ಹಕ್ಕುಪತ್ರಕ್ಕೆ ಸಹಿ ಹಾಕುವಾಗ ವಜುಭಾಯ್ ಪಟೇಲ್ ಇವರಿಗೆ ಒಳ್ಳೆಯವರಿದ್ದರು, ಈಗ!!
ಎಚ್ ಡಿ ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲ. ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು, ಸಂದರ್ಭ ಸಹಿತ ವಿವರಿಸಿ ಎನ್ನುವ ಪ್ರಶ್ನೆಯನ್ನು ನಾಡಿದ್ದು ಜೂನ್-ಜುಲೈಯಲ್ಲಿ ಎಂಟನೇ ಅಥವಾ ಒಂಭತ್ತನೆ ತರಗತಿಯ ಮಕ್ಕಳಿಗೆ ಪ್ರಥಮ ತಿಂಗಳ ಪರೀಕ್ಷೆಯಲ್ಲಿ ಕೇಳಿದರೆ ಅವರು ಸ್ಪಷ್ಟವಾಗಿ ವಿವರಿಸುತ್ತಾರೆ. ಯಾಕೆಂದರೆ ಮೇಲಿನ ವಾಕ್ಯವನ್ನು ಸಿದ್ಧರಾಮಯ್ಯನವರು ಎಪ್ರಿಲ್-ಮೇ ತಿಂಗಳಲ್ಲಿ ಮತ್ತು ಚುನಾವಣೆಯ ಹಿಂದಿನ ದಿನದ ತನಕ ಹೋದ ಕಡೆಯಲ್ಲೆಲ್ಲ ಹೇಳುತ್ತಾ ಬಂದಿದ್ದಾರೆ. ಕೆಲವು ವೇದಿಕೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಹೇಳಿದ್ದಾರೆ. ಅದಕ್ಕೆ ಜನರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಮಾಧ್ಯಮಗಳು ಈ ಹೇಳಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಮಾಧ್ಯಮದವರು ಕೇಳಿದಾಗ ಎಚ್ ಡಿಕೆ ಖಡಕ್ ಮಾತುಗಳಲ್ಲಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಪತ್ರಕರ್ತರು ಸಿದ್ಧರಾಮಯ್ಯ ಹೀಗೆ ಹೇಳ್ತಾರಲ್ಲ ಎಂದು ದೇವೆಗೌಡರನ್ನು ಕೇಳಿದ್ದಕ್ಕೆ ದೇವೆಗೌಡರು ಕಣ್ಣಲ್ಲಿ ನೀರು ಹಾಕಿದ್ದಾರೆ. ದೇವೆಗೌಡರು ಕಣ್ಣೀರು ಹಾಕಿದ್ದನ್ನು ಮಾಧ್ಯಮಗಳು ತೋರಿಸಿವೆ. ಆ ಬಗ್ಗೆ ಸಿದ್ಧರಾಮಯ್ಯ ಹಗುರವಾಗಿ ದೇವೆಗೌಡರ ಬಗ್ಗೆ ಕಮೆಂಟ್ ಮಾಡಿದ ಘಟನೆ ಕೂಡ ಆಗಿದೆ. ಸಿದ್ಧರಾಮಯ್ಯನವರ ಇಂತಹ ಮಾತುಗಳನ್ನು ಕೇಳಿ ನೋವುಂಡ ದೇವೆಗೌಡರು ಜಾತ್ಯಾತೀತ ಜನತಾದಳಕ್ಕೆ ಬಹುಮತ ಬರದೇ ಇದ್ದರೆ ತಾವು ತಮ್ಮ ತಮ್ಮ ಮಗ ತಟಸ್ಥರಾಗಿ ಇರುತ್ತೇವೆ ಹೊರತು ಯಾರೊಂದಿಗೂ ಸೇರಿ ಸರಕಾರ ರಚಿಸುವುದಿಲ್ಲ ಎಂದು ಹೇಳಿದ ಘಟನೆ ಕೂಡ ನಡೆದಿದೆ. ಜೆಡಿಎಸ್ ಬಹುಮತದಿಂದ ದೂರ ಉಳಿದರೆ ರಾಜಕಾರಣ ಬಿಟ್ಟು ದೂರ ಹೋಗುತ್ತೇನೆ ಎಂದು ಕೂಡ ಕುಮಾರಸ್ವಾಮಿ ಹೇಳಿದ್ದಾರೆ. ಒಂದು ವೇಳೆ ತಮ್ಮ ಮಗ ಮಾತು ಮೀರಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಆತ ತನ್ನ ಮಗನೇ ಅಲ್ಲ ಎಂದು ಕೂಡ ದೇವೇಗೌಡರು ಹೇಳಿದ್ದನ್ನು ರಾಜ್ಯ ಕಂಡಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಹೇಳಿ ರಾಹುಲ್ ಗಾಂಧಿ ಟೀಕಿಸುತ್ತಿದ್ದಾಗ ದೇವೆಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದರು. ಇದನ್ನು ಕೂಡ ಜನ ಗಮನಿಸಿದ್ದಾರೆ.
ಕಾರ್ಯಕರ್ತರು ಹೊಡೆದಾಡಿಕೊಂಡರೆ ನಾಯಕರು ರೆಸಾರ್ಟಿನಲ್ಲಿ ಆರಾಮವಾಗಿದ್ದಾರೆ…
ಸಿದ್ಧರಾಮಯ್ಯನವರು ಕುಮಾರಸ್ವಾಮಿಯವರನ್ನು ಹೀನಾಯಮಾನವಾಗಿ ಬೈದು ತಿರುಗುತ್ತಿರುವಾಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯನವರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತ ಮರಿಸ್ವಾಮಿ ಎದುರಾದಾಗ ತಮ್ಮ ಪಕ್ಷಕ್ಕೆ ಬಾ ಎಂದು ಕರೆದದ್ದು, ಸಿದ್ಧರಾಮಯ್ಯನವರ ಎದುರೇ ನಿಂತು ತಾನು ನಿಮ್ಮ ಪಕ್ಷಕ್ಕೆ ಸೇರುವುದಿಲ್ಲ ಎಂದು ಮರಿಸ್ವಾಮಿ ಹೇಳಿದ್ದು ಎಲ್ಲಾ ಟಿವಿಯಲ್ಲಿ ನಾವು ನೋಡಿದ್ದೇವೆ. ಇಂತಹ ಕಾರ್ಯಕರ್ತರೇ ನಮ್ಮ ಪಕ್ಷದ ಜೀವಾಳ ಎಂದು ಎಚ್ ಡಿಕೆ ಮರಿಸ್ವಾಮಿಯನ್ನು ಹೊಗಳಿದ್ದು ಎಲ್ಲವೂ ಆಗಿದೆ. ಇವತ್ತು ನೋಡಿದರೆ ಸಿದ್ದು ಮತ್ತು ಕುಮಾರಸ್ವಾಮಿ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗುತ್ತಿದ್ದಾರೆ. ಅತ್ತ ಬೈದಾಡಿಕೊಂಡ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ರಾಜಕೀಯ ಎಂದರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಬಾರಿ ನಾಚಿಕೆ ಇಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮತ ಕೇಳಲು ಗ್ರಾಮಗಳಿಗೆ ಬಂದಾಗ ಅವರಿಗೆ ಬುದ್ಧಿ ಕಲಿಸಬೇಕೆಂದು ಎರಡೂ ಪಕ್ಷಗಳ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ವಜುಭಾಯ್ ಇದ್ದ ಕಾರಣ ಕಾಂಗ್ರೆಸ್ಸಿಗರಿಗೆ ಮತ ಕೇಳುವಾಗ ಕೈಯಲ್ಲಿ ಹಕ್ಕುಪತ್ರ ಇತ್ತು…
ಇನ್ನು ಅಪವಿತ್ರ ಮೈತ್ರಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ವಿರುದ್ಧ ಅಪಸ್ವರ ಎತ್ತಿದ್ದ ತಂಡದಲ್ಲಿದ್ದ ಅಭಿಷೇಕ್ ಸಿಂಘ್ವಿಯಂತಹ ಕಾಂಗ್ರೆಸ್ಸಿಗರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಶೋಬನಕ್ಕೆ ಮುಹೂರ್ತ ಕೇಳಿಬಂದಿದ್ದಾರೆ. ಈಗ ಇರುವ ಪ್ರಶ್ನೆ ಎಂದರೆ ಕರ್ನಾಟಕದ ಪ್ರಜ್ಞಾವಂತ ನಾಗರಿಕರು ಮೊನ್ನೆ ಮೇ 12 ರಂದು ಯಾರ ಪರ ಮತ್ತು ಯಾರ ವಿರುದ್ಧ ಮತ ಚಲಾಯಿಸಿದ್ದು ಎನ್ನುವುದು ನಿರ್ಧಾರ ಆಗಬೇಕು. 104 ಸ್ಥಾನ ಬಂದಿರುವ ಬಿಜೆಪಿಗೆ ಬಹುಮತಕ್ಕೆ ಬೆರಳೆಣಿಕೆಯ ಸ್ಥಾನ ಕಡಿಮೆ ಬಂದಿರಬಹುದು. ಆದರೆ ಜೆಡಿಎಸ್ ಪಕ್ಷಕ್ಕೆ 155 ಕ್ಷೇತ್ರಗಳಲ್ಲಿ ಡಿಪಾಸಿಟ್ ಕಿತ್ತು ಹೋಗಿದೆ. ಕಾಂಗ್ರೆಸ್ ಮೂರಂಕಿಯಿಂದ ಎರಡಂಕೆಗೆ ಬಂದಿದೆ. ಕಾಂಗ್ರೆಸ್ ಸಂಪುಟದ ಅರ್ಧಕ್ಕಿಂತ ಹೆಚ್ಚು ಸಚಿವರು ಸೋತಿದ್ದಾರೆ. ಅದರ್ಥ ಜನ ಸಂದೇಶ ಸ್ಪಷ್ಟವಾಗಿತ್ತು.
ಇನ್ನು ರಾಜ್ಯಪಾಲ ವಜುಭಾಯ್ ಪಟೇಲ್ ಅವರು ಅತೀ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವನ್ನು ಬಹುಮತ ಸಾಬೀತುಪಡಿಸಲು ಕರೆದದ್ದು ತಪ್ಪು ಎಂದು ಕಾಂಗ್ರೆಸ್ ವಾದಿಸುತ್ತಿದೆ. ರಾಜ್ಯಪಾಲರು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದೆ. ಇದೇ ವಜುಭಾಯ್ ಪಟೇಲ್ ಅವರು ಸಹಿ ಹಾಕದೆ ಹೋಗಿದ್ದರೆ ಚುನಾವಣೆಗೆ ತಿಂಗಳುಗಳು ಇರುವಾಗ ನಮ್ಮ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಶಾಸಕರಾಗಿದ್ದ ಕಾಂಗ್ರೆಸ್ಸಿಗರು ಹಕ್ಕುಪತ್ರ ಹಿಡಿದು ಅಲ್ಲಲ್ಲಿ ಹಂಚುವ ನಾಟಕ ಮಾಡಿ ಜನರ ವೋಟ್ ಸೆಳೆಯುವ ಕೆಲಸ ಮಾಡುವುದು ಸಾಧ್ಯವೆ ಇರಲಿಲ್ಲ. ಹಿಂದಿನ ಬಾರಿ ಬಿಜೆಪಿ ಸರಕಾರ ರಾಜ್ಯದಲ್ಲಿ ಇದ್ದಾಗ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ್ ಹಕ್ಕುಪತ್ರಗಳಿಗೆ ಸಹಿ ಹಾಕಲು ಆಟವಾಡಿಸಿ ಕ್ರೆಡಿಟ್ ಬಿಜೆಪಿಗೆ ಸಿಗದ ಹಾಗೆ ಮಾಡಿದ್ದರು. ವಜುಭಾಯ್ ಪಟೇಲ್ ಕಾಂಗ್ರೆಸ್ ಸರಕಾರ ಇದ್ದಾಗ ಸಹಿ ಹಾಕಲು ಹಿಂದೇಟು ಹಾಕಿಲ್ಲ. ಅವರು ಸಹಿ ಹಾಕಿದ ಕಾರಣದಿಂದ ಕಾಂಗ್ರೆಸ್ಸಿಗೆ ಲಾಭವಾಗಿದೆ. ಆದರೆ ಕಾಂಗ್ರೆಸ್ಸಿಗರ ವೋಟ್ ಬ್ಯಾಂಕ್ ರಾಜಕೀಯ ಗೊತ್ತಿದ್ದ ಕಾರಣ ಮತದಾರ ಮತ ಹಾಕಿಲ್ಲ ಅಷ್ಟೇ. ಆದರೆ ನಿನ್ನೆ ಮಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಮಾಡಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಂಗಳೂರು ನಗರ ದಕ್ಷಿಣದ ನಿಕಟಪೂರ್ವ ಶಾಸಕರು ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ರಾಜಕೀಯ ಮಾಡುವುದಿದ್ದರೆ ಇವರುಗಳ ಹಕ್ಕುಪತ್ರದ ಡ್ರಾಮ ನಡೆಯುತ್ತಲೇ ಇರಲಿಲ್ಲ!
Leave A Reply