ಮಾತು ತಪ್ಪಿದ್ದಕ್ಕೆ 2008ರಲ್ಲಿ ಜನ ನಿಮಗೆ ಪಾಠ ಕಲಿಸಿದ್ದು ಮರೆತುಹೋಯಿತಾ ಕುಮಾರಸ್ವಾಮಿಯವರೇ?
ಎಚ್.ಡಿ.ಕುಮಾರಸ್ವಾಮಿಯವರೇ ನಮಸ್ಕಾರ. ಹೇಗಿದ್ದೀರಿ? ರಾಜ್ಯ ರಾಜಕಾರಣದ ಬೆಳವಣಿಗೆ ಕಂಡು, ಪ್ರಸ್ತುತ ನಿಮಗೆ ಉಂಟಾಗಿರುವ ಬೇಡಿಕೆ ಗಮನಿಸಿ ಖುಷಿಯಾಗೇ ಇದ್ದೀರಿ ಎಂದೇ ಭಾವಿಸಿದ್ದೇವೆ. ಖುಷಿಯಾಗೇ ಇರುತ್ತೀರಿ ಬಿಡಿ.
ಈ ಖುಷಿಗೂ ಹಲವು ಕಾರಣಗಳಿವೆ. ಆಡಳಿತ ವಿರೋಧಿ ಅಲೆ, ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅಲೆಯಿಂದ ಎಲ್ಲರೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದೇ ಹೇಳುತ್ತಿದ್ದರು. 2008ರಲ್ಲಿ ನೀವು ಮಾತಿಗೆ ತಪ್ಪಿದ ಫಲವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷ ನೀಡಿದ ದುರಾಡಳಿತದ ಪರಿಣಾಮವಾಗಿ ನಿರೀಕ್ಷೆಯಂತೆ ಜನ ಬಿಜೆಪಿಯನ್ನೇ ಗೆಲ್ಲಿಸಿದರು.
ಆದರೆ ದುರದೃಷ್ಟಕ್ಕೆ ಬೆರಳೆಣಿಕೆ ಸೀಟುಗಳು ಬಾರದ ಕಾರಣ ಚುನಾವಣೆ ಫಲಿತಾಂಶ ಅತಂತ್ರದಿಂದ ಕೂಡಿದೆ. ಹಾಗಾಗಿ ಎರಡಂಕಿ ಸೀಟು ಪಡೆದಿದ್ದರೂ, ಸೀಟುಗಳ ಲೆಕ್ಕಾಚಾರದಲ್ಲಿ ಮೂರನೇ ಸ್ಥಾನ ಪಡೆದರೂ ನಿಮಗೆ ಈಗ ಬೇಡಿಕೆ ಬಂದಿದೆ. ಆಡಳಿತ ಅನುಭವಿಸುವ ದೃಷ್ಟಿಯಿಂದ ಎರಡನೇ ಸ್ಥಾನದಲ್ಲಿದ್ದರೂ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಡಲು ಮುಂದಾಗಿದೆ. ಹಾಗಾಗಿ ನೀವು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದೀರಿ.
ಆದರೆ ನೀವು ಮಾಡುತ್ತಿರುವುದು ಸರಿಯಿದೆಯಾ ಕುಮಾರಸ್ವಾಮಿಯವರೇ? ಚುನಾವಣೆಗೂ ಮುನ್ನ ನೀವು ಆಡಿದ ಮಾತುಗಳು ಮರೆತುಹೋದವಾ? ಅಥವಾ ಹಿಂದಿನಿಂದಲೂ, ಈಗಲೂ ನೀವು ಆಡಿದ ಮಾತುಗಳಿಗೆ ಬೆಲೆಯೇ ಇಲ್ಲವಾ? ನೀವೂ ಅವಕಾಶವಾದಿ ರಾಜಕಾರಣದ ಧುರೀಣರೇ? ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಆಗದ ನಿಮಗೆ ಇಂತಹ ಅಡ್ಡದಾರಿಯೇ ಮೇಲಾ?
ಅಷ್ಟಕ್ಕೂ 2008ರಲ್ಲಿ ಏನಾಯಿತು ಎಂದು ನಿಮಗೆ ನೆನಪಿಲ್ಲವೇ ಎಚ್ಡಿಕೆ? ಹೀಗೆಯೇ ಮೈತ್ರಿ ಮಾಡಿಕೊಂಡು ಬಿಜೆಪಿ ಜತೆಗೂಡಿ 20 ತಿಂಗಳು ಆಡಳಿತ ಅನುಭವಿಸಿದಿರಿ. ಆದರೆ 20 ತಿಂಗಳ ಬಳಿಕ ಅಧಿಕಾರ ಹಸ್ತಾಂತರಿಸದೆ, ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಪಾಹಪಿಗೆ ಬಿದ್ದು ಸಣ್ಣತನ ಪ್ರದರ್ಶಿಸಿದಿರಿ. ಪರಿಣಾಮ ಏನಾಯಿತು? ನೀವೊಬ್ಬ ರಾಜಕೀಯ ವಚನಭ್ರಷ್ಟರಾದಿರಿ. ಜನರೂ 2008ರ ಚುನಾವಣೆಯಲ್ಲಿ ನಿಮ್ಮನ್ನು ಹೀನಾಯವಾಗಿ ಸೋಲಿಸಿಬಿಟ್ಟರು. ಪರಿಣಾಮ ನೀವು 10 ವರ್ಷದವರೆಗೆ ಆಡಳಿತದಿಂದ ವಿಮುಖರಾದಿರಿ.
ಈಗ ಮತ್ತೊಂದು ತಪ್ಪುನಡೆಯನ್ನೇ ಇಡುತ್ತಿದ್ದೀರಲ್ಲ ಕುಮಾರಸ್ವಾಮಿಯವರೇ, ಇಷ್ಟು ವರ್ಷ ರಾಜಕೀಯ ಮಾಡಿ ಕಲಿತಿದ್ದು, ಅಳವಡಿಸಿಕೊಂಡ ತತ್ವ ಇದೇನಾ? ಚುನಾವಣೆಗೂ ಮುನ್ನ ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬೇಕಾದರೆ ಹೀಗಂತ ಬಾಂಡ್ ಬರೆದುಕೊಡುತ್ತೇನೆ ಎಂದ ನೀವು ಈಗ, ಆ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದೀರಲ್ಲ, ಏನೆನ್ನಬೇಕು ನಿಮಗೆ? ನೀವು ಆಡಿದ ಮಾತಿಗೆ ನೀವೇ ಬೆಲೆ ಕೊಡಲಿಲ್ಲ ಎಂದರೆ ಯಾರು ಕೊಡುತ್ತಾರೆ?
ಖಂಡಿತವಾಗಿಯೂ, ನೀವು ಕಾಂಗ್ರೆಸ್ಸಿನ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸುವ ಎಲ್ಲ ಹಕ್ಕು ಹೊಂದ್ದಿದ್ದೀರಿ. ಅಂತಹದೊಂದು ಅವಕಾಶವನ್ನು ನಿಮಗೆ ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದೆ. ಆದರೆ ಆಡಿದ ಮಾತು, ಕೊಟ್ಟ ವಚನ ಮರೆತ ನೀವು ತಪ್ಪು ಹೆಜ್ಜೆ ಇಡುತ್ತಿದ್ದೀರಿ. ಆ ಮೂಲಕ 2023ರ ಚುನಾವಣೆಯಲ್ಲಿ ಮತ್ತೆ 2008ರಲ್ಲಿ ಕಲಿತ ಪಾಠ, ಸಿಕ್ಕ ಪೆಟ್ಟು ಪಡೆಯಲು ಸಿದ್ಧರಾದಂತೆ ವರ್ತಿಸುತ್ತಿದ್ದೀರಿ. ಸೋಲಿನಿಂದಲೂ ಪಾಠ ಕಲಿಯದ, ಆಡಿದ ಮಾತು ಉಳಿಸಿಕೊಳ್ಳದ ನೀವು ಜನರ ಮನಸ್ಸಿನಿಂದಲೂ ದೂರವಾಗುತ್ತಿದ್ದೀರಿ ಕುಮಾರಸ್ವಾಮಿಯವರೇ! ಆತ್ಮಾವಲೋಕನ ಮಾಡಿಕೊಳ್ಳಿ.
Leave A Reply