ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
ಮಂಗಳೂರಿನಲ್ಲಿ ಕಳೆದ ಏಳು ತಿಂಗಳುಗಳಿಂದ ಭೂ ಪರಿವರ್ತನೆ ಆಗಿಲ್ಲ. ಭೂ ಪರಿವರ್ತನೆ ಮಾಡಲು ಹೋದರೆ 11ಇ ರೆವೆನ್ಯೂ ಸ್ಕೆಚ್ ಬೇಕು ಎನ್ನುತ್ತಾರೆ. ರೆವೆನ್ಯೂ ಸ್ಕೆಚ್ ಮಾಡಲು ಹೋದರೆ ಆರ್ ಟಿಸಿಗೆ ತಾಳೆ ಆಗುವುದಿಲ್ಲ ಎನ್ನುತ್ತಾರೆ. ಆರ್ ಟಿಸಿ ಯಾಕೆ ತಾಳೆ ಆಗುವುದಿಲ್ಲ ಎಂದರೆ ಮಂಗಳೂರಿನಲ್ಲಿ ಆರ್ಟಿಸಿ ಬೇಕಂತಿಲ್ಲ, ಪಾಲಿಕೆಯ ಖಾತಾ ಸಾಕು ಎಂಬ ಆದೇಶ ಇದೆ. ಆದ್ದರಿಂದ ಯಾರೂ ಕೂಡ ಆರ್ಟಿಸಿ ಮಾಡಲು ಹೋಗುವುದಿಲ್ಲ. ಆದ್ದರಿಂದ ಯಾರಾದರೂ ಜಾಗವನ್ನು ಇನ್ನೊಬ್ಬರಿಗೆ ಸ್ವಲ್ಪ ಅಂಶ ಮಾರಲು ಹೋದರೆ ಕಾರ್ಪೊರೇಶನ್ ನಿಂದ ಖಾತಾ ಮಾಡಿಸಲು ಹೋಗುತ್ತಾರೆ. ಆದರೆ ತಾಲೂಕು ಆಫೀಸಿನಿಂದ ಖಾತಾ ಮಾಡಿಸಲು ಹೋಗುವುದಿಲ್ಲ. ರೆವೆನ್ಯೂ ಸ್ಕೆಚ್ ಮಾಡಿಸಲು ಹೋದಾಗ ಆರ್ ಟಿಸಿಯಲ್ಲಿರುವ ಒಟ್ಟು ಜಮೀನು 11/ಇ ಸ್ಕೆಚ್ ಕೇಳುವ ಜಮೀನಿಗೆ ತಾಳೆ ಬರುವುದಿಲ್ಲ.
ಮೂಡಾದಲ್ಲಿ ಟೈಮಿಂಗ್ ಮಾಡಿ…
ಇನ್ನು ಮಂಗಳೂರು ನಗರಾಭಿವೃದ್ಧಿ ಕಚೇರಿ ಒಂದು ಸರಕಾರಿ ಕಚೇರಿ. ಇದು ಬೇರೆ ಎಲ್ಲಾ ಸರಕಾರಿ ಕಚೇರಿಗಳಂತೆ ಬೆಳಿಗ್ಗೆ 10 ಗಂಟೆಗೆ ತೆರೆಯಲ್ಪಡಬೇಕು. ಅಧಿಕಾರಿಗಳು ಆ ಸಮಯಕ್ಕೆ ಬರಬೇಕು. ಆದರೆ ಇಲ್ಲಿ ಟಿಪಿಎಂ ಬರುವಾಗ 11.15 ಆಗುತ್ತದೆ. ಇದರಿಂದ ಅಲ್ಲಿ ಕೆಲಸ ಮಾಡಿಸಲು ಬರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಇನ್ನು ಮಧ್ಯಾಹ್ನದ ಊಟದ ಅವಧಿ ಮುಗಿದು ಅಧಿಕಾರಿಗಳು 2.30ಕ್ಕೆ ಬಂದು ಬಿಟ್ಟರೆ ತುಂಬಾ ಒಳ್ಳೆಯದು. ಆದರೆ ಇವರು ಬರುವಾಗ 4.30 ಮಾಡುತ್ತಾರೆ. ಕೇಳಿದರೆ ನಾವು ಸಂಜೆ 7.30 ರ ತನಕ ಕಚೇರಿಯಲ್ಲಿಯೇ ಇರುತ್ತೇವೆ ಎನ್ನುತ್ತಾರೆ. ಆದರೆ 7.30 ರ ತನಕ ಇವರು ಇರುವುದು ಅವರ ಸ್ವಲಾಭಕ್ಕೆ ವಿನ: ಜನರ ಸೇವೆಗಾಗಿ ಅಲ್ಲ. ಆದ್ದರಿಂದ ನಗರಾಭಿವೃದ್ಧಿ ಸಚಿವರಾಗಿರುವ ಯುಟಿ ಖಾದರ್ ಅವರು ಮೂಡಾ ಕಚೇರಿಯಲ್ಲಿ ಟೈಮ್ ಕೀಪ್ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಬೇಕು.
ಚೆಂಡು ಯುಟಿ ಖಾದರ್ ಅಂಗಳದಲ್ಲಿದೆ..
ನಾನು ಸೋಮವಾರದಿಂದ ಇವತ್ತಿನ ತಕ ಸರಣಿಯಲ್ಲಿ ಬರೆಯುತ್ತಿರುವ ಮೂಡಾ ಅದಾಲತ್ ನ ಇವತ್ತಿನ ಕೊನೆಯ ಅಂಕಣದಲ್ಲಿ ನನಗೆ ಅನಿಸಿದ್ದು ಏನೆಂದರೆ ಸರಕಾರಗಳು ಬದಲಾದರೂ ನೀತಿ ನಿಯಮಾವಳಿಗಳು ಬದಲಾಗಬಾರದು. ಒಂದು ಸರಕಾರ ಇರುವಾಗ ಒಂದು ನಿಯಮ ಇದ್ದರೆ ಮತ್ತೊಂದು ಸರಕಾರ ಬಂದಾಗ ಹಿಂದಿನ ಸರಕಾರ ಮಾಡಿದ್ದ ಜನೋಪಯೋಗಿ ನಿಯಮಗಳನ್ನು ಬದಲಾವಣೆ ಮಾಡಿದರೆ ಅದರಿಂದ ತೊಂದರೆಯಾಗುವುದು ಸಾಮಾನ್ಯ ಜನರಿಗೆ. ಜನರು ಅದನ್ನು ಯಾರಿಗೂ ಹೇಳಲು ಆಗದೇ ಒದ್ದಾಡಬೇಕಾಗುತ್ತದೆ. ಖಾದರ್ ಮೊನ್ನೆ ಮೂಡಾ ಅದಾಲತ್ ಮಾಡಿರಬಹುದು. ಆದರೆ ಅದರಲ್ಲಿ ಅವರು ಎಷ್ಟು ಪಾರದರ್ಶಕವಾಗಿ ಸಮಸ್ತ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ತರುತ್ತಾರೆ ಎನ್ನುವುದು ಉಳಿದಿರುವ ಪ್ರಶ್ನೆ. ಕೇವಲ ತಮ್ಮ ಪಕ್ಷದವರಿಗೆ ಲಾಭ ಆಗುವ ಯೋಜನೆಗಳನ್ನು ಯಾವ ಸರಕಾರ ಮಾಡಿದರೂ ಅದರ ಪರಿಣಾಮ ಅವರು ಅನುಭವಿಸಬೇಕಾಗುತ್ತದೆ. 11/ಇ ಮುಂತಾದ ಸಮಸ್ಯೆಯಿಂದ ರಿಜಿಸ್ಟ್ರಾರ್ ಆಫೀಸಿನಲ್ಲಿ ಜಮೀನು ಮಾರಾಟ ಆಗಲ್ಲ. ಪಾಪದವರಿಗೆ ಜಮೀನು ಮಾರಿ ಮದುವೆ ಮತ್ತಿತ್ತರ ಶುಭ ಸಮಾರಂಭಗಳಿಗೆ ಹಣ ಹೊಂದಿಸುವ ಯೋಚನೆ ಇದ್ದರೆ ಅದು ಕಷ್ಟವಾಗುತ್ತದೆ. 94ಸಿ/ ರೆವೆನ್ಯೂ ಸ್ಕೆಚ್ ಜನಸಾಮಾನ್ಯರಿಗೆ ಕಾಂಗ್ರೆಸ್ ಸರಕಾರ ನಿರ್ಮಾಣ ಮಾಡಿದ್ದ ಸಮಸ್ಯೆ. ಈಗ ಇದೇ ಭಾಗದವರು ನಗರಾಭಿವೃದ್ಧಿ ಸಚಿವರಾಗಿರುವುದರಿಂದ ಅವರು ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎನ್ನುವ ನಂಬಿಕೆ ಇದೆ. ಚೆಂಡು ಯುಟಿ ಖಾದರ್ ಅವರ ಅಂಗಳದಲ್ಲಿದೆ!
Leave A Reply