ಮೇವಾನಿ ಬೆಂಬಲಿಗರಿಂದ ಅಂಬೇಡ್ಕರ್ ಜಯಂತಿ ಆಚರಿಸಲು ಅಡ್ಡಿ
ಅಹಮದಾಬಾದ್: ದೇಶಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಅಹಮದಾಬಾದ್ ನಲ್ಲಿ ಪುತ್ಥಳಿಗೆ ಪುಷ್ಪಮಾಲೆ ಅರ್ಪಿಸಲು ಆಗಮಿಸಿದ್ದ ಬಿಜೆಪಿ ಸಂಸದರನ್ನು ಗುಜರಾತ್ ಶಾಸಕ ಜಗ್ನೇಶ್ ಮೇವಾನಿ ಬೆಂಬಲಿಗರು ತಡೆ ಒಡ್ಡುವ ಮೂಲಕ ಅಡ್ಡಿಪಡಿಸಿದ್ದಾರೆ. ಈ ವೇಳೆ ಮೇವಾನಿ ಬೆಂಬಲಿಗರು ಮತ್ತು ಬಿಜೆಪಿ ಸಂಸದರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಬಿಜೆಪಿ ಸಂಸದ ಕಿರಿತ್ ಸೋಲಂಕಿ ಅಂಬೇಡ್ಕರರ ಪ್ರತಿಮೆಗೆ ಪುಷ್ಪಮಾಲೆ ಹಾಕಲು ಮುಂದಾದಾಗ ಮೇವಾನಿ ಬೆಂಬಲಿಗರು ಗಲಭೆ ಎಬ್ಬಿಸಿದ್ದು, ಜಯಂತಿ ಆಚರಿಸಲು ಅಡ್ಡಿಪಡಿಸಿದ್ದಾರೆ. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಗರದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮೇವಾನಿ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಮೇವಾನಿ “ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಗಲಭೆಗೆ ಕುಮ್ಮಕ್ಕು ನೀಡಲು ಜೆಎನ್‌ಯು ಮಂದಿಯೊಂದಿಗೆ ಮೇವಾನಿ ಕೂಡಾ ಪ್ರಚೋದನಾಕಾರಿ ಹೇಳಿಕೆ ನೀಡಿ, ಈ ಕುರಿತು ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಗಲಭೆ ಸಂದರ್ಭ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೇವಾನಿ ಹಾಗೂ ಆತನ ತಂಡ ಯಾವುದೇ ಸಮಾರಂಭದಲ್ಲಿ ಮಾತನಾಡದಂತೆ ಮಹಾರಾಷ್ಟ್ರ ಪೊಲೀಸರು ನಿರ್ಬಂಧಿಸಿದ್ದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ನೋಡಿದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Leave A Reply