ಯೋಗಿ ಆದಿತ್ಯನಾಥರ ಆಡಳಿತಕ್ಕೆ ವರ್ಷ ಒಂದು, ಸಾಧಿಸಿದ್ದು ನೂರೊಂದು!
ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗ ಕೆಲವು ಕೊಂಕು ನುಡಿದರು. ಈ ಯೋಗಿ ಹೇಗೆ ಸಮರ್ಥವಾಗಿ ರಾಜ್ಯವಾಳಬಲ್ಲರು ಎಂದು ಮೂಗು ಮುರಿದರು. ಆದರೆ ಈ ವರ್ಷದ ಮಾರ್ಚ್ 19ಕ್ಕೆ ಯೋಗಿ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ.
ಟೀಕಾಕಾರರ ಟೀಕೆಗಳನ್ನು ಲೆಕ್ಕಿಸದೆ ಯೋಗಿ ಆದಿತ್ಯನಾಥರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. ಹಲವು ಸುಧಾರಣೆ ಜಾರಿಗೆ ತಂದಿದ್ದಾರೆ. ಹಾಗಾದರೆ ಯೋಗಿ ಆದಿತ್ಯನಾಥರು ಸಿಎಂ ಆದ ಬಳಿಕ ಉತ್ತರ ಪ್ರದೇಶದಲ್ಲಿ ತಂದ ಪ್ರಮುಖ ಸುಧಾರಣೆಗಳಾವವು, ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳಾವವು? ಪ್ರಮುಖ ನಿರ್ಧಾರಗಳಾವವು? ಹೇಗೆ ಉತ್ತರ ಪ್ರದೇಶ ಬದಲಾಗಿದೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
ಅಪರಾಧ ನಿಗ್ರಹ
ಯಾವುದೇ ಒಂದು ರಾಜ್ಯ ಅಪರಾಧ ನಿಗ್ರಹ, ಕಾನೂನು ಸುವ್ಯವಸ್ಥೆ ಕಾಪಾಡಿದರೆ, ಆ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೇ ಅರ್ಥ. ಇದನ್ನು ಮನಗಂಡ ಯೋಗಿ ಆದಿತ್ಯನಾಥರು, ಆಡಳಿತಕ್ಕೆ ಬರುತ್ತಲೇ ಅಪರಾಧ ಪ್ರಕರಣಗಳ ನಿಗ್ರಹಕ್ಕೆ ಮುಂದಾದರು. ರೌಡಿಗಳ ಮಟ್ಟಹಾಕಲು ಕ್ರಮ ಕೈಗೊಂಡರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಇದುವರೆಗೆ ಭಯಾನಕ 40ಕ್ಕೂ ಅಧಿಕ ರೌಡಿಗಳನ್ನು ಎನ್ ಕೌಂಟರ್ ಮಾಡಲಾಗಿದೆ. ಸುಮಾರು 1294 ಬಾರಿ ಮಾಡಿದ ಎನ್ ಕೌಂಟರ್ ನಲ್ಲಿ ನೂರಾರು ರೌಡಿಗಳು ಗಾಯಗೊಂಡಿದ್ದಾರೆ. 3065 ರೌಡಿಗಳನ್ನು ಬಂಧಿಸಲಾಗಿದೆ. ಕೆಲವು ರೌಡಿಗಳಂತೂ ಪೊಲೀಸರ ಕ್ರಮಕ್ಕೆ ಹೆದರಿ ನಮಗೆ ಬೇಲ್ ನೀಡುವುದೇ ಬೇಡ, ಜೈಲಿನಲ್ಲೇ ಇರುತ್ತೇವೆ ಎಂದು ಮನವಿ ಮಾಡುವಷ್ಟರಮಟ್ಟಿಗೆ ರಾಜ್ಯದಲ್ಲಿ ಅಪರಾಧ ತಡೆಯಲಾಗಿದೆ. ಇದಕ್ಕೆಲ್ಲ ಯೋಗಿ ಆದಿತ್ಯನಾಥರು, ಪೊಲೀಸ್ ಇಲಾಖೆಗೆ ನೀಡಿದ ಸ್ವಾತಂತ್ರ್ಯವೇ ಕಾರಣವಾಗಿದೆ.
ಮಹಿಳೆಯರ ರಕ್ಷಣೆಯಲ್ಲಿ ಯೋಗಿ ಸರ್ಕಾರ ಮುಂದು
ದೇಶದ ಹಲವೆಡೆ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಇದರ ನಿಗ್ರಹಕ್ಕೆ ಮುಂದಾದ ಯೋಗಿ ಆದಿತ್ಯನಾಥರು, ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದ್ದಾರೆ. ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ಶಿಕ್ಷೆ ವಿಧಿಸಲು, ಬಂಧಿಸಲು ಪೊಲೀಸರಿಗೆ ಸ್ವಾತಂತ್ರ್ಯ ನೀಡಿದರು. ಇದುವರೆಗೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಸುಮಾರು 1.77 ಲಕ್ಷ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕ್ರಮ ಕೈಗೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ.
ಭೂಮಾಫಿಯಾ ತಡೆಗೆ ಯೋಗಿ ಕ್ರಮ
ರಾಜ್ಯದಲ್ಲಿ ದಟ್ಟವಾಗಿ ವ್ಯಾಪಿಸಿದ್ದ ಭೂ ಮಾಫಿಯಾ ತಡೆಗೆ ಯೋಗಿ ಆದಿತ್ಯನಾಥರು ಕ್ರಮ ಕೈಗೊಂಡಿದ್ದು, ಇದುವರೆಗೆ ಸುಮಾರು 2596 ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವಂತೆಯೂ ಯೋಗಿ ಸೂಚಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡಿದ ಮೊದಲ ಬಿಜೆಪಿ ಸರ್ಕಾರ
ಹೌದು, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರಗಳು ಯೋಚಿಸುತ್ತಿರುವಾಗಲೇ, 2018ರಲ್ಲಿ ರೈತರ ಸಾಲ ಮನ್ನಾ ಮಾಡಿದ ಮೊದಲ ಬಿಜೆಪಿ ಸರ್ಕಾರ ಎಂಬ ಖ್ಯಾತಿಗೆ ಭಾಜನರಾಗಿದ್ದು ಯೋಗಿ ಆದಿತ್ಯನಾಥರು. 2018ರ ಏಪ್ರಿಲ್ ನಲ್ಲಿ ಸುಮಾರು 86 ಲಕ್ಷ ರೈತರಿಗೆ ಅನುಕೂಲವಾಗುವ ದಿಸೆಯಲ್ಲಿ ಸುಮಾರು 36 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ, ಕಷ್ಟದಲ್ಲಿದ್ದ ರೈತರಿಗೆ ಯೋಗಿ ಆದಿತ್ಯನಾಥರು ನೆರವಾದರು. ಉತ್ತರ ಪ್ರದೇಶದ ಬಳಿಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲಾಯಿತು.
ಪರೀಕ್ಷಾ ವಿಧಾನ ಸುಧಾರಣೆ
ಯಾವುದೇ ರಾಜ್ಯದ ಬೌದ್ಧಿಕ ಸಂಪತ್ತು ಎಂದರೆ ಅಲ್ಲಿನ ವಿದ್ಯಾರ್ಥಿಗಳು. ಆದರೆ, ಅದೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಿ ಉತ್ತೀರ್ಣರಾದರೆ, ಅವರೇ ಮುಂದೆ ಸಮಾಜಕ್ಕೆ ಅಪಾಯವಾಗುತ್ತಾರೆ. ಇದನ್ನು ಅರಿತ ಯೋಗಿ ಆದಿತ್ಯನಾಥರು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಂಡರು. ಇದೊಂದೇ ಕಾರಣಕ್ಕೆ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೇ ಹಾಜರಾಗಲಿಲ್ಲ ಎಂದರೆ, ಅವರಿಗೆ ಯಾವ ರೀತಿಯಲ್ಲಿ ನಕಲು ಮಾಡದಂತೆ ತಡೆದಿರಬೇಕು, ಯೋಚಿಸಿ.
ಅಷ್ಟೇ ಅಲ್ಲ, ಅಕ್ರಮ ಕಸಾಯಿಖಾನೆಗಳ ಮುಚ್ಚಿಸುವಿಕೆ, ಮದರಸಾಗಳಲ್ಲಿ ವೈಜ್ಞಾನಿಕ ಶಿಕ್ಷಣ, ಅವುಗಳ ಅಭಿವೃದ್ಧಿಗೆ ಅನುದಾನ, ಅಕ್ರಮ ಮದರಸಾಗಳ ನೋಂದಣಿ ರದ್ದು ಸೇರಿ ಯೋಗಿ ಆದಿತ್ಯನಾಥರು ನೂರಾರು ಯೋಜನೆ, ಕ್ರಮ, ಸುಧಾರಣೆ ಜಾರಿಗೆ ತಂದು ಉತ್ತರ ಪ್ರದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಕಾಂಗ್ರೆಸ್ಸಿನ ಗೂಂಡಾಗಳನ್ನೇ ನಿಗ್ರಹಿಸಲು ಆಗದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಗಿ ಆದಿತ್ಯನಾಥರನ್ನೇ ಟೀಕಿಸುವುದು ಬಾಲಿಶವೆನಿಸುತ್ತದೆ. ಯೋಗಿ ಆದಿತ್ಯನಾಥರು ಮತ್ತಷ್ಟು ಸುಧಾರಣೆ ಮಾಡಲಿ.
Leave A Reply