ಭಾರತದ ಪ್ರಭಾವಕ್ಕೆ ಬೆದರಿದ ಚೀನಾ, ಗಡಿಯಲ್ಲಿ ಯಾವುದೇ ಪ್ರಚೋದನಾತ್ಮಕ ಚಟುವಟಿಕೆ ಇಲ್ಲ!
ದೆಹಲಿ: ಕಳೆದ ವರ್ಷ ಭಾರತದ ಡೋಕ್ಲಾಂ ಗಡಿಯಲ್ಲಿ ಸುಮಾರು 73 ದಿನಗಳವರೆಗೆ ಸೈನ್ಯವನ್ನು ನಿಯೋಜಿಸಿ ಉದ್ಧಟತನ ಮಾಡಿದ್ದ ಚೀನಾ, ಈಗ ಭಾರತದ ಪ್ರಭಾವದಿಂದ ಪಾಠ ಕಲಿತಿದ್ದು, ಗಡಿಯಲ್ಲಿ ಯಾವುದೇ ಪ್ರಚೋದನಾತ್ಮಕ, ಉದ್ಧಟತನದ ಚಟುವಟಿಕೆ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.
ಡೋಕ್ಲಾಂ ಗಡಿ ಸಂಘರ್ಷದ ಬಳಿಕ ಎಚ್ಚೆತ್ತುಕೊಂಡಿರುವ ಚೀನಾ, ಇತ್ತೀಚೆಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿಯಾಗಲಿ, ಸೈನ್ಯ ನಿಯೋಜನೆಯಾಗಲಿ, ಗಡಿ ರೇಖೆ ಉಲ್ಲಂಘಿಸುವುದಾಗಲಿ ಮಾಡಿಲ್ಲ. ಆದರೂ ಇಡೀ ಗಡಿ ಭಾರತದ ಮೇಲ್ವಿಚಾರಣೆಯಲ್ಲಿದ್ದು, ವಿಡಿಯೋ ಸೇರಿ ಹಲವು ತಾಂತ್ರಿಕತೆ ಬಳಸಿ ಗಸ್ತು ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಡೀ ಗಡಿ ಪ್ರದೇಶ ಭಾರತದ ಕಣ್ಗಾವಲಿನಲ್ಲಿದ್ದು, ಹಲವು ತಂತ್ರಜ್ಞಾನ ಬಳಸಿದೆ. ಇತ್ತೀಚೆಗೆ ಜಂಫೇರಿ ರಿಡ್ಜ್ ಪ್ರದೇಶದಲ್ಲಿ ಚೀನಾ ನೂತನ ರಸ್ತೆ ಕಾಮಗಾರಿ ನಡೆಸಿದೆ ಎಂಬ ಮಾಹಿತಿ ಸುಳ್ಳಾಗಿದ್ದು, ಭಾರತದ ಹಾದಿ ತಪ್ಪಿಸಲು ಹೀಗೆ ಮಾಡಲಾಗಿದೆ. ಗಡಿಯಲ್ಲಿ ಚೀನಾ ಕಳೆದ ತಿಂಗಳು ಯಾವುದೇ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಉನ್ನತ ಮೂಲಗಳು ದೃಢಪಡಿಸಿವೆ.
ಪ್ರಸ್ತುತ ನಮ್ಮ ಗಡಿ ರೇಖೆ ನಿಯಮ ಭದ್ರವಾಗಿದ್ದು, ಚೀನಾ ಉಲ್ಲಂಘಿಸಿಲ್ಲ. ಜಂಫೇರಿ ರಿಡ್ಜ್ ಹಾಗೂ ತೋರ್ಸಾ ನಲ್ಲಾ ಎಂಬಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಕಳೆದ ವರ್ಷ ತೋರ್ಸಾ ನಲ್ಲಾ ಪ್ರದೇಶದಲ್ಲಿ ಚೀನಾ ಕಾಮಗಾರಿ ನಡೆಸುವುದನ್ನು ತಡೆದಿದ್ದೆವು. ಆದರೆ ಈ ಬಾರಿ ಯಾವುದೇ ಕಾಮಗಾರಿ ನಡೆಯಲು ಭಾರತ ಬಿಟ್ಟಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಆಗಾಗ ಮಾಡುವ ಉಪಟಳದಂತೆ, ಚೀನಾ ಸಹ ಮಾಡಲು ಮುಂದಾಗಿ ಸೇನೆಯನ್ನು ನಿಯೋಜಿಸಿತ್ತಾದರೂ ಭಾರತದ ಪ್ರಭಾವಕ್ಕೆ ಮಣಿದು ಈಗ ತೆಪ್ಪಗೆ ಇರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply