರು ಚಿರಋಣಿಯಾಗಬೇಕಿತ್ತು. ಆದರೆ ಲೋಬೋ ಅವರಿಗೆ ಅದ್ಯಾವುದೂ ನೆನಪಿದ್ದಂತೆ ಕಾಣುತ್ತಿಲ್ಲ. ಮಂಗಳೂರು ನಗರ ದಕ್ಷಿಣದಲ್ಲಿ ತಮ್ಮಿಂದಲೇ ಕಾಂಗ್ರೆಸ್ಸಿಗೆ ಅಸ್ತಿತ್ವ ಬಂದಿರುವುದು ಎನ್ನುವ ಭಾವನೆ ಅವರ ಮನಸ್ಸಿಗೆ ಬಂದಿರುವುದು ಸ್ಪಷ್ಟವಾಗಿದೆ.
ಒಂದು ಕಡೆ ಹಿಂದಿನ ಶಾಸಕ ಯೋಗೀಶ್ ಭಟ್ಟರ ಯೋಜನೆಗಳನ್ನು ತಮ್ಮದು ಎಂದು ಹೇಳಿ ಹೋರ್ಡಿಂಗ್ ಗಳಲ್ಲಿ ಬರೆಸಿಕೊಂಡಿರುವ ಲೋಬೋ ಅವರು ನೆಪಮಾತ್ರಕ್ಕಾದರೂ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಫೋಟೋ ಹಾಕಲೇ ಇಲ್ಲ. ಹಾಗಾದರೆ ಸಿದ್ಧರಾಮಯ್ಯ ಕೂಡ ಲೋಬೋ ಅವರಿಗೆ ಬೇಡವಾದರಾ? ಅವರ ಮುಖ ಹಾಕಿದರೆ ವೋಟ್ ಬರುವುದಿಲ್ಲ ಎನ್ನುವ ಅಹಂ ಇದೆಯಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದರೆ ಬಿ ರಮಾನಾಥ್ ರೈ. ಅವರು ಕಾಂಗ್ರೆಸ್ಸಿಗೆ ದುಡಿದ ಅಂದಾಜು ಕೂಡ ಲೋಬೋ ಅವರಿಗೆ ಇರಲಿಕ್ಕಿಲ್ಲ. ಅವರು ಕೂಡ ಲೋಬೋ ಅವರಿಗೆ ಬೇಡವಾದರೆ? ಐವನ್ ಡಿಸೋಜಾ ಅವರ ಫೋಟೋ ಹಾಕದಿದ್ದರೆ ಅವರು ಪ್ರತಿಸ್ಪರ್ಧಿ ಎಂದು ಹಾಕಿಲ್ಲ ಎಂದು ಅಂದುಕೊಳ್ಳಬಹುದು. ಆದರೆ ಸಿದ್ಧರಾಮಯ್ಯ, ರೈ, ಖಾದರ್, ಆಸ್ಕರ್ ಎಲ್ಲರಿಗಿಂತ ಮೀರಿಸಿದ ನಾಯಕರೇ ಲೋಬೋ? ಲೋಬೋ ಅವರ ಈ ಮನಸ್ಥಿತಿ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಸಿದ್ಧರಾಮಯ್ಯ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಲೋಬೋ ಅವರನ್ನು ಅಷ್ಟಕಷ್ಟೇ ನಡೆಸಿಕೊಂಡರು ಎಂದು ಹೇಳಲಾಗುತ್ತದೆ. ಅದಕ್ಕೆ ಇವತ್ತು ರಾಹುಲ್ ಗಾಂಧಿ ಬಂದಾಗ ಎಚ್ಚೆತ್ತುಕೊಂಡಿರುವ ಲೋಬೋ ಅವರು ತಾವು ನಿಲ್ಲಿಸಿರುವ ಹೋರ್ಡಿಂಗ್ ನಲ್ಲಿ ಎಲ್ಲಾ ನಾಯಕರ ಫೋಟೋ ಹಾಕಿಸಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತು ಎಂದರೆ ಇದು!
Leave A Reply