ಮಂಗಳೂರು ನಗರ ದಕ್ಷಿಣದಲ್ಲಿ ಸ್ಟಿಂಗ್ ಆಪರೇಶನ್ ಕಾಂಗ್ರೆಸ್ಸಿನ ಜಾತಕ ಬಿಚ್ಚಿಟ್ಟಿತ್ತು!
ಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ ನಾಯಕರು ಪಕ್ಕದ ಕೇರಳ ರಾಜ್ಯದಿಂದ ಮಂಗಳೂರಿಗೆ ಕಲಿಯಲು ಬಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮತಗಳನ್ನು ನಂಬಿ ಕುಳಿತಿದ್ದರು. ವಿಷಯ ಏನೆಂದರೆ ಮಂಗಳೂರಿನಲ್ಲಿ ಅನೇಕ ಗೌರವಾನ್ವಿತ ಶಿಕ್ಷಣ ಸಂಸ್ಥೆಗಳಿವೆ. ಕೇರಳದ ಬೇರೆ ಬೇರೆ ಭಾಗಗಳಿಂದ ಸಾವಿರಾರು ಯುವಕ, ಯುವತಿಯರು ಮಂಗಳೂರಿನಲ್ಲಿ ಕಲಿಯಲು ಬರುತ್ತಾರೆ. ಅವರನ್ನು ಕರೆದುಕೊಂಡು ಬರುವ ಏಜೆಂಟರನ್ನು ಹಿಡಿದ ಕಾಂಗ್ರೆಸ್ಸಿಗರು ಬೇರೆ ರಾಜ್ಯದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇಲ್ಲೊಂದು ವೋಟರ್ ಐಡಿ ಮಾಡಿಸಿಕೊಟ್ಟಿದ್ದಾರೆ. ತಮಗೆ ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಸೀಟ್ ತೆಗೆಸಿಕೊಟ್ಟ ಏಜೆಂಟರನ್ನು ಕಣ್ಣುಮುಚ್ಚಿ ನಂಬುವ ಅಥವಾ ಆ ಅನಿವಾರ್ಯತೆಯಲ್ಲಿರುವ ಸ್ಟೂಡೆಂಟ್ಸ್ ಅವರು ಹೇಳಿದ ಹಾಗೆ ದಾಖಲೆ ಕೊಟ್ಟು ಇಲ್ಲೊಂದು ವೋಟರ್ ಐಡಿ ಮಾಡಿಸಿದ್ದಾರೆ. ಆದರೆ ಕಳೆದ ಬಾರಿ ಅಂತಹ ಮತಗಳನ್ನು ಡಿಲೀಟ್ ಮಾಡುವ ಪ್ರಯತ್ನ ನಡೆಯಿತ್ತಾದರೂ ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಏನಾಯಿತು ಎಂದರೆ ಹೊಸ ಮತದಾರರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹೆಚ್ಚಿನವರಿಗೆ ಒಂದೇ ಡೋರ್ ನಂಬರಿನಲ್ಲಿ ನೋಂದಾವಣೆಯಾಗಿತ್ತು. ಆ ಡೋರ್ ನಂಬರ್ ಗಳನ್ನು ಹುಡುಕಿ ಹೋದಾಗ ಅದು ಅನ್ಯ ರಾಜ್ಯದ ವಿದ್ಯಾರ್ಥಿನಿಯರು ವಾಸಿಸುವ ಹಾಸ್ಟೆಲ್ ಎಂದು ಗೊತ್ತಾಯಿತು. ಅಲ್ಲಿ ಹೋಗಿ ವಿಚಾರಿಸಿದಾಗ ವಿದ್ಯಾರ್ಥಿನಿಯೊಬ್ಬಳು ಮಾತನಾಡುತ್ತಾ ತನಗೆ ಎರಡು ವೋಟರ್ ಐಡಿ ಇರುವ ವಿಷಯ ಹೇಳಿದಳು. ಅದರ ನಂತರ ರಾಷ್ಟ್ರೀಯ ವಾಹಿನಿಯ ವರದಿಗಾರರು ಸ್ಟ್ರಿಂಗ್ ಆಪರೇಶನ್ ಮಾಡಿದಾಗ ಸತ್ಯ ಪ್ರಪಂಚಕ್ಕೆ ಗೊತ್ತಾಯಿತು. ಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ಸಿನ ಚುನಾವಣಾ ತಂತ್ರ ರಾಷ್ಟ್ರಕ್ಕೆ ಮನದಟ್ಟಾಯಿತು. ಈ ವಿಷಯವನ್ನು ಕೇರಳ ಮೂಲದ ಚಾನೆಲ್ ಗಳು, ನಮ್ಮ ರಾಜ್ಯದ ವಾಹಿನಿಗಳು ಚರ್ಚೆಗೆ ಎತ್ತಿಕೊಂಡವು. ಮಂಗಳೂರು ನಗರ ದಕ್ಷಿಣದ ಎರಡೆರಡು ವೋಟರ್ ಐಡಿಗಳ ಕಥೆ ನಾಡಿಗೆ ಪರಿಚಯವಾಯಿತು. ಟೌಮ್ಸ್ ನೌ ಸುದ್ದಿವಾಹಿನಿ ಈ ಸುದ್ದಿಯ ಬಗ್ಗೆ ಸರಣಿ ಕಾರ್ಯಕ್ರಮ ಮಾಡಿತು. ಈ ಸುದ್ದಿಯನ್ನು ಕೇರಳದ ಪ್ರಖ್ಯಾತ ಪತ್ರಿಕೆಗಳು ಮುದ್ರಿಸಿದವು. ಅದನ್ನು ಓದಿದ, ಟಿವಿ ನೋಡಿದ ವಿದ್ಯಾರ್ಥಿನಿಯರಿಗೆ ವಾಸ್ತವ ಅರ್ಥವಾಯಿತು. ತಾವು ಒಂದು ವೇಳೆ ಮತ ಚಲಾಯಿಸಲು ಹೋಗಿ ಅಲ್ಲಿ ಸಿಕ್ಕಿಬಿದ್ದರೆ ತಮ್ಮ ಭವಿಷ್ಯಕ್ಕೆ ಇದು ಸಂಚಕಾರ ತರುತ್ತದೆ ಎನ್ನುವ ಸತ್ಯ ಯುವತಿಯರಿಗೆ ಮನದಟ್ಟಾಯಿತು. ತಾವು ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾಗುತ್ತಿದ್ದೆವೆ ಎನ್ನುವ ಸಂಗತಿ ಮನಸ್ಸಿಗೆ ಬಂದ ನಂತರ ಅವರು ಮತಗಟ್ಟೆಯ ಕಡೆ ತಲೆ ಹಾಕಲೇ ಇಲ್ಲ. ಯಾರೂ ಕೂಡ ಮತ ಹಾಕಲು ಧೈರ್ಯ ಮಾಡಲೇ ಇಲ್ಲ.
ಇನ್ನು ಚರ್ಚ್ ದಾಳಿಯ ನಂತರ ಬಿಜೆಪಿ ವಿರುದ್ಧ ಕ್ರೈಸ್ತರಿಗೆ ಅಸಮಾಧಾನವಿತ್ತು. ಆ ದಾಳಿಗೆ ಚರ್ಚ್ ಒಳಗೆನೆ ಷಡ್ಯಂತ್ರ ನಡೆಸಲಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ರೋಬಾರ್ಟ್ ರೊಝಾರಿಯಾ ಹೇಳಿದ್ದಾರೆ. ಇನ್ನೊಂದೆಡೆ ಆವತ್ತು ಕ್ರೈಸ್ತ ಮತಾಂತರ ಕೇಂದ್ರಗಳ ಮೇಲೆ ನಡೆದ ದಾಳಿಯ ನೇತೃತ್ವ ವಹಿಸಿದವರು ಪ್ರಸ್ತುತ ಯಾವ ಪಕ್ಷದಲ್ಲಿ ಇದ್ದಾರೆಂದು ಎಲ್ಲರಿಗೂ ಗೊತ್ತಾಗಿದೆ. ಅಷ್ಟೇ ಅಲ್ಲದೇ ಆ ದಾಳಿಗೆ ಬಿಜೆಪಿ ಉನ್ನತ ನಾಯಕರಿಂದ ಯಾವುದೇ ಬೆಂಬಲವಾಗಲಿ, ಸೂಚನೆಯಾಗಲೀ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರೋ ತಮ್ಮ ಸ್ವಪ್ರತಿಷ್ಟೆಗಾಗಿ ನಡೆಸಿದ ದಾಳಿಗೆ ಬಿಜೆಪಿ ಹೊಣೆ ಅಲ್ಲ ಎಂದು ಕ್ರೈಸ್ತರಿಗೂ ಅನಿಸಿದೆ.
ಮುಸ್ಲಿಂ ಮಹಿಳೆಯರು ವಿದ್ಯಾವಂತರು ಮತ್ತು ಪ್ರಬುದ್ಧರು ಆಗಿದ್ದಾರೆ…..
ಇನ್ನೊಂದು ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಪ್ರಸ್ತಾವ ಆಗಿದ್ದರೂ ರಾಜೀವ್ ಗಾಂಧಿ ಆ ಮಸೂದೆಯನ್ನು ಪಕ್ಕಕ್ಕೆ ಇಟ್ಟಿದ್ದರು. ಅದರ ನಂತರ ಕಾಂಗ್ರೆಸ್ ಅದನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ಆದರೆ ಮೋದಿಯವರು ಯಾವತ್ತೂ ವೋಟ್ ಬ್ಯಾಂಕ್ ರಾಜಕೀಯಕ್ಕೆ ಹೋದವರಲ್ಲ. ಅವರು ಅಟಂ ಬಾಂಬ್ ನಂತಿದ್ದ ಆ ಮಸೂದೆಯನ್ನು ಜನರ ಮುಂದೆ ಇಟ್ಟು ಅಭಿಪ್ರಾಯ ಕೇಳಿ ನಂತರ ಲೋಕಸಭೆಯಲ್ಲಿ ಮಂಡಿಸಿದರು. ಅಲ್ಲಿ ಅದು ಪಾಸಾಯಿತು. ಆದರೆ ರಾಜ್ಯಸಭೆಯಲ್ಲಿ ಪಾಸಾಗಲು ಬಿಜೆಪಿ ಬಹುಮತದ ಕೊರತೆ ಇತ್ತು. ಆದ್ದರಿಂದ ಅದು ಸದ್ಯ ಮುಂದೂಡಲ್ಪಟ್ಟಿದೆ. ಆದರೆ ಮೋದಿಯವರ ಸಂದೇಶ ಮುಸ್ಲಿಮರನ್ನು ತಲುಪಿದೆ. ಇನ್ನು ಇವತ್ತಿನ ಪರಿಸ್ಥಿತಿಯಲ್ಲಿ ಮುಸ್ಲಿಂ ಮಹಿಳೆಯರು ವಿದ್ಯಾವಂತರು ಮತ್ತು ಪ್ರಬುದ್ಧರು ಆಗಿದ್ದಾರೆ. ತಮ್ಮ ಬೇಕು, ಬೇಡಗಳನ್ನು ಅವರು ನಿರ್ಧರಿಸುವ ಮಟ್ಟಕ್ಕೆ ತಲುಪಿದ್ದಾರೆ. ಮೋದಿಯವರು ತಮಗಾಗಿ ಚಿಂತಿಸಿದ್ದಾರೆ ಎಂದು ಗೊತ್ತಾದ ಕೂಡಲೇ ಈ ಬಾರಿ ತಮ್ಮ ಮತ ಮೋದಿಯವರಿಗೆ ಎಂದು ಹೇಳಿದ ಎಷ್ಟೋ ಮುಸ್ಲಿಂ ಮನೆಗಳಿವೆ. ಇದರೊಂದಿಗೆ ಇನ್ನೊಂದು ಲಾಜಿಕ್ ತ್ರಿವಳಿ ತಲಾಖ್ ಹಿಂದೆ ಅಡಗಿದೆ ಎಂದು ಯಾರ ಅರಿವಿಗೂ ಬಂದಿರಲಿಲ್ಲ. ಅದೇನೆಂದರೆ ತ್ರಿವಳಿ ತಲಾಖ್ ಕೇವಲ ಒಬ್ಬ ಹೆಣ್ಣಿನ ಬದುಕಿನ ಪ್ರಶ್ನೆಯಾಗಿ ಮಾತ್ರ ಉಳಿದಿರಲಿಲ್ಲ. ಒಂದು ಹೆಣ್ಣಿಗೆ ಗಂಡಸೊಬ್ಬ ತ್ರಿವಳಿ ತಲಾಖ್ ಮೂಲಕ ವಿಚ್ಚೇದನ ನೀಡಿದರೆ ಅದು ಕೇವಲ ಆಕೆಯ ಕಣ್ಣೀರಾಗಿ ಉಳಿಯಲ್ಲ. ತ್ರಿವಳಿ ತಲಾಖ್ ಒಂದು ಹೆಣ್ಣಿನ ಬಾಳಿನಲ್ಲಿ ಬಿರುಗಾಳಿಯಾಗಿ ಎಷ್ಟು ಬೀಸುತ್ತೋ ಅದಕ್ಕಿಂತ ಒಂದು ಮುಷ್ಟಿ ಹೆಚ್ಚೆ ಆಕೆಯ ತಂದೆ, ತಾಯಿ, ಅಣ್ಣ, ತಮ್ಮಂದಿರ ಬದುಕಿನಲ್ಲಿ ಬೀಸುತ್ತದೆ. ಒಬ್ಬ ಪತ್ನಿಪೀಡಕ ಮುಸ್ಲಿಂ ಪುರುಷ ತ್ರಿವಳಿ ತಲಾಖ್ ತನ್ನ ಅನುಕೂಲ ಎಂದು ಭಾವಿಸಿದರೆ ಸಾಮಾನ್ಯ ಮುಸ್ಲಿಂ ಪ್ರಜೆ ತ್ರಿವಳಿ ತಲಾಖ್ ತಮ್ಮ ಸಮುದಾಯಕ್ಕೆ ಅಂಟಿದ ಶಾಪ ಎಂದೇ ಅಂದುಕೊಂಡಿರುತ್ತಾನೆ. ಇದನ್ನು ಅರ್ಥ ಮಾಡಿಕೊಂಡ ಮೋದಿಯವರು ಅದಕ್ಕೆ ಕೈ ಹಾಕಿ ಮುಸ್ಲಿಂ ಹೆಣ್ಣುಮಗಳೊಬ್ಬಳು ಕೂಡ ನಮ್ಮ ದೇಶದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಎಂದು ನಿರ್ಧರಿಸಿದ್ದಕ್ಕೆ ಈ ಬಾರಿ ಮುಸ್ಲಿಂ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ಮೋದಿಯವರ ಬೆನ್ನಿಗೆ ನಿಂತಿದೆ. ತನ್ನ ಮಗಳಿಗೆ ಅಥವಾ ತನ್ನ ಸಹೋದರಿಗೆ ಭವಿಷ್ಯದಲ್ಲಿ ಆಗಬಹುದಾದ ಕಂಟಕವನ್ನು ಅಥವಾ ಹಿಂದೆ ಆಗಿರುವ ಅನಿಷ್ಟವನ್ನು ತೊಡೆದೂಡಿಸಲು ಕಂಕಣಬದ್ಧರಾದ ಮೋದಿಯವರು ಮುಸ್ಲಿಂ ಸಮಾಜದ ಪಾಲಿಗೆ ನಿಜವಾದ ಆಶಾಕಿರಣವಾಗಿದ್ದಾರೆ.
ಹೀಗೆ ಜಾತಿಗಳನ್ನು ಒಡೆಯುವ ತಂತ್ರವಾಗಲಿ, ಮುಸ್ಲಿಮರು ತಮ್ಮ ಮತಬ್ಯಾಂಕ್ ಎಂದುಕೊಂಡದ್ದಾಗಲಿ, ಕೇರಳ ರಾಜ್ಯದ ವಿದ್ಯಾರ್ಥಿನಿಯರಿಂದ ವೋಟ್ ಹಾಕಿಸುವುದಾಗಲಿ, ಕ್ರೈಸ್ತರಿಗೆ ಚರ್ಚ್ ದಾಳಿಯ ಗುಮ್ಮ ತೋರಿಸುವುದಾಗಲೀ ಯಾವುದೂ ಕಾಂಗ್ರೆಸ್ಸಿಗೆ ಫಲ ನೀಡದೆ ಕರಾವಳಿಯಲ್ಲಿ ಕಾಂಗ್ರೆಸ್ಸ್ ಯಾವತ್ತೂ ಇಲ್ಲದ ಹೀನಾಯ ಸ್ಥಿತಿಗೆ ತಲುಪಿತು. ಯಾಕೆಂದರೆ ಮತದಾರ ಜಾಗೃತನಾಗಿದ್ದ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಲಗಿಸಿದ!
Leave A Reply