ಮೇ 12 ಕ್ಕೆ ಮತದಾರ ವೆಂಟಿಲೇಟರ್ ತೆಗೆದರೆ ಕಾಂಗ್ರೆಸ್ ಕಥೆ!
ಅನೇಕರು ನನ್ನತ್ರ ಕೇಳುತ್ತಿದ್ದಾರೆ, ಮೋದಿ ಬಂದ ನಂತರ ಹೇಗೆ? ಇದಕ್ಕೆ ಉತ್ತರ ಕೊಡಲು ತುಂಬಾ ಯೋಚಿಸಬೇಕಾಗಿಲ್ಲ. ಶನಿವಾರ ಸಾಯಂಕಾಲ ಸೂರ್ಯ ತನ್ನ ದಿನದ ಡ್ಯೂಟಿ ಮುಗಿಸಿ ಚಂದ್ರ ಕರ್ತವ್ಯಕ್ಕೆ ಬರುತ್ತಿದ್ದಂತೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕೇಳಿ ಬರುತ್ತಿದ್ದದ್ದು ಒಂದೇ ಶಬ್ದ “ಮೋದಿ, ಮೋದಿ, ಮೋದಿ” ನೀವು ಯಾವತ್ತಾದರೂ “ಸಿಂಗ್, ಸಿಂಗ್, ಸಿಂಗ್” ಎಂದು ಹತ್ತು ವರ್ಷ ಆಳ್ವಿಕೆ ಮಾಡಿದ್ದ ಮನಮೋಹನ ಸಿಂಗ್ ಹೆಸರನ್ನು ಜನ ಹೀಗೆ ಉದ್ಘರಿಸಿದ್ದನ್ನು ಕೇಳಿದ್ದಿರಾ? ಅಷ್ಟಕ್ಕೂ ಮನಮೋಹನ್ ಸಿಂಗ್ ಜಿಎಸ್ ಟಿ, ನೋಟ್ ಅಮಾನ್ಯೀಕರಣ ಸಹಿತ ಯಾವುದೇ ದೇಶಕ್ಕೆ ಒಳ್ಳೆಯದಾಗುವ ರಿಸ್ಕ್ ತೆಗೆದುಕೊಂಡಿರಲಿಲ್ಲ. ತ್ರಿವಳಿ ತಲಾಖ್ ನಿಷೇಧಿಸುವ ಧೈರ್ಯ ಮಾಡಿ ಮುಸ್ಲಿಂ ಪತ್ನಿ ಪೀಡಕ ಗಂಡಂದಿರನ್ನು ಎದುರು ಹಾಕಿಕೊಂಡಿರಲಿಲ್ಲ. 50 ಕೋಟಿ ಸಾಲ ಮಾಡಿದ ಯಾವುದೇ ಉದ್ಯಮಿ ದೇಶದಿಂದ ಹೊರಗೆ ಹೋಗುವ ಮೊದಲು ನೂರು ಅಡೆತಡೆ ದಾಟಿ ಹೋಗಬೇಕೆನ್ನುವ ನಿಯಮ ತಂದಿರಲಿಲ್ಲ. ಅಪ್ರಾಪ್ತ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ತಂದು ಹೆಣ್ಣುಮಕ್ಕಳಲ್ಲಿ ಧೈರ್ಯ ತುಂಬಿರಲಿಲ್ಲ. ಯಾವುದೇ ವೋಟ್ ಬ್ಯಾಂಕಿಗೆ ದಕ್ಕೆ ತರಬಲ್ಲ ನಿಯಮ, ಕಾನೂನು, ಸುಧಾರಣೆ ತರಲು ಹೋಗಿ ರಿಸ್ಕ್ ತನ್ನ ಮೈಮೇಲೆ ತಂದುಕೊಡದ ಮನಮೋಹನ್ ಸಿಂಗ್ ಅವರನ್ನೇ ಜನ ಇವತ್ತಿಗೆ ನಮ್ಮ ಹೆಮ್ಮೆಯ ಪ್ರಧಾನಿ ಎಂದು ಹೇಳಿಕೊಳ್ಳುತ್ತಿಲ್ಲ. ಹಾಗಂತ ಮನಮೋಹನ್ ಸಿಂಗ್ ಕೆಟ್ಟ ಪ್ರಧಾನಿ ಎಂದಲ್ಲ. ಆದರೆ ಭಾರತ ಒಬ್ಬ ಪ್ರಧಾನ ಮಂತ್ರಿಯ ಹೆಸರನ್ನು ಕೇಳುತ್ತಿದ್ದ ಹಾಗೆ ಹುಚ್ಚೆದ್ದು ಕುಣಿಯುವ ವಾತಾವರಣ ಇಲ್ಲಿಯ ತನಕ ಬಂದೇ ಇಲ್ಲ. ಇದು ನಮ್ಮ ತಲೆಮಾರಿನಲ್ಲಿ ನನ್ನ ಕಣ್ಣ ಮುಂದೆ ಆಗುತ್ತಿರುವುದು ಮತ್ತು ನಮ್ಮ ಕಾಲಘಟ್ಟದಲ್ಲಿ ನಾವು ಇದನ್ನು ಅನುಭವಿಸುತ್ತಿರುವುದು ನಿಜವಾದ ವಿಶ್ವಗುರು ಭಾರತ.
ಗಾಂಧಿ-ನೆಹರೂ ಕುಟುಂಬದ ಎದುರು ನಿಂತು….
ಕಾಂಗ್ರೆಸ್ ಪಕ್ಷವೇ ದೇಶವನ್ನು ಕೆಳಗಿನಿಂದ ಮೇಲಿನ ತನಕ ಆಳುತ್ತಿರುವಾಗ ಗಾಂಧಿ-ನೆಹರೂ(!) ಕುಟುಂಬವೇ ದೇಶದ ಒಡೆಯನಂತೆ ವರ್ತಿಸುತ್ತಿದ್ದ ಕಾಲದಲ್ಲಿ ಅವರ ವಿರುದ್ಧ ಯಾರಾದರೂ ಬೆಳೆಯುತ್ತಿದ್ದಾರೆ ಎಂದು ಗೊತ್ತಾದರೆ ಅದು ಅವರದ್ದೇ ಪಕ್ಷದ ನಾಯಕರಾಗಿದ್ದರೂ ಸಹ ಅಂತವರನ್ನು ಅಲ್ಲಿಯೇ ಹೊಸಕಿ ಹಾಕುತ್ತಿದ್ದ ಕಾಲದಲ್ಲಿ ಜನಸಂಘದಿಂದ ಶುರುವಾದ ಹೋರಾಟ ಇವತ್ತು ಭಾರತೀಯ ಜನತಾ ಪಾರ್ಟಿ ಪಂಜಾಬ್, ಪುದುಚೇರಿ ಬಿಟ್ಟರೆ ಕರ್ನಾಟಕದಲ್ಲಿ ಕೊನೆಯ ಉಸಿರನ್ನು ಎಳೆಯುತ್ತಿದೆ. ಹೀಗೆನ್ನಿದ್ದರೂ ಕಾಂಗ್ರೆಸ್ ಪಕ್ಷವನ್ನು ಐಸಿಯುನಲ್ಲಿ ಮಲಗಿಸಿ ವೆಂಟಿಲೇಟರ್ ಹಾಕಿ ವಾಚ್ ನೋಡುವುದು ಮಾತ್ರ ಕಾಂಗ್ರೆಸ್ಸಿಗರಿಗೆ ಉಳಿದಿರುವ ದಾರಿ. ಮೋದಿ ಬರುತ್ತಾರೆ ಎಂದು ಒಂದು ವಾಕ್ಯ ನೀವು ಸಾಮಾಜಿಕ ತಾಣದಲ್ಲಿ ಬರೆದರೂ ಯಾವಾಗ, ಎಷ್ಟನೇ ತಾರೀಕು, ಎಷ್ಟೊತ್ತಿಗೆ, ಎಲ್ಲಿ ಎಂದು ನೂರಾರು ಜನ ಅಲ್ಲಿ ಉತ್ತರಕ್ಕೆ ಕಾಯುತ್ತಾರೆ ಎಂದರೆ ಆ ಪುಣ್ಯಾತ್ಮನ ಕ್ಯಾಪೆಸಿಟಿ ಎಂತದ್ದು ನೋಡಿ. ಈ ಬಾರಿ ಯಾಕೆ ಬಿಜೆಪಿ ಬರಬೇಕು ಎಂದರೆ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಕ್ಕೆ ರಾಜ್ಯವನ್ನೇ ಅಮಿತ್ ಶಾ ತನ್ನ ಕಣ್ಣಗಾವಲಿನಲ್ಲಿ ಕಾಯುತ್ತಿರುತ್ತಾರೆ ಎನ್ನುವ ವಾತಾವರಣ ಇದೆ. ಇಲ್ಲಿ ಒಂದು ಸಣ್ಣ ಭ್ರಷ್ಟಾಚಾರ ಯಾವುದಾದರೂ ಮಂತ್ರಿ ಅಥವಾ ಬಿಜೆಪಿಯ ಶಾಸಕನಿಂದ ನಡೆದರೆ ಆತ ಉಸಿರಿರುವ ತನಕ ವಿಧಾನಸಭೆಗೆ ಕಾಲಿಡದ ಹಾಗೆ ಮಾಡುವಷ್ಟು ಸಾಮರ್ತ್ಯ ಬಿಜೆಪಿಯ ಹೈಕಮಾಂಡ್ ಗೆ ಬಂದಿದೆ. ಮುಖ್ಯಮಂತ್ರಿಯಾದವರ ಮೇಲೆ ಒಂದು ಸಣ್ಣ ಕಪ್ಪು ಚುಕ್ಕೆ ಬಂದರೂ ಅವರ ಜಾತಿ, ಧರ್ಮ ನೋಡದೆ ನೀವು ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳಿ, ನಾಳೆ ಬೆಳಿಗ್ಗೆ ಹೊಸ ಮುಖ್ಯಮಂತ್ರಿಯ ಕೈಗೆ ರಾಜ್ಯ ಕೊಡಲಾಗುವುದು ಎನ್ನುವಷ್ಟು ನೈತಿಕತೆ ಮೇಲಿನವರಲ್ಲಿ ಇದೆ. ಆದರಿಂದ ಈ ಬಾರಿ ಕರ್ನಾಟಕವನ್ನು ನೆಮ್ಮದಿಯಾಗಿ ಮೋದಿ ಕೈಯಲ್ಲಿ ಕೊಟ್ಟು ನಾವು ನೀವು ಗಣೇಶೋತ್ಸವ, ನವರಾತ್ರಿಯ ಸಿದ್ಧತೆಯಲ್ಲಿ ತೊಡಗಬಹುದು.
ನೀವು ಮತ ಕೊಡುವುದು ಮೋದಿ-ಶಾಗೆ…
ಬಿಜೆಪಿ ಅಧಿಕಾರಕ್ಕೆ ಬಂದರೆ ಕರಣ್ ಆಚಾರ್ಯನಂತವರು ಆರಾಮವಾಗಿ ತಮ್ಮ ಕಲೆಯಲ್ಲಿ ಹನುಮಂತನ ಮೂರ್ತಿಯನ್ನು ಅರಳಿಸಬಹುದು. ನಿಮ್ಮ ರಸ್ತೆಯ ಡ್ರೈನೇಜ್ ಒವರ್ ಫ್ಲೋ ಆಗಿ ಹರಿಯುತ್ತಿದ್ದರೆ ಶಾಸಕ ನಿರ್ಲಕ್ಷ್ಯ ಮಾಡಿದರೆ ಮೋದಿಗೆ ಮೇಲ್ ಹಾಕ್ತೀನಿ ಎಂದು ಮೂರು ಶಬ್ದ ಹೇಳಿದರೂ ಸಾಕು, ಬಿಜೆಪಿಯ ಶಾಸಕ ಉಟ್ಟಬಟ್ಟೆಯಲ್ಲಿಯೇ ನಿಮ್ಮ ರಸ್ತೆಗೆ ಓಡಿ ಬಂದಾರು. ಅದರ್ಥ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಮುಖ್ಯಮಂತ್ರಿ ಇಲ್ಲಿ ತಾಂತ್ರಿಕವಾಗಿ ಯಾರು ಆದರೂ ಕೂಡ ಕೀಲಿಕೈ ಮಾತ್ರ ಮೇಲೆ ಇರುತ್ತದೆ. ನಿಮ್ಮ ಒಂದು ಮೇಲ್ ಇಲ್ಲಿನ ಜನಪ್ರತಿನಿಧಿಗಳ ಹಣೆಯಲ್ಲಿ ಬೆವರು ಮೂಡಿಸಬಹುದು. ಇದೆಲ್ಲ ಜನರಿಗೆ ಗೊತ್ತಿರುವುದರಿಂದಲೇ ಅವರು ಮೋದಿಯನ್ನು ನಂಬಿ ತಮ್ಮ ಅಮೂಲ್ಯ ಮತವನ್ನು ಬಿಜೆಪಿಯ ಅಭ್ಯರ್ಥಿಗೆ ಒತ್ತಲಿದ್ದಾರೆ. ಮೊನ್ನೆಯ ತನಕ ಮಂಗಳೂರು ಉತ್ತರದ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಹಾಗೂ ದಕ್ಷಿಣದ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರುಗಳು ಗೆಲ್ಲುವ ಸಾಧ್ಯತೆ 50:50 ಇತ್ತು. ಆದರೆ ಮೋದಿ ಬಂದು “ಕೇಂದ್ರದಲ್ಲಿ ಕುಳಿತು ರಾಜ್ಯದ ಅಭಿವೃದ್ಧಿ ಮಾಡಲು ಅವಕಾಶ ಕೊಡಿ” ಎಂದು ಹೇಳಿದ ಮೇಲೆ ಬಿಜೆಪಿ ಅಭ್ಯರ್ಥಿಗಳು ಶಾಸಕರಾದ ನಂತರ ನಮ್ಮದೇನಿದ್ದರೂ ಸಂಪರ್ಕ ಮೋದಿಯೊಂದಿಗೆ. ಇವರು ಒಂದು ವೇಳೆ ಸಣ್ಣ ಆಕಲಿಕೆ ತೆಗೆದರೂ ಮೋದಿಗೆ ಹೇಳುತ್ತೇವೆ ಎನ್ನುವ ವಿಶ್ವಾಸದಿಂದ ಮತದಾರ ಬಿಜೆಪಿಯ ಕಮಲದ ಎದುರು ತನ್ನ ತೋರುಬೆರಳು ಒತ್ತಲು ತಯಾರಾಗಿದ್ದಾನೆ. ಇವರು ಗೆಲ್ಲುವ ಚಾನ್ಸ್ 75:25 ಬಂದಿದೆ. ಯಾಕೋ ಮೋದಿ ಕೇಂದ್ರ ಮೈದಾನದಲ್ಲಿ ಭಾಷಣ ಮಾಡಲು ನಿಂತ ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗರ ಮುಖದಲ್ಲಿ ಪ್ರೇತಕಳೆ!
Leave A Reply