ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷದಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕೆ?

ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ದೇಶದ ಗಮನವನ್ನೇ ಸೆಳೆಯುತ್ತಿವೆ. ಒಂದೆಡೆ 104 ಸೀಟುಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಅಧಿಕಾರ ವಹಿಸಿಕೊಂಡಿದೆ. ಇತ್ತ ಬಹುಮತ ಸಾಬೀತುಪಡಿಸುವ ಸವಾಲನ್ನೂ ಸ್ವೀಕರಿಸಿದೆ.
ಆದರೆ ಈ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದ್ದು ಒಂದೇ ವರಾತ. ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ, ಕೊಲೆ ಮಾಡುತ್ತಿದೆ ಎಂದು ಕಾಂಗ್ರೆಸ್ ಬೊಬ್ಬೆ ಹಾಕುತ್ತಿದೆ. ಅದರಲ್ಲೂ ಮೇ 16ರಂದು ಸುಪ್ರೀಂ ಕೋರ್ಟ್ ಬಿ.ಎಸ್.ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅನುಮತಿ ನೀಡಿತೋ, ಇದು ಪಾಕಿಸ್ತಾನದ ನ್ಯಾಯಾಂಗ ಎನ್ನುವ ಮೂಲಕ ರಾಹುಲ್ ಗಾಂಧಿ ದೇಶದ ನ್ಯಾಯಾಂಗವನ್ನೇ ಕಟಕಟೆಗೆ ತಂದುಬಿಟ್ಟರು.
ಅಷ್ಟಕ್ಕೂ ಈ ಕಾಂಗ್ರೆಸ್ಸು ಯಾರ ಕಿವಿ ಮೇಲೆ ಹೂ ಇಡಲು ಹೊರಟಿದೆ? ಯಾರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ ಈ ರಾಹುಲ್ ಗಾಂಧಿ? ಯಾರು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ್ದಾರೆ? ಇಷ್ಟಕ್ಕೂ ನ್ಯಾಯಾಲಯದ ಆದೇಶ ತಿರಸ್ಕರಿಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ಸಿನಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕೆ?
ಕಳೆದ ಮೇ 16ರಂದು ಏನಾಯಿತು ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ. ಸಾಂವಿಧಾನಿಕವಾಗಿ ಹೆಚ್ಚು ಸ್ಥಾನಗಳನ್ನು ಹೊಂದಿದ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬುದನ್ನು ಗಮನಿಸಿಯೇ ರಾಜ್ಯಪಾಲರು ಯಡಿಯೂರಪ್ಪನವರಿಗೆ ಅಧಿಕಾರ ಸ್ವೀಕರಿಸಲು ಅನುಮತಿ ನೀಡಿದ್ದರು. ಸುಪ್ರೀಂ ಕೋರ್ಟ್ ಸಹ ಹೀಗೆಯೇ ಹೇಳಿತು. ಆದರೂ ಈ ಕಾಂಗ್ರೆಸ್ಸಿನವರು ಇದು ಪ್ರಜಾಪ್ರಭುತ್ವದ ಕೊಲೆ ಎಂದೇ ಬೊಬ್ಬೆ ಹಾಕಿದರು,
ಆದರೆ ಸುಪ್ರೀಂ ಕೋರ್ಟ್ ಮತ್ತೆ ಪ್ರಕರಣವನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡು ಶನಿವಾರವೇ ಬಿಜೆಪಿ ಬಹುಮತ ಸಾಬೀತುಪಡಿಸಬೇಕು ಎಂದಾಗಲೇ ಈ ಕಾಂಗ್ರೆಸ್ಸಿಗರು ಬೊಬ್ಬೆ ಹಾಕುವುದನ್ನು ನಿಲ್ಲಿಸಿದರು. ಹಾಗಂತ ಇವರು ಸುಪ್ರೀಂ ಕೋರ್ಟ್ ನ್ಯಾಯಯುತವಾಗಿ ತೀರ್ಪು ನೀಡಿದೆ ಎಂದು ಸುಮ್ಮನಾಗಿಲ್ಲ, ಬದಲಾಗಿ ತಮ್ಮ ಶಾಸಕರನ್ನು ತುಂಬ ದಿನ ಒಡಲಲ್ಲಿ ಇಟ್ಟುಕೊಳ್ಳಲಾಗದೆ, ಅಧಿಕಾರ ಸಿಗುತ್ತದೆ ಎಂಬ ಆಸೆಯಿಂದ ಸುಮ್ಮನಾಗಿದ್ದಾರೆ.
ಪ್ರಜಾಪ್ರಭುತ್ವದ ಕುರಿತು ಇಷ್ಟೆಲ್ಲ ಮಾತನಾಡುವ ಕಾಂಗ್ರೆಸ್ಸಿಗರು ತಾವೇ ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಎಂಬುದನ್ನು ಮರೆತುಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಸುಪ್ರೀಂ ಕೋರ್ಟೇ ತ್ರಿವಳಿ ತಲಾಖ್ ನಿಷೇಧಿಸಿದರೂ ಈ ಕಾಂಗ್ರೆಸ್ಸಿಗರು ರಾಜ್ಯಸಭೆಯಲ್ಲಿ ಮಸೂದೆಗೆ ಸಹಿ ಹಾಕಲು ವಿರೋಧಿಸುತ್ತಾರೆ. ಕೇಂದ್ರ ಸರ್ಕಾರದ ಪರ ಬರುವ ತೀರ್ಪುಗಳೆಲ್ಲವನ್ನೂ ಕಾಂಗ್ರೆಸ್ ವಿರೋಧಿಸುತ್ತದೆ. ಅದೇ 2 ಜಿ ಹಗರಣದಲ್ಲಿ ಆರೋಪಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗುತ್ತದೆ, ಉಳಿದೆಲ್ಲವೂ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ಧಾರ, ಸುಪ್ರೀಂ ಕೋರ್ಟ್ ತೀರ್ಪಿನಿಂದ ತಮಗೆ ಅನುಕೂಲವಾದರೆ ಮಾತ್ರ ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವದ ಗೆಲುವು ಎನ್ನುತ್ತಾರೆ. ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವದ ಕೊಲೆಯಾಗಿಬಿಡುತ್ತದೆ. ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಟಿಎಂಸಿ ಕಾರ್ಯಕರ್ತರು ಮತಯಂತ್ರವನ್ನೇ ಎಸೆದು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದರೂ ಕಾಂಗ್ರೆಸ್ ಸೊಲ್ಲೆತ್ತಲಿಲ್ಲ. ಅದೇ ನ್ಯಾಯಾಲಯದ ಅನುಮತಿಯಂತೆ ಯಡಿಯೂರಪ್ಪ ಸಿಎಂ ಆದರೆ ಅದು ಸಂವಿಧಾನಕ್ಕೆ ವಿರೋಧ. ಹೇಳಿ ಇಂತಹ ಇಬ್ಬಂದಿತನದ ಕಾಂಗ್ರೆಸ್ಸಿಗೆ ಏನೆನ್ನೋಣ? ಅಷ್ಟಕ್ಕೂ ನಾವು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದವರಿಂದ ಪ್ರಜಾಪ್ರಭುತ್ವದ ಪಾಠ ಕಲಿಯೇಬೇಕೆ? ಅವಲೋಕಿಸಿ…
Leave A Reply