ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮಾಯಾವತಿ ಬಿಎಸ್ಪಿಯನ್ನು ಹೇಗೆ ಕುಟುಂಬದ ಸೊತ್ತು ಮಾಡಿಕೊಂಡಿದ್ದಾರೆ ಗೊತ್ತಾ?
ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು ಆಗಾಗ ಪ್ರಜಾಪ್ರಭುತ್ವಕ್ಕೆ ಧಕ್ಕೆ ಎದುರಾಗಿದೆ. ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಣಿಮುತ್ತು ಉದುರಿಸುತ್ತಾರೆ. ರಾಜ್ಯದಲ್ಲಿ ಬಿಎಸ್ಪಿ ಮೂಲೆಗುಂಪಾಗಿರುವುದನ್ನು ಸಹಿಸದೆ, ತಮ್ಮ ಅಸ್ತಿತ್ವಕ್ಕಾಗಿ ಮಾಯಾವತಿ ಹೀಗೆಲ್ಲ ಮಾತನಾಡುತ್ತಾರೆ ಎಂದು ನಿರ್ಲಕ್ಷಿಸಬಹುದು.
ಆದರೆ ಪ್ರಜಾಪ್ರಭುತ್ವದ ಬಗ್ಗೆ ಇಷ್ಟೆಲ್ಲ ಭಾಷಣ ಬಿಗಿಯುವ ಮಾಯಾವತಿಯುವರು ಪ್ರಜಾಪ್ರಭುತ್ವದ ಕೆಲವು ಅಂಶಗಳನ್ನು ಪಾಲಿಸಬೇಕಲ್ಲವೇ? ಕಳೆದ ಹಲವು ವರ್ಷಗಳಿಂದ ಯಾರಿಗೂ ಬಿಟ್ಟುಕೊಡದೆ ಬಿಎಸ್ಪಿಯ ಅಧಿನಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಯಾವತಿಯವರಿಗೆ ಇನ್ನೂ 20 ವರ್ಷ ಬಿಎಸ್ಪಿಯ ಅಧ್ಯಕ್ಷೆಯಾಗಿ ಮುಂದುವರಿಯುವ ಆಸೆಯಂತೆ. ಅಲ್ಲಿಗೆ ಇವರು ಪ್ರಜಾಪ್ರಭುತ್ವದ ಮೇಲೆ ಎಷ್ಟು ಗೌರವ ಇಟ್ಟಿದ್ದಾರೆ ಎಂದಾಯಿತಲ್ಲವೇ?
ಹೌದು, ರಾಜ್ಯ ರಾಜಧಾನಿ ಲಖನೌನಲ್ಲಿ ಆಯೋಜಿಸಲಾಗಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 20 ವರ್ಷಗಳವರೆಗೆ ನಾನೇ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತೇನೆ. ಯಾರೂ ಅಧ್ಯಕ್ಷಗಿರಿಯ ಮೇಲೆ ಕಣ್ಣಿಡಬೇಡಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಬಿಎಸ್ಪಿ ಸಂಸ್ಥಾಪಕ, ಇದೇ ಮಾಯಾವತಿಯ ಗುರು ಕಾನ್ಶಿರಾಮ್ ಅವರ ಆಶಯಗಳಿಗೂ ಮಾಯಾವತಿ ಕೊಳ್ಳಿ ಇಟ್ಟಿದ್ದಾರೆ. ಕಾನ್ಶಿರಾಮ್ ಅವರು ತಾವು ಇರುವ ತನಕ ತಮ್ಮ ಸಂಬಂಧಿಗಳನ್ನು ಪಕ್ಷದ ಹಾಗೂ ರಾಜಕೀಯದ ಮೊಗಸಾಲೆಯೊಳಗೆ ಬಿಟ್ಟಿರಲಿಲ್ಲ. ಅದಕ್ಕಾಗಿ ಪಕ್ಷದಲ್ಲಿ ನಿಯಮ ಸಹ ರೂಪಿಸಿದ್ದರು.
ಆದರೆ ಕುಮಾರಿ ಮಾಯಾವತಿಯವರು ಕಾನ್ಶಿರಾಮ್ ಅವರ ಆಶಯ ಮಣ್ಣುಪಾಲು ಮಾಡಿ, ಪಕ್ಷದ ನಿಯಮಗಳಿಗೆ ತಿದ್ದುಪಡಿ ತಂದು ತಮ್ಮ ಸಹೋದರನಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಎಸ್ಪಿಯನ್ನು ತಮ್ಮ ವಂಶದ ಸೊತ್ತು ಎಂಬಂತೆ ನಡೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಬೇಸತ್ತು ಹಲವು ಮುಖಂಡರು ಇತ್ತೀಚೆಗೆ ಬಿಜೆಪಿ ಸೇರಿದ್ದರು ಎಂಬುದು ಸಹ ಇಲ್ಲಿ ಗಮನಾರ್ಹ. ಹೇಳಿ ಮಾಯಾವತಿಯವರ ಬಾಯಲ್ಲಿ ಬರುವ ಪ್ರಜಾಪ್ರಭುತ್ವಕ್ಕೆ ಅವರೇ ಎಷ್ಟು ಗೌರವ ಕೊಡುತ್ತಿದ್ದಾರೆ ಎಂದು?
Leave A Reply