ಯಾರು ಗೆದ್ದರೂ ಅವರು ಇಡೀ ಕ್ಷೇತ್ರದ ಪ್ರತಿನಿಧಿ!
ಚುನಾವಣೆಯ ಕಾವು ತಾರಕಕ್ಕೆ ಏರಿದೆ. ಮಂಗಳವಾರದ ಫಲಿತಾಂಶದ ಮೇಲೆ ಈಗ ಎಲ್ಲರ ಚಿತ್ತ. ಒಂದು ಕಡೆ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವ ಬೆಟ್ಟಿಂಗ್ ಶುರುವಾಗಿದೆ. ಬಿಜೆಪಿ ಗೆಲ್ಲುತ್ತದಾ, ಕಾಂಗ್ರೆಸ್ ಗೆಲ್ಲುತ್ತದಾ? ಆಯಾಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ? ಎದುರಾಳಿ ಎಷ್ಟು ಮತಗಳ ಅಂತರದಲ್ಲಿ ಸೋಲುತ್ತಾರೆ, ಇಂತಹುದೇ ಲೆಕ್ಕಾಚಾರಗಳಲ್ಲಿ ಬೆಟ್ಟಿಂಗ್ ನಡೆಯುತ್ತಾ ಇರುತ್ತದೆ. ಇನ್ನು ಕೆಲವರು ತಾವು ಬಿಜೆಪಿಯ ಕಟ್ಟಾಳುಗಳಂತೆ ಮತ್ತೆ ಕೆಲವರು ಕಾಂಗ್ರೆಸ್ಸಿನ ಅಜೀವ ಸದಸ್ಯರಂತೆ ವರ್ತಿಸಿರುವುದನ್ನು ಕೂಡ ಈ ಚುನಾವಣೆ ಕಂಡಿದೆ. ಸಾಮಾಜಿಕ ತಾಣಗಳಲ್ಲಿ ಪರ, ವಿರೋಧ ಚರ್ಚೆ, ಕಮೆಂಟ್ಸ್ ಗಳು ಲೆಕ್ಕಕ್ಕೆ ಸಿಗದಷ್ಟು ಹಾರಾಟ ನೋಡಿವೆ. ಕೆಲವರು ಹಣದ ಆಸೆಗೆ ತಮ್ಮತನವನ್ನು ಮಾರಿ ಯಾರದ್ದೋ ಪರವಾಗಿ ಕೆಲಸ ಮಾಡಿದ್ದನ್ನು ಕೂಡ ಈ ಚುನಾವಣೆಯಲ್ಲಿ ನೋಡಿದ್ದೇವೆ. ಇನ್ನು ಹಲವರು ತಮ್ಮ ದ್ವೇಷವನ್ನು ತೀರಿಸಲು ಈ ಚುನಾವಣೆಯಲ್ಲಿ ಯಾರ್ಯಾರಿಗೊ ಮತ ಹಾಕಿ ಬೀಗಿದ್ದನ್ನು ಕೂಡ ನೋಡಿದ್ದೇವೆ. ಒಟ್ಟಿನಲ್ಲಿ ಚುನಾವಣೆ ಎಂದರೆ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ನಾವೆಲ್ಲರು ಸೇರಿ ಗೆಲ್ಲಿಸುವುದು ಆಗಬೇಕಿತ್ತು. ಅದು ಆಗಿದೆಯಾ ಎನ್ನುವುದಕ್ಕೆ ನಾಳೆ ಉತ್ತರ ಸಿಗಲಿದೆ.
ನಾಳೆ ಕರ್ನಾಟಕದ 222 ಕ್ಷೇತ್ರಗಳ ಫಲಿತಾಂಶ ಗೊತ್ತಾಗಲಿದೆ. ಯಾರು ಗೆದ್ದರೂ ಆ ಶಾಸಕರು ತಮ್ಮ ಕ್ಷೇತ್ರದ ಎಲ್ಲರಿಗೂ ಜನಪ್ರತಿನಿಧಿ. ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಮೂಲಭೂತ ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡಲಿ ಎನ್ನುವುದೇ ನಿರೀಕ್ಷೆ. ಗೆದ್ದವರು ತಮ್ಮ ಜಾತಿ, ಪಕ್ಷದವರಿಗೆ ಮಾತ್ರ ಶಾಸಕರಲ್ಲ. ಅವರು ಎಲ್ಲರಿಗೂ ಶಾಸಕರು. ಹಾಗೆ ಪಕ್ಷಗಳ ಕಾರ್ಯಕರ್ತರು ಕೂಡ. ಚುನಾವಣೆಗೆ 15 ದಿನಗಳಿರುವಾಗ ಆಯಾ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಕ್ಕಾಗಿ ಅಭ್ಯರ್ಥಿಯ ಗೆಲುವಿಗಾಗಿ ಸಾಕಷ್ಟು ಹೋರಾಟ ಮಾಡಿರುತ್ತೀರಿ. ಈಗ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಎಲ್ಲರೂ ಒಟ್ಟಾಗಿ ನಮ್ಮ ಕ್ಷೇತ್ರ ಹೇಗೆ ಅಭಿವೃದ್ಧಿಯಾಗಬೇಕು ಎಂದು ಯೋಚಿಸುವುದಷ್ಟೇ ಕೆಲಸ!
Leave A Reply