ಮಂಗಳೂರು ಮಹಾನಗರ ಪಾಲಿಕೆಯ ಆಡಳಿತದ ಸ್ಯಾಂಪಲ್ ಇವತ್ತು ಮಳೆರಾಯ ರಿಲೀಸ್ ಮಾಡಿದ್ದಾನೆ!!
ಕಳೆದ ವರ್ಷ ಜ್ಯೋತಿ-ಬಲ್ಮಠ ಪ್ರದೇಶದ ರಸ್ತೆಗಳಲ್ಲಿ ಸಡನ್ನಾಗಿ ಅನಧಿಕೃತ ಕೆರೆಗಳ ನಿರ್ಮಾಣವಾದಾಗ ಮಂಗಳೂರು ನಗರ ದಕ್ಷಿಣದ ಆವತ್ತಿನ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಕಾರ್ಪೋರೇಟರ್ ಗಳು ಎಚ್ಚೆತ್ತುಕೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಮಂಗಳೂರಿಗೆ ಬರುತ್ತಿರಲಿಲ್ಲ. ಆದರೆ ಆವತ್ತು ಕಾಟಾಚಾರಕ್ಕೆ ಚರಂಡಿಗಳನ್ನು ಕ್ಲೀನ್ ಮಾಡಿಕೊಂಡ ನಮ್ಮ ನಗರದ ಜನಪ್ರತಿನಿಧಿಗಳು ಇವತ್ತು ಇಡೀ ಮಂಗಳೂರು ನಗರ ಹೀಗೆ ದ್ವೀಪದ ಲೆವೆಲ್ಲಿಗೆ ಬರಲು ಪರೋಕ್ಷ ಕಾರಣರಾಗಿದ್ದಾರೆ. ಮಂಗಳೂರಿನಲ್ಲಿ ವರುಣನ ಅಟ್ಟಹಾಸ, ಮಳೆರಾಯನ ಆವಾಂತರ, ಪ್ರಕೃತಿಯ ಮುನಿಸು ಹೀಗೆ ಬೇರೆ ಬೇರೆ ಹೆಡ್ಡಿಂಗ್ ಗಳು ನಾಳೆಯ ಪತ್ರಿಕೆಗಳಲ್ಲಿ ಬರಬಹುದು. ಆದರೆ ನಾನು ಹೇಳುವುದು ಏನೆಂದರೆ ಇದು ವರುಣನ ಅಟ್ಟಹಾಸ ಅಲ್ಲ, ನಿಕಟಪೂರ್ವ ಶಾಸಕರ ದಿವ್ಯನಿರ್ಲಕ್ಷ್ಯ, ಮಳೆರಾಯನ ಆವಾಂತರ ಅಲ್ಲ ಪಾಲಿಕೆಯ ಕೆಟ್ಟಲೋಪ, ಪ್ರಕೃತಿಯ ಮುನಿಸು ಅಲ್ಲ ಅಧಿಕಾರಿಗಳ ಕಮೀಷನ್ ಚಾಳಿ. ಆದ್ದರಿಂದ ಪ್ರಕೃತಿ ಅಥವಾ ವರುಣನಿಗೆ ಏನಾದರೂ ಹೇಳುವ ಬದಲು ಇಷ್ಟು ದಿನ ನಮ್ಮನ್ನು ಆಳುತ್ತಿದ್ದವರಿಗೆ ಇದರ ಕ್ರೆಡಿಟ್ ಕೊಡಬೇಕು.
ಮಂಗಳೂರಿಗೆ ಕಾಂಕ್ರೀಟ್ ರಸ್ತೆಗಳನ್ನು ಮಾಡಿಸಿದ್ದೇವೆ ಎಂದು ಸಾಧನೆಯ ಹಾದಿಯಲ್ಲಿ ಮೊನ್ನೆಯ ಚುನಾವಣೆಯಲ್ಲಿ ಹಿಂದಿನ ಶಾಸಕರು ಹೇಳಿದ್ದರು. ಕಾಂಕ್ರೀಟ್ ರಸ್ತೆಗಳ ಗುಣಮಟ್ಟದ ವಿಷಯ ಈಗ ಬೇಡಾ. ಆದರೆ ರಸ್ತೆಗಳ ಪಕ್ಕದ ಚರಂಡಿಗಳ ಮೇಲೆ ಫುಟ್ ಪಾತ್ ನಿರ್ಮಿಸಲಾಗಿದೆ. ಫುಟ್ ಪಾತ್ ನಿರ್ಮಿಸಿರುವುದು ಒಳ್ಳೆಯ ವಿಚಾರ. ಆದರೆ ಪಾಲಿಕೆಯ ಅಧಿಕಾರಿಗಳು, ಇಂಜಿನಿಯರ್ಸ್ ಎಷ್ಟು ಬುದ್ಧಿವಂತರು ಎಂದರೆ ಇವರುಗಳ ಮೆದುಳನ್ನು ಮ್ಯೂಸಿಯಂನಲ್ಲಿ ಇಡಬೇಕು. ಯಾಕೆಂದರೆ ಅದು ಬಳಕೆಯಾಗಿರುವುದು ಕಡಿಮೆ. ಆದ್ದರಿಂದ ಮನುಷ್ಯನ ಮೆದುಳು ಎಂದು ಮಕ್ಕಳಿಗೆ ತೋರಿಸಲು ಆಗುತ್ತದೆ. ಇಂಜಿನಿಯರ್ ಗಳು ಏನು ಮಾಡಿದ್ದಾರೆ ಎಂದರೆ ಹಲವೆಡೆ ಕಾಂಕ್ರೀಟ್ ರಸ್ತೆ ಮತ್ತು ಫುಟ್ ಪಾತ್ ನಡುವೆ ಮಳೆನೀರು ಚರಂಡಿಗೆ ಇಳಿದು ಹೋಗಲು ತೂತುಗಳನ್ನೇ ಇಡಲಿಲ್ಲ. ಇದರಿಂದ ರಸ್ತೆಗಳ ಮೇಲೆ ಬಿದ್ದ ನೀರು ಚರಂಡಿಗೆ ಹೋಗಲು ದಾರಿಯೇ ಇಲ್ಲ. ಲಂಚ ಕೊಟ್ಟು ಪಾಲಿಕೆಯಲ್ಲಿ ಪೋಸ್ಟ್ ದೊರಕಿಸಿಕೊಂಡ ಇಂಜಿನಿಯರ್ ಗಳಿಂದ ಬೇರೆ ಏನೂ ಕೂಡ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಗ್ಯಾಂಗ್ ಹಣ ಇವತ್ತು ಕಕ್ಕುತ್ತೀರಾ..
ಎರಡನೇಯದಾಗಿ ಮಳೆಗಾಲದಲ್ಲಿ ತುರ್ತು ಸಂದರ್ಭದಲ್ಲಿ ಬೇಕಾಗುತ್ತದೆ ಎಂದು ಪಾಲಿಕೆಯಲ್ಲಿ “ಗ್ಯಾಂಗ್” ಎನ್ನುವ ವ್ಯವಸ್ಥೆ ಮಾಡಲಾಗುತ್ತದೆ. ಗ್ಯಾಂಗ್ ಎಂದರೆ ಎಂಟು ಜನ ಮತ್ತು ಒಂದು ವಾಹನ ಇರುವ ತಂಡ. ಅವರು ಒಂದು ವಾರ್ಡ್ ಗೆ ಒಂದರಂತೆ ಅರವತ್ತು ವಾರ್ಡಿಗೆ ಆರವತ್ತು ಗ್ಯಾಂಗ್ ಗಳು ಇರುತ್ತವೆ. ಆದರೆ ನಮ್ಮ ಪಾಲಿಕೆಯಲ್ಲಿ ಕಾರ್ಪೋರೇಟರ್ ಗಳು ಏನು ಮಾಡುತ್ತಾರೆ ಎಂದರೆ ಪರಸ್ಪರ ಅಂಡರ್ ಸ್ಟ್ಯಾಂಡಿಂಗ್ ನಲ್ಲಿ ಮೂರ್ನಾಕು ವಾರ್ಡಿಗೆ ಒಂದೊಂದು ಗ್ಯಾಂಗ್ ಇಟ್ಟುಕೊಂಡಿರುತ್ತಾರೆ. ಹಲವು ಬಾರಿ ಎಂಟು ಜನರ ಗ್ಯಾಂಗಿನಲ್ಲಿ ಮೂರ್ನಾಕು ಜನ ಮಾತ್ರ ಇರುತ್ತಾರೆ. ವಾಹನದ ವಿಷಯವೇ ಇರುವುದಿಲ್ಲ. ಆದರೆ ದಾಖಲೆಯಲ್ಲಿ ಮಾತ್ರ ಪ್ರತಿ ವಾರ್ಡಿಗೆ ಎಂಟು ಜನ ಮತ್ತು ವಾಹನ ಒಳಗೊಂಡ ಒಂದು ಗ್ಯಾಂಗ್ ಕೊಟ್ಟಿದ್ದೇವೆ ಎನ್ನುವ ರೀತಿಯಲ್ಲಿ ಬಿಲ್ ಮಂಜೂರಾಗಿರುತ್ತದೆ. ಹಣ ಬಿಡುಗಡೆಯಾದ ನಂತರ ಎಲ್ಲರೂ ತಿಂದು ತೇಗಿ ಅದೇ ಚರಂಡಿಯಲ್ಲಿ ಮಳೆ ನೀರಿಗೆ ಕೈತೊಳೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇವತ್ತು ಬಂದ ಪ್ರಮಾಣದಲ್ಲಿ ಮಳೆ ಬರದೇ ಇರುವುದರಿಂದ ಕಾರ್ಪೋರೇಟರ್ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿ ಹೊರಗೆ ಗೊತ್ತಾಗುತ್ತಿರಲಿಲ್ಲ. ಆದರೆ ಇವತ್ತು ಅದನ್ನು ಕೂಡ ವರುಣ ಬಯಲಿಗೆ ಎಳೆದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಬಯಲುಗೊಳಿಸಿದ್ದಾನೆ.
ಆಂಟೋನಿಗೆ ಕೋಟಿ ಕೊಟ್ಟು ಹಣ ಪೋಲು ಮಾಡಿದ್ದೀರಲ್ಲ..
ಇನ್ನು ಮೂರನೇಯ ಪ್ರಾಬ್ಲಂ ಅಂದರೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಎಂಬ ಬಿಳಿಯಾನೆಯನ್ನು ಸಾಕುತ್ತಿರುವ ಪಾಲಿಕೆ ಅವರಿಂದ ಸರಿಯಾದ ಕೆಲಸವನ್ನು ಮಾಡುತ್ತಿಲ್ಲ. ವರ್ಷಕ್ಕೆ ಕೋಟ್ಯಾಂತರ ರೂಪಾಯಿ ನಮ್ಮ ತೆರಿಗೆ ಹಣವನ್ನು ಆಂಟೋನಿಯವರ ಹರಿವಾಣಕ್ಕೆ ಸುರಿಯುತ್ತಿರುವ ಪಾಲಿಕೆ ಕನಿಷ್ಟ ಒಂದು ಮೀಟರ್ ತೋಡನ್ನು ಅವರಿಂದ ಕ್ಲೀನ್ ಮಾಡಿಸದೇ ಇರುವುದು ಪಾಲಿಕೆಯ ದೌರ್ಭಾಗ್ಯಕ್ಕೆ ಹಿಡಿದ ಕೈಗನ್ನಡಿ. ಆಂಟೋನಿ ವೇಸ್ಟ್ ನವರು ತಾವು ತೆಗೆದುಕೊಂಡ ಹಣಕ್ಕೆ ಸರಿಯಾಗಿ ಕೆಲಸ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಬೇಸಿಗೆಯಲ್ಲಿ ಜನ ಕುಡಿದು ಬಿಸಾಡಿದ ಕೋಲ್ಡ್ ಡ್ರಿಂಕ್ಸ್ ಬಾಟಲಿಗಳು, ಪ್ಲಾಸ್ಟಿಕ್ ಪ್ಯಾಕೇಟುಗಳು ತೋಡಿನಲ್ಲಿ ಬ್ಲಾಕ್ ಆಗಿ ನೀರಿನ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಇವರು ಹದಿನೈದು ದಿನಗಳ ಮೊದಲೇ ಇದನ್ನೆಲ್ಲಾ ಕ್ಲೀನ್ ಮಾಡಿಸಿದ್ದರೆ ಇವತ್ತು ಕೃತಕ ನೆರೆಯನ್ನು ಮಂಗಳೂರು ನೋಡಬೇಕಾಗಿರಲಿಲ್ಲ. ಬಹುಶ: ಪಾಲಿಕೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ತನ್ನ ಶಾಸಕರುಗಳ ಘನಘೋರ ಸೋಲಿನಿಂದ ಚೇತರಿಸಿಕೊಳ್ಳದೇ ಅದೇ ಚಿಂತೆಯಲ್ಲಿ ಇದ್ದ ಕಾರಣ ಈ ಚರಂಡಿಗಳ ಬಗ್ಗೆ ಚಿಂತಿಸಲು ಹೋಗಿರಲಿಲ್ಲ.
ಈ ಕೃತಕ ನೆರೆ ಇವತ್ತು ಬಂತು, ನಾಳೆ ಹೋಯಿತು ಎಂದು ಹೀಗೆ ಬಿಟ್ಟರೆ ಈ ಬಾರಿಯ ಮಳೆಗಾಲ ಮಂಗಳೂರಿಗರ ಪಾಲಿಗೆ ಸಿಂಹಸ್ವಪ್ನವಾಗಲಿದೆ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಪಾಲಿಕೆಯ ಕಮೀಷನರ್ ಅವರನ್ನು ಕರೆಸಿ ಬಿಸಿ ಮಾಡಿ ಕೆಲಸಕ್ಕೆ ಹಚ್ಚದಿದ್ದರೆ ಒಂದು ಸಣ್ಣ ಮಳೆ ಸುರಿಯಲು ಶುರು ಮಾಡಿದರೂ ಮಂಗಳೂರಿಗರು ತಣ್ಣಗೆ ಕಂಪಿಸುವ ಪರಿಸ್ಥಿತಿಗೆ ಬರಲಿದ್ದಾರೆ!!
Photos Courtesy: FB Friends
Leave A Reply