ಪ್ರಥಮ ವಾರದಲ್ಲಿಯೇ ಎರಡು ‘U TURN’ ತೆಗೆದುಕೊಂಡ ಮೊದಲ ಸಿಎಂ ಕುಮಾರಸ್ವಾಮಿ!!
ಮುಖ್ಯಮಂತ್ರಿ ಆದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ ತಮ್ಮ ಪಕ್ಷಕ್ಕೆ ಬಹುಮತ ಇಲ್ಲದೇ ಇರುವುದರಿಂದ ಅದು ಸಾಧ್ಯವಿಲ್ಲ ಎಂದು ತಮ್ಮ ಮೊದಲ ಯೂಟರ್ನ್ ತೆಗೆದುಕೊಂಡಾಗಿದೆ. ಇವರ ಪಕ್ಷಕ್ಕೆ ಬಹುಮತ ಇಲ್ಲ ಎಂದು ಗೊತ್ತಿದ್ದರೂ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ಸಿನ ಜೊತೆಗೆ ಇವರು ಸೇರಿ ಸರಕಾರ ಮಾಡಿರುವಾಗ ರೈತರ ಸಾಲಮನ್ನಾ ಮಾಡೋಣ ಎಂದು ಇವರು ಕಾಂಗ್ರೆಸ್ಸನ್ನು ಒಲಿಸಬೇಕಿತ್ತು. ಆದರೆ ಯಾವ ಕಾರಣಕ್ಕೂ ರೈತರ ಸಾಲಮನ್ನಾ ಮಾಡೋಣ ಎಂದು ಕಾಂಗ್ರೆಸ್ಸು ಹೇಳುವುದಿಲ್ಲ ಎನ್ನುವುದು ಜೆಡಿಎಸ್ ಗೆ ಕೂಡ ಗೊತ್ತು. ಯಾಕೆಂದರೆ ಕುಮಾರಸ್ವಾಮಿ ಸಾಲಮನ್ನಾ ಮಾಡುವುದೂ ಒಂದೇ, ಕಾಂಗ್ರೆಸ್ ತನ್ನ ಕಾಲ ಮೇಲೆ ಚಪ್ಪಡಿ ಎಳೆಯುವುದೂ ಒಂದೇ ಎನ್ನುವುದು ಗೊತ್ತಿಲ್ಲದಷ್ಟು ದಡ್ಡರು ಕಾಂಗ್ರೆಸ್ ನಲ್ಲಿ ಇದ್ದಂತೆ ಕಾಣಿಸುವುದಿಲ್ಲ. ಒಮ್ಮೆ ಕುಮಾರಸ್ವಾಮಿ ಕೈಯಲ್ಲಿ ರೈತರ ಸಾಲಮನ್ನಾ ಮಾಡಿಸಿದರೆ ನಾಡಿದ್ದು ಲೋಕಸಭಾ ಚುನಾವಣೆಯಲ್ಲಿ ಪ್ರಸ್ತುತ ಎರಡು ಸ್ಥಾನಗಳಿರುವ ಜೆಡಿಎಸ್ ಹನ್ನೆರಡಕ್ಕೆ ಮತ್ತು ಒಂಭತ್ತು ಸ್ಥಾನಗಳಿರುವ ಕಾಂಗ್ರೆಸ್ ಎರಡಕ್ಕೆ ಬಂದು ನಿಲ್ಲುತ್ತೆ ಎನ್ನುವುದು ಡಿಕೆಶಿಗೆ ಚೆನ್ನಾಗಿ ಗೊತ್ತು. ಇವರು ಬಿಡುವುದಿಲ್ಲ, ಅವರಿಗೆ ಆಗುವುದಿಲ್ಲ.
ಎತ್ತಿನಹೊಳೆ ತಿರುವಿನಲ್ಲಿ ಸಿಎಂ U TURN…
ಇನ್ನು ಎತ್ತಿನಹೊಳೆ ತಿರುವು ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಚುನಾವಣಾ ಪೂರ್ವದಲ್ಲಿ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಈಗ ಆ ವಿಷಯದಲ್ಲಿ ಸಾಫ್ಟ್ ಆಗುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಯಾಕೆಂದರೆ ಎತ್ತಿನಹೊಳೆ ತಿರುವು ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ಕುಮಾರಸ್ವಾಮಿ ಹೊರಟ ಕೂಡಲೇ ಇಲ್ಲಿ ಸರಕಾರ ಅಲ್ಲಾಡಲು ಶುರುವಾಗುತ್ತದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಇನ್ನು ಕರಾವಳಿಯ ಯುವಜನತೆ ತಮಗೆ ಏನಾದರೂ ಪ್ರಾಬ್ಲಂ ಆದ ಕೂಡಲೇ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಕುಮಾರಸ್ವಾಮಿ ಹೇಳಿ ಇಲ್ಲಿನ ಬಿಜೆಪಿ ಪಾಳಯಕ್ಕೆ ತಾವು ಕರಾವಳಿಗೆ ಧುಮುಕುವ ಸೂಚನೆ ಕೊಟ್ಟಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ ಅಂಶವೆಂದರೆ ಇಲ್ಲಿ ಜೆಡಿಎಸ್ ತನ್ನ ಬೇರನ್ನು ಇಳಿಸಲು ಪ್ರಯತ್ನ ಮಾಡಲು ಹೊರಟರೆ ಅದನ್ನು ಅಲ್ಲಲ್ಲಿಯೇ ಕಟ್ ಮಾಡಲು ಇಲ್ಲಿನ ಕಾಂಗ್ರೆಸ್ ನಾಯಕರು ಎದ್ದು ನಿಲ್ಲುತ್ತಾರೆ. ಇಲ್ಲಿ ಏನಿದ್ದರೂ ಬಿಜೆಪಿ-ಕಾಂಗ್ರೆಸ್ ನೇರ ಸ್ಪರ್ಧೆ. ಜೆಡಿಎಸ್ ಇಲ್ಲಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎನ್ನುವುದು ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೊನ್ನೆ ಬಿಜೆಪಿಯ ವಿಜಯೋತ್ಸವದ ವೇಳೆ ನಡೆಸಿದ ದಾಂಧಲೆ ಜಗಜ್ಜಾಹೀರಾಗಿದೆ. ಅದರ ನಂತರ ವಿಟ್ಲದ ಪರಿಸರದಲ್ಲಿ ಕೂಡ ಬಿಜೆಪಿ ಕಾರ್ಯಕರ್ತರ ಮೇಲೆ ಮತ್ತು ಅವರ ಮನೆಗಳ ಮೇಲೆ ದಾಳಿ ನಡೆಸಿದ ಕಾಂಗ್ರೆಸ್ ಬೆಂಬಲಿಗರು ಏನು ಮಾಡಿದರು ಎಂದು ಎಲ್ಲರಿಗೂ ಗೊತ್ತಿದೆ. ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕರು ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತಕ್ಷಣ ಮಾಡಿರುವ ವಿಜಯೋತ್ಸವದಲ್ಲಿ ಕಾಂಗ್ರೆಸ್ ಫುಡಾರಿಯೊಬ್ಬ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಘಟನೆಯೂ ನಡೆದಿದ್ದು ಆ ಬಗ್ಗೆ ತನಿಖೆ ನಡೆಯುತ್ತಿದೆ. ಇಲ್ಲಿ ಏನಿದ್ದರೂ ಅದು ನೇರ ಪೈಪೋಟಿ. ಒಂದು ವೇಳೆ ದನಗಳವು ಅಥವಾ ಲವ್ ಜಿಹಾದ್ ನಂತಹ ಕೃತ್ಯಗಳು ನಡೆದಾಗ ಸಿಎಂ ಕುಮಾರಸ್ವಾಮಿ ಯಾರ ಪರವಾಗಿ ನಿಲ್ಲುತ್ತಾರೆ ಎನ್ನುವುದು ಸದ್ಯದ ಪ್ರಶ್ನೆ. ಇಲ್ಲಿನ ಯುವ ಜನತೆಯ ವೋಟ್ ಪಡೆಯಲು ಏನಾದರೂ ತೊಂದರೆಯಾದಲ್ಲಿ ಸಂಪರ್ಕಿಸಿ ಎಂದು ಕರೆಕೊಟ್ಟ ಕುಮಾರಸ್ವಾಮಿ ಕಾಂಗ್ರೆಸ್ಸಿಗರ ತಪ್ಪು ಇದೆ ಎಂದು ಗೊತ್ತಾದಾಗ ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಸಿದರೆ ಅವರಿಗೆ ನ್ಯಾಯ ಕೊಡಿಸುತ್ತಾರಾ? ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡರೆ ಅವರಿಗೆ ಇಲ್ಲಿ ಕಾಂಗ್ರೆಸ್ ಮುಖಂಡರು ಬಿಡುತ್ತಾರಾ? ಒಂದು ವೇಳೆ ಕಾಂಗ್ರೆಸ್ ಮುಖಂಡರ ಪರವಾಗಿ ತನಿಖೆ ಆಗದಿದ್ದರೆ ಅಲ್ಲಿಗೆ ಸಿಎಂ ಅವಧಿ ಮುಗಿಯಲು ದಿನಗಣನೆ ಆರಂಭವಾಯಿತು ಎಂದೇ ಅರ್ಥ.
CM ಒಳ್ಳೆಯ ಆಡಳಿತ ಕೊಟ್ಟರೆ ಅದು ಕಾಂಗ್ರೆಸ್ ಗೆ ಸಂಚಕಾರ…
ಕಾಂಗ್ರೆಸ್ ಸದ್ಯ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಪರಿಸ್ಥಿತಿ ನೋಡಿ ಆರು ತಿಂಗಳ ಬಳಿಕ ಸಿಎಂಪಿ ಮೀಟಿಂಗ್ ನಲ್ಲಿ 30:30 ಸೂತ್ರ ಕಾಂಗ್ರೆಸ್ ಮಂಡಿಸಿದರೆ ಆವತ್ತಿನಿಂದಲೇ ಯುದ್ಧ ಕೌರವರ ಪಾಳಯದಲ್ಲಿ ಶುರುವಾಯಿತು ಎಂದೇ ಅರ್ಥ. ನೀವು ನನಗೆ ಐದು ವರ್ಷಕ್ಕೆ ಸಿಎಂ ಸ್ಥಾನ ಕೊಟ್ಟಿದ್ದಿರಿ, ಈಗ ಮಾತು ತಪ್ಪುತ್ತಿದ್ದಿರಿ ಎಂದು ಕುಮಾರಸ್ವಾಮಿ ಹೇಳಲು ಹೋದರೆ ನೀವು ನಮಗೆ ಮಾತು ತಪ್ಪುವ ಬ್ರಾಂಡ್ ಮಾಡುವುದು ಬೇಡಾ, ಮಾತು ಕೊಡುವುದು ಮತ್ತು ತಪ್ಪುವುದು ನಿಮ್ಮ ಜಾಯಮಾನ ಎಂದು ಕಾಂಗ್ರೆಸ್ ನಾಯಕರು ಹೇಳಿ ಎದ್ದು ಹೊರಗೆ ಬಂದರೆ ಆವತ್ತೆ ರಾಜ್ಯ ಸರಕಾರ ಕೋಮಾಕ್ಕೆ ಹೋಗಿದೆ ಎಂದು ಅಂದುಕೊಳ್ಳಬಹುದು. ಏಕೆಂದರೆ ಹತ್ತು ವರ್ಷದ ಹಿಂದೆ ಬಿಜೆಪಿ-ಜೆಡಿಎಸ್ ಸರಕಾರ ಇದ್ದಾಗ ಮಾತು ತಪ್ಪಿದ ಬ್ರಾಂಡ್ ಏನಿದ್ದರೂ ಕುಮಾರಸ್ವಾಮಿ ಹೆಸರಲ್ಲಿದೆ. ಬಹುಮತ ಬರದೇ ಇದ್ದರೆ ಯಾವುದೇ ಪಕ್ಷಕ್ಕೆ ಸೇರಲ್ಲ, ಯಾರು ಬಂದರೂ ನಾವು ಮೈತ್ರಿ ಮಾಡಲ್ಲ ಎಂದು ಟಿವಿ ವಾಹಿನಿಗಳಲ್ಲಿ ಕುಮಾರಸ್ವಾಮಿ ಹೇಳಿದ್ದು ಎಲ್ಲವೂ ಜನರ ಮುಂದಿದೆ. ಆದರೆ ಎಚ್ ಡಿಕೆ ಈಗ ರಾಜ್ಯದ ಆರೂವರೆ ಕೋಟಿ ಜನರ ಹಿತರಕ್ಷಣೆಗಾಗಿ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದ್ದೇನೆ ಎನ್ನುತ್ತಿದ್ದಾರೆ. ಆರು ತಿಂಗಳ ಬಳಿಕ ಕಾಂಗ್ರೆಸ್ ಹೊಸ ಡಿಮಾಂಡ್ ಇಟ್ಟರೆ ಆರೂವರೆ ಕೋಟಿ ಜನರ ಹಿತರಕ್ಷಣೆಗಾಗಿ ವಿಧಾನಸಭೆ ವಿಸರ್ಜಜಿಸುತ್ತಿದ್ದೇನೆ ಎಂದು ಹೇಳಿದರೂ ಅಚ್ಚರಿ ಇಲ್ಲ.
ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ಕಣ್ಣು ತುಂಬಿಕೊಳ್ಳಲು ಬಿಜೆಪಿಯೇತರ ರಾಜ್ಯಗಳಿಂದ ಅಷ್ಟೂ ನರೇಂದ್ರ ಮೋದಿ ವಿರೋಧಿಗಳು ಬೆಂಗಳೂರಿಗೆ ಬಂದು ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಇವರೆಲ್ಲಾ ಒಂದಾಗಿರುವುದು ತಮ್ಮ ಅಸ್ತಿತ್ವ ಉಳಿಸಲು ವಿನ: ಯಾವುದೇ ಜನಪರ ಕಾಳಜಿಯಿಂದ ಅಲ್ಲ ಎನ್ನುವುದು ಜನರಿಗೆ ಗೊತ್ತಾಗಿದೆ. ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಮೈತ್ರಿ ಮಾಡಿಕೊಂಡ ದೇವೇಗೌಡರ ಮಗನ ಪಟ್ಟಾಭಿಷೇಕಕ್ಕೆ ಬಂದು ತಮ್ಮದು ಕೂಡ ಇದೇ ಸಿದ್ಧಾಂತ ಎಂದು ತೋರಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರ ಪಕ್ಷಕ್ಕೆ ಬಹುಮತ ಬಂದು ದೇಶದ ಎಲ್ಲಾ ಘಟಾನುಘಟಿಗಳು ಒಂದಾಗಿದ್ದರೆ ಆಗ ಬೇರೆ ವಿಷಯ. ಕೇವಲ ಬಿಜೆಪಿಯನ್ನು ಅಧಿಕಾರದಿಂದ ತಡೆಯುವ ಉದ್ದೇಶದಿಂದ ಒಟ್ಟಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನೆಂಟಸ್ತನವನ್ನು ಸಂಭ್ರಮಿಸಲು ಓಡೋಡಿ ಬಂದ ಬೀಗರುಗಳು ಇದು ಅಧಿಕಾರಕ್ಕಾಗಿ ಒಂದಾದದ್ದು, ಅಭಿವೃದ್ಧಿಗಾಗಿ ಅಲ್ಲ ಎಂದು ಕೈ ಎತ್ತಿ ಇಶಾರೆ ಮಾಡಿದ್ದಾರೆ. ಅದಕ್ಕಾಗಿ ಲಾಲೂ ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ರಿಂದ ಹಿಡಿದು ಮಮತಾ ಬ್ಯಾನರ್ಜಿ ತನಕ ಎಲ್ಲರೂ ಛದ್ಮವೇಷ ಹಾಕಿ ವಿಧಾನಸೌಧದ ಎದುರು ರ್ಯಾಂಪ್ ವಾಕ್ ಮಾಡಿದ್ದಾರೆ. ದೇವೇಗೌಡರು ಮನೆಯ ಮದುವೆ ಸಮಾರಂಭ ಎನ್ನುವಂತೆ ಎಲ್ಲರನ್ನು ಎದುರುಗೊಂಡಿದ್ದಾರೆ. ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೋ, ಇಲ್ವೋ ಆದರೆ ಅವರ ಪದಗ್ರಹಣ ಮಾತ್ರ ನರೇಂದ್ರ ಮೋದಿಯವರ ವಿರೋಧಿಗಳಿಗೆ ಒಟ್ಟಾಗಲು ವೇದಿಕೆ ಸಿಕ್ಕಿದಂತೆ ಆಯಿತು!!
Leave A Reply