ರಾಜ್ಯದಲ್ಲಿ ಕಾಂಗ್ರೆಸ್ ಬಿತ್ತು, ಬಿಜೆಪಿ ಗೆಲ್ಲಲು ಕಾರಣಗಳಿವೆ ಹತ್ತು
Posted On May 18, 2018
ಕರ್ನಾಟಕ ರಾಜಕೀಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಲ್ಲೆಲ್ಲೂ, ಎಂತ ಘಟಾನುಘಟಿಗಳ ಬಾಯಲ್ಲೂ ರಾಜ್ಯದ ರಾಜಕೀಯದ ಮಾತುಗಳೇ ಕೇಳಿಬರುತ್ತಿವೆ. ಆದಾಗ್ಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಂದೆ ಹಲವು ಸವಾಲುಗಳು ಇವೆ ಎಂಬುದನ್ನು ಯಡಿಯೂರಪ್ಪನವರು ಮರೆಯಬಾರದು. ಅತ್ತ ಆ ಭಾಗ್ಯ, ಈ ಭಾಗ್ಯ ಕೊಟ್ಟೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸೋತು ಮುಖ ಒಣಗಿಸಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಸಹ ಅಷ್ಟೇ ದಿಟ.
- ರಾಜ್ಯದಲ್ಲಿ ಬಿಜೆಪಿಗೆ ಜನ ಬೆಂಬಲಿಸಲು ಮೊದಲನೇ ಕಾರಣವೆಂದರೆ ಆಡಳಿತ ವಿರೋಧಿ ಅಲೆ. ಸಿದ್ದರಾಮಯ್ಯನವರು ಸೀಮಿತ ಸಮುದಾಯಕ್ಕಾಗಿ ಯೋಜನೆ ಜಾರಿಗೊಳಿಸಿದ್ದು, ಸರ್ಕಾರದ ಹಲವು ಹಗರಣ, ಅಧಿಕಾರಿಗಳ ವರ್ಗಾವಣೆ ಸೇರಿ ಹಲವು ಕಾರಣಗಳಿಂದ ಜನ ಬಿಜೆಪಿಗೆ ಮತ ಹಾಕಿದರು ಎಂಬುದರಲ್ಲಿ ಸಂಶಯವಿಲ್ಲ.
- ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಿಂದೂಗಳ ನಿರ್ಲಕ್ಷ್ಯವೂ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಹನುಮ ಜಯಂತಿಗೆ ಅಡ್ಡಿ, ಗಣೇಶ ಚತುರ್ಥಿಗೆ ನಿಯಮ, 22 ಹಿಂದೂಗಳ ಹತ್ಯೆಯಾದರೂ ಕ್ರಮ ಕೈಗೊಳ್ಳದಿರುವುದು ಹಾಗೂ ಬಿಜೆಪಿಯ ಹಿಂದುತ್ವದ ಮಂತ್ರದಿಂದ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆಯಾಯಿತು.
- ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ಸಾಲು ಸಾಲು ರ್ಯಾಲಿಗಳು, ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸಿದ್ದು, ಮೋದಿ ಅಲೆಯಿಂದ ಬಿಜೆಪಿಗೆ ಗೆಲುವು ನಿರಾಯಾಸವಾಗಿ ಲಭಿಸಿತು.
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು, ಯೋಜನೆಗಳು ರಾಜ್ಯದಲ್ಲೂ ಜನ ಬಿಜೆಪಿಯನ್ನು ಬೆಂಬಲಿಸುವಂತೆ ಆಯಿತು.
- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತಿರುವುದು ಸಹ ಬಿಜೆಪಿಗೆ ವರದಾನವಾಯಿತು. ಮೋದಿ ಪರ ಒಲವಿದ್ದ ಯುವ ಲಿಂಗಾಯತರು ಸಿದ್ದರಾಮಯ್ಯರನ್ನು ಮಕಾಡೆ ಮಲಗಿಸಿದರು. ಅದೇ ಕಾರಣಕ್ಕೆ ಲಿಂಗಾಯತರು ಜಾಸ್ತಿ ಇರುವ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿತು.
- ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಎಂದೇ ಖ್ಯಾತಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕರ್ನಾಟಕದಲ್ಲಿ ನಡೆಸಿದ ಸಾಲು ರ್ಯಾಲಿ, ಸಮಾವೇಶಗಳಿಂದ ರಾಜ್ಯದಲ್ಲಿ ಕಮಲ ಅರಳಲು ಸಹಕಾರಿಯಾಯಿತು.
- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹಿಂದುತ್ವ ಮುನ್ನೆಲೆಗೆ ಬಂತು. ಆದರೆ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರ ಡೋಂಗಿ ಹಿಂದುತ್ವವನ್ನು ಜನ ನಂಬದೆ, ಬಿಜೆಪಿಯನ್ನು ಬೆಂಬಲಿಸಿದರು.
- ರಾಜ್ಯದಲ್ಲಿ ಈ ಬಾರಿ ಯಡಿಯೂರಪ್ಪನವರ ವರ್ಚಸ್ಸು, ಸುರೇಶ್ ಕುಮಾರ್ ಅವರಂತಹ ನಾಯಕರ ಬೆಂಬಲ, ವಿರೋಧ ಪಕ್ಷದಲ್ಲಿ ಹಲವು ವಿಚಾರಗಳ ಪ್ರಸ್ತಾಪ, ಮಹದಾಯಿ ವಿಚಾರದಲ್ಲಿ ಬಿಜೆಪಿ ನಡೆಸಿದ ಪ್ರಯತ್ನಗಳೂ ಕಮಲ ಅರಳಲು ಬೆನ್ನೆಲುಬಾದವು.
- ಐದು ವರ್ಷ ರಾಜ್ಯವಾಳಿದ ಸಿದ್ದರಾಮಯ್ಯನವರು ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಲಿಲ್ಲ. ಕರಾವಳಿ ಹೊತ್ತಿ ಉರಿಯಿತು, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯಾಯಿತು, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದರು. 22 ಹಿಂದೂಗಳ ಹತ್ಯೆಯಾಯಿತು. ಆದರೂ ಸಿದ್ದರಾಮಯ್ಯನವರು ಮಗುಮ್ಮಾಗಿದ್ದದ್ದು ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು.
- ಮೇಲಾಗಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಲ್ಲದೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಎಲ್ಲ ಕಾರಣಗಳು ರಾಜ್ಯದಲ್ಲಿ ಜನ ಬಿಜೆಪಿಯನ್ನು ನಂಬಿ, ಮತ ಹಾಕಲು ಕಾರಣವಾದವು.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply