ಮಂಗಳೂರಿನಲ್ಲಿ ನಡೆಯುವ ಎಲ್ಲ ಅನೈತಿಕ ಚಟುವಟಿಕೆಗಳು ನಿಲ್ಲಲಿ.
ಮಂಗಳೂರಿನಲ್ಲಿ ತಲೆ ಎತ್ತುತ್ತಿರುವ ಲೇಡಿಸ್ ಬಾರ್ ಮತ್ತು ಲೈವ್ ಬ್ಯಾಂಡ್ ಗಳನ್ನು ಶೀಘ್ರದಲ್ಲಿ ಬಂದ್ ಮಾಡದಿದ್ದರೆ 2008-09 ರಲ್ಲಿ ಆದ ಪಬ್ ದಾಳಿ ಮತ್ತು ಹೋಂಸ್ಟೇ ದಾಳಿ ಮರುಕಳಿಸಲಿದೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಲೈವ್ ಬ್ಯಾಂಡ್ ಗಳು, ಲೇಡಿಸ್ ಬಾರ್ ಗಳು ಶುರುವಾದರೆ ಅದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ ಎಂದಿದ್ದಾರೆ. ಯುವಕರು ಅದಕ್ಕೆ ವಾಲಿದರೆ ಅದರಿಂದ ಸದೃಢ ಸಮಾಜಕ್ಕೆ ಹಾನಿಯಾಗುತ್ತದೆ ಎನ್ನುವ ಮಾತನ್ನು ಸೇರಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಾಗೂ ಅವರ ಸಂಘಟನೆಗಳಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯ ಇದೆ. ಸಮಾಜದ ಪರ ಧ್ವನಿ ಎತ್ತುವ ಹಕ್ಕಿದೆ. ಅವರಿಗೆ ಸಂಘಟನೆಯಾಗಿ ಸಮಾಜದ ಬಗ್ಗೆ ಕಾಳಜಿ ಕೂಡ ಇರಬೇಕಾಗಿರುವುದರಿಂದ ಸುದ್ದಿಗೋಷ್ಟಿ ಕರೆದು ತಮ್ಮ ಮಾತುಗಳನ್ನು ಜನರ ಮುಂದೆ ಇಡುವಂತಹ ಅಗತ್ಯ ಕೂಡ ಇದೆ. ಆದರೆ ಈಗ ಇರುವ ಪ್ರಶ್ನೆ ಎಂದರೆ ಈ ಸಂಘಟನೆಗಳು ಕೇವಲ ಲೇಡಿಸ್ ಬಾರ್ ಮತ್ತು ಲೈವ್ ಬ್ಯಾಂಡ್ ಗಳ ವಿರುದ್ಧ ಮಾತ್ರ ಯಾಕೆ ಧ್ವನಿ ಎತ್ತಿರುವುದು ಎಂದು ಕೇಳಬೇಕಾಗಿದೆ. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ಹಬ್ಬಿಕೊಂಡಿರುವ ಇಸ್ಪೀಟ್ ಅಡ್ಡೆಗಳು ಇವರಿಗೆ ಕಣ್ಣಿಗೆ ಬಿದ್ದಿಲ್ವ? ಇಸ್ಪೀಟ್ ಅಡ್ಡೆಗಳು ಅನೈತಿಕ ಕೇಂದ್ರಗಳಲ್ವೇ? ಅಲ್ಲಿ ಯುವಕರು ತಮ್ಮ ಹಣವನ್ನು ಪೋಲು ಮಾಡುತ್ತಿಲ್ಲವೇ? ಅಲ್ಲಿ ಆಡಿ ಹಣ ನಷ್ಟ ಮಾಡಿಕೊಂಡ ಎಷ್ಟೋ ಕುಟುಂಬಗಳ ಯುವಕರು ಆತ್ಮಹತ್ಯೆ ಮಾಡಿಕೊಂಡಿಲ್ಲವೇ? ಇಸ್ಪೀಟ್ ನಲ್ಲಿ ಹಣ, ಸಮಯ ವ್ಯರ್ಥ ಮಾಡುವ ಯುವ ಜನಾಂಗವನ್ನು ರಕ್ಷಿಸಲು ನೀವು ಯಾಕೆ ಇಲ್ಲಿಯ ತನಕ ಇಸ್ಪೀಟ್ ಅಡ್ಡೆಗಳಿಗೆ ಅನುಮತಿ ನೀಡಬಾರದು ಎಂದು ಕೇಳಿಲ್ಲ. ಅದನ್ನು ನೀವು ಕೇಳಲೇಬೇಕಿತ್ತು. ಈಗ ಅಲ್ಲ, ಯಾವಾಗಲೋ ಕೇಳಬೇಕಿತ್ತು. ಅವರು ಶುರುವಾದ ಕೂಡಲೇ ಕೇಳಬೇಕಿತ್ತು.
ಇನ್ನು ವಿಡಿಯೋ ಗೇಮ್ ಇದು ಕೂಡ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿಗೆ ತೊಡಕಾಗುವ ಆಟ. ಮಂಗಳೂರಿನಲ್ಲಿ ಮಳೆಗಾಲಕ್ಕೆ ಅಣಬೆಯಂತೆ ವಿಡಿಯೋ ಗೇಮ್ ಸೆಂಟರ್ ಗಳು ಹರಡಿಕೊಂಡಿವೆ. ಇಲ್ಲಿ ಮಕ್ಕಳು ಬಂದು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಆದರೆ ಅದನ್ನು ನಿಲ್ಲಿಸಬೇಕೆಂದು ಈ ಸಂಘಟನೆಗಳು ಹೇಳಿಲ್ಲ. ಇಸ್ಪೀಟ್ ಮತ್ತು ವಿಡಿಯೋ ಗೇಮ್ ಸೆಂಟರ್ ಗಳನ್ನು ನಿಲ್ಲಿಸಬೇಕೆಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದರೆ ತುಂಬಾ ಒಳ್ಳೆಯದಿತ್ತು.
ಪಬ್ ಅಟ್ಯಾಕ್, ಹೋಂಸ್ಟೇ ದಾಳಿ ಮತ್ತೆ ಮಂಗಳೂರಿಗೆ ಬೇಡಾ.
ಇನ್ನು ಲೇಡಿಸ್ ಬಾರ್ ಮತ್ತು ಲೈವ್ ಬ್ಯಾಂಡ್ ಗಳನ್ನು ನಿಲ್ಲಿಸದಿದ್ದರೆ ಪಬ್ ಮತ್ತು ಹೋಂಸ್ಟೇ ಶೈಲಿಯಲ್ಲಿಯೇ ದಾಳಿಗಳು ನಡೆಯಬಹುದು ಎಂದು ಎಚ್ಚರಿಕೆ ಕೊಟ್ಟಿರುವ ವಿಶ್ವ ಹಿಂದೂ ಪರಿಷತ್ ನ ಮುಖಂಡರುಗಳ ಹೇಳಿಕೆಯ ಬಗ್ಗೆ ಅನೇಕರ ಆಕ್ಷೇಪ ಇದೆ. ಯಾಕೆಂದರೆ ಪಬ್ ಆಟ್ಯಾಕ್ ಮತ್ತು ಹೋಂಸ್ಟೇ ದಾಳಿ ಹಲವು ದಿನಗಳ ತನಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸುದ್ದಿಯಾಗಿತ್ತು. ಇದರಿಂದ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ದೊಡ್ಡ ಪ್ರಮಾಣದಲ್ಲಿ ಇದೆ ಎನ್ನುವ ಸಂದೇಶ ಎಲ್ಲಾ ಕಡೆ ಹರಡಿತ್ತು. ತಾವು ಸಂಸ್ಕೃತಿಯ ರಕ್ಷಕರು ಎಂದು ಹೇಳಿ ಕಾನೂನು ಕೈಗೆ ತೆಗೆದುಕೊಳ್ಳುವವರ ಬಗ್ಗೆ ಅನೇಕರಿಗೆ ಅಸಮಾಧಾನವಿತ್ತು. ಒಂದೊಂದು ದಾಳಿ ಆ ಕ್ಷಣಕ್ಕೆ ವಾಹಿನಿಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ ನಿಜ, ಅದರಿಂದ ಪತ್ರಿಕೆಗಳಲ್ಲಿ ಪ್ರಚಾರ ಸಿಗಬಹುದು. ಆದರೆ ಮಂಗಳೂರಿನ ಹೆಸರು ಪರೋಕ್ಷವಾಗಿ ಹಾಳಾಗುತ್ತಾ ಹೋಗುತ್ತದೆ. ಬ್ರಾಂಡ್ ಮಂಗಳೂರಿಗೆ ದಕ್ಕೆ ಆಗುತ್ತಾ ಹೋಗುತ್ತದೆ. ಇಲ್ಲಿನ ಬಗ್ಗೆ ಹೊರಗಿನವರಿಗೆ ಅಸಹ್ಯವಾಗುತ್ತಾ ಹೋಗುತ್ತದೆ. ಇಲ್ಲಿ ಉದ್ಯಮಗಳು ಬರುವುದಕ್ಕೆ ಕಷ್ಟವಾಗುತ್ತದೆ. ಉದ್ಯಮಿಗಳು ಬಂಡವಾಳ ಹೂಡಲು ಹಿಂಜರಿಯುತ್ತಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಾ ಹೋಗುತ್ತದೆ. ಪ್ರವಾಸೋದ್ಯಮಕ್ಕೆ ಪೆಟ್ಟಾಗುತ್ತದೆ. ಮಂಗಳೂರಿನಲ್ಲಿ ಅಸಂಖ್ಯಾತ ಶಿಕ್ಷಣ ಸಂಸ್ಥೆಗಳಿವೆ. ನಸರ್ಿಂಗ್ ನಿಂದ ಹಿಡಿದು ಮೆಡಿಕಲ್ ತನಕ ಇಲ್ಲಿ ಇಲ್ಲದ ಶಿಕ್ಷಣ ಸಂಸ್ಥೆಗಳಿಲ್ಲ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ವಿದ್ಯಾಥರ್ಿಗಳು ಇಲ್ಲಿ ಶಿಕ್ಷಣಕ್ಕಾಗಿ ಬರುತ್ತಾರೆ. ಈ ರೀತಿಯ ದಾಳಿಗಳಾದರೆ ಅದರಿಂದ ಮಂಗಳೂರಿಗೆ ಶಿಕ್ಷಣ, ಉದ್ಯೋಗ, ಉದ್ದಿಮೆಗಳಿಗೆ ಹೊಡೆತ ಬೀಳುತ್ತದೆ.
ಆದ್ದರಿಂದ ಈ ಪ್ರಕರಣವನ್ನು ಜಿಲ್ಲಾಡಳಿತ ಕಾನೂನಿನ ಪರಿಧಿಯಲ್ಲಿ ನೋಡಿ ಅದರಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಲು ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಕಾನೂನು ಮತ್ತು ಅನೈತಿಕತೆಯ ನಡುವಿನ ಸಪೂರದ ದಾರ. ಒಂದು ಕಡೆ ಹೆಚ್ಚು ಎಳೆದರೂ ಮತ್ತೊಂದು ಕಡೆ ತುಂಡಾಗುತ್ತದೆ. ಸ್ವಸ್ಥ ಮಂಗಳೂರು ನಮಗೆಲ್ಲರಿಗೂ ಬೇಕು. ಕಾನೂನು ಮೀರಿ ನಡೆಯುವ ಯಾವುದೇ ಉದ್ದಿಮೆಗಳಿಗೆ ಅವಕಾಶ ನೀಡಬಾರದು. ಅದೇ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಹದ್ದಿನ ಕಣ್ಣಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹಾಗೇ ಆಗಲಿ ಎನ್ನುವುದು ಎಲ್ಲರ ಹಾರೈಕೆ
Leave A Reply