ಕಾಶಿ ವಿಶ್ವನಾಥ ದೇವಾಲಯದಲ್ಲಿ ಭಕ್ತರಂತೆ ಕಾಣಲಿದ್ದಾರೆ ಪೊಲೀಸರು, ಧೋತಿ, ಕುರ್ತಾ ಅವರಿಗೆ ಸಮವಸ್ತ್ರ!
![](https://tulunadunews.com/wp-content/uploads/2018/03/kashi.jpg)
ವಾರಣಾಸಿ: ಪೊಲೀಸರ ಸಮವಸ್ತ್ರ ಎಂದರೆ ಹೇಗಿರುತ್ತದೆ? ಖಾಕಿ ಖದರ್ರು, ಶ್ರೇಣಿಗೆ ತಕ್ಕ ಸ್ಟಾರು, ಸೊಂಟಕ್ಕೆ ದಪ್ಪದೊಂದು ಬೆಲ್ಟು, ಕಾಲಿಗೆ ಶೂ, ತಲೆಗೊಂದು ಟೋಪಿ, ಟೊಂಕಕ್ಕೊಂದು ಗನ್ನು.. ಅದು ಪೊಲೀಸರ ಗತ್ತು ಎಂದರೆ…
ಆದರೆ ಕಾಶಿಯ ಹಿಂದೂಗಳ ಪವಿತ್ರ ದೇವಾಲಯವಾದ ವಿಶ್ವನಾಥ ದೇವಾಲಯದಲ್ಲಿ ಇನ್ನುಮುಂದೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಈ ಯಾವ ಉಡುಪಿನಲ್ಲೂ ಮಿಂಚುವುದಿಲ್ಲ. ಧಾರ್ಮಿಕ ಕ್ಷೇತ್ರ ಇನ್ನು ಪೊಲೀಸರ ತಂಗುದಾಣವಾದಂತೆ ಭಾಸವಾಗುವುದಿಲ್ಲ.
ಹೌದು, ಕಾಶಿಯ ವಿಶ್ವನಾಥ ದೇವಾಲಯದ ಗರ್ಭಗುಡಿಯ ಸುತ್ತ ದಿನದ 24 ಗಂಟೆಯೂ ಭದ್ರತೆ ಒದಗಿಸುವ ಪೊಲೀಸರು ಇನ್ನು ಮುಂದೆ ಸಾಂಪ್ರದಾಯಿಕ ಉಡುಪಾದ ಧೋತಿ-ಕುರ್ತಾ ಧರಿಸಲಿದ್ದಾರೆ.
ದಿನದಲ್ಲಿ ಮೂರು ಪಾಳಿಯಂತೆ ಗರ್ಭಗುಡಿಯ ಸುತ್ತಲೂ ಪೊಲೀಸರು 18 ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರೂ ಧೊತಿ ಹಾಗೂ ಕುರ್ತಾ ಧರಿಸಿ ಭದ್ರತೆ ನೀಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಬೂಟು, ಬೆಲ್ಟ್ ಹಾಗೂ ಸಮವಸ್ತ್ರ ಧರಿಸಿ ಗರ್ಭಗುಡಿಯ ಪ್ರವೇಶ ಮಾಡುತ್ತಿರುವುದನ್ನು ಕಂಡು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದ್ದು, 54 ಪೊಲೀಸರಿಗೂ ಪೊಲೀಸ್ ಇಲಾಖೆಯೇ ಧೋತಿ, ಕುರ್ತಾ ವಿತರಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಬಾಂಬ್ ದಾಳಿ ಬೆದರಿಕೆ ಇದ್ದ ಕಾರಣ ದಿನದ 24 ಗಂಟೆಯೂ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಇನ್ನು ಈ ಪೊಲೀಸರೂ ಭಕ್ತರ ಹಾಗೆಯೇ ಕಂಡರೂ ಅಚ್ಚರಿಯಿಲ್ಲ.
Leave A Reply