ಯಾಸ್ಮಿನ್ ಮೊಹಮ್ಮದ್ ಗೆ ಶಿಕ್ಷೆ ಪ್ರಕಟ, ಐಸಿಸ್ ಗೂ, ಭಾರತಕ್ಕೂ ನಂಟು ಅಷ್ಟೊಂದು ಬಲವಾಗಿದೆಯಾ?
ತಿರುವನಂತಪುರ: ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಯಾಸ್ಮಿನ್ ಮೊಹಮ್ಮದ್ ಜಹೀರ್ ಎಂಬಾಕೆಗೆ ಕೇರಳದ ಕೊಚ್ಚಿ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಭಾರತ ಹಾಗೂ ಐಸಿಸ್ಸಿಗೂ ನಂಟಿದೆಯಾ ಎಂಬ ಅನುಮಾನ ದಟ್ಟವಾಗಿವೆ.
ಅಷ್ಟೇ ಅಲ್ಲ, ಯಾಸ್ಮಿನ್ ಮೊಹಮ್ಮದ್ ಜಹೀರ್ ಐಸಿಸ್ ಜತೆ ನಂಟು ಹೊಂದಿರುವ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೂ ಭಾಜನವಾಗಿರುವುದು ಜಾಲದ ಹಿಂದಿನ ಪದರುಗಳ ಕುರಿತು ಭೀತಿ ಹುಟ್ಟಿಸಿದೆ.
ಬಿಹಾರದ ಈಕೆ ಕಾಸರಗೋಡಿನಿಂದ 15 ಜನರನ್ನು ಐಸಿಸ್ ಸಂಘಟನೆಗೆ ನೇಮಕ ಮಾಡಿದ ಆರೋಪದಲ್ಲಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 2016ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಆಫ್ಘಾನಿಸ್ತಾನಕ್ಕೆ ತೆರಳುವಾಗ ತಡೆಹಿಡಿದು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ 15 ಜನರನ್ನು ನೇಮಿಸಿದ್ದಾಳೆ ಎಂಬುದು ತಿಳಿದುಬಂದಿತ್ತು.
ಯಾಸ್ಮಿನ್, ರಷಿ ಅಬ್ದುಲ್ಲಾ ಎಂಬಾತನ ಎರಡನೇ ಪತ್ನಿಯಾಗಿದ್ದು, ಈಕೆಯ ಗಂಡ ಸಹ ಐಸಿಸ್ ಜತೆ ನಂಟು ಹೊಂದಿರುವ ಆರೋಪ ಹೊಂದಿದ್ದಾನೆ. ಕೇರಳದ 20 ಯುವಕರನ್ನು ಐಸಿಸ್ ಸಂಘಟನೆಗೆ ಸೇರಿಸಿ ನಾಪತ್ತೆಯಾಗಿರುವ ಈತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಪ್ರಸ್ತುತ ಯಾಸ್ಮೀನ್ ಗೆ ಭಾರತೀಯ ದಂಡ ಸಂಹಿತೆ 120, 125 ಬಿ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯಿದೆ 38, 39 ಹಾಗೂ 40ನೇ ಕಲಂ ಅನ್ವಯ ಏಳು ವರ್ಷ ಜೈಲು ಹಾಗೂ ಇಪ್ಪತ್ತೈದು ಸಾವಿರ ರೂಪಾಯಿ ದಂಡ ವಿಧಿಸಿದೆ.
ಒಟ್ಟಿನಲ್ಲಿ ಉಗ್ರರ ಜತೆ ನಂಟು ಹೊಂದಿರುವ ಪ್ರಕರಣದಲ್ಲಿ ಯಾಸ್ಮಿನ್ ಗೆ ಜೈಲು ಶಿಕ್ಷೆ ವಿಧಿಸಿರುವುದು ಹಾಗೂ ಈಕೆಯ ಗಂಡನೂ ಐಸಿಸ್ ಜತೆ ನಂಟು ಹೊಂದಿರುವ ಕುರಿತು ಪ್ರಕರಣ ಎದುರಿಸುತ್ತಿದ್ದು, ಕೇರಳದಲ್ಲಿ ನಿಧಾನವಾಗಿ ಐಸಿಸ್ ಬೇರುಗಳು ಒಳಹೋಗುತ್ತಿವೆಯಾ ಎಂಬ ಅನುಮಾನ ಹುಟ್ಟುಹಾಕಿದೆ.
Leave A Reply