ನಕ್ಸಲರ ಬೆದರಿಕೆಯಿಂದ ಆತಂಕಿತರಾಗಿದ್ದ ಹಳ್ಳಿಗರಲ್ಲಿ ಧೈರ್ಯ ತುಂಬಿದ ಸಂಸದ ನಳಿನ್
Posted On June 21, 2018
Sullia: Special Correspondent:
ನಕ್ಸಲ್ ಪೀಡಿತ ಭಾರತದ 35 ಜಿಲ್ಲೆಗಳಿಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶ ಮಾಡಪ್ಪಾಡಿ ಹಾಡಿಕಲ್ಲು ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಚರ್ಚಿಸಿದರು. ಇತ್ತೀಚೆಗೆ ನಕ್ಸಲರು ಭೇಟಿಕೊಟ್ಟು ಮನೆಯವರನ್ನು ಹೆದರಿಸಿ ಊಟ ಮಾಡಿ ಹೋದ ಮನೆಗಳಿಗೆ ತೆರಳಿ ಮನೆಯವರಿಗೆ ಧೈರ್ಯ ತುಂಬಿದರು. ನಿಮ್ಮ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಈಗಾಗಲೇ ನಕ್ಸಲ್ ವಿರೋಧಿ ಯೋಧರ ಪಡೆ ಬಿರುಸಿನ ಕೊಬಿಂಗ್ ನಡೆಸುತ್ತಿದೆ. ತಾವು ಕ್ಷಣಕ್ಷಣಕ್ಕೂ ಪೊಲೀಸ್ ಇಲಾಖೆ ಮತ್ತು ಎಎನ್ ಎಫ್ ನಿಂದ ಮಾಹಿತಿ ಪಡೆಯುತ್ತಿರುವುದಾಗಿ ಮನೆಯವರಿಗೆ ತಿಳಿಸಿದರು. ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಅನುದಾನದಲ್ಲಿ ಪ್ರತಿ ಜಿಲ್ಲೆಗೆ 28 ಕೋಟಿಯ ತನಕ ಸಿಗುತ್ತದೆ. ನಕ್ಸಲರು ಯಾವ ಕಾರಣಕ್ಕೆ ಆರಂಭದಲ್ಲಿ ಆಯುಧ ಕೈಗೆ ತೆಗೆದುಕೊಂಡಿದ್ದಾರೋ ಅದು ಕಾಲಕ್ರಮೇಣ ಬದಲಾಗಿದೆ. ಹಿಂದೆ ಶ್ರೀಮಂತ ಭೂಮಾಲೀಕರ ವಿರುದ್ಧ ಹೋರಾಡಲು ಆರಂಭವಾದ ನಕ್ಸಲರ ಹೋರಾಟ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧದ ದ್ವೇಷವಾಗಿ ಬದಲಾಗಿದೆ. ಮೋದಿಯವರು ತೆಗೆದುಕೊಂಡ ಅಭಿವೃದ್ಧಿ ಕಾರ್ಯಗಳಿಂದ ಛತ್ತಿಸ್ ಗಡ್ ನಲ್ಲಿ ಆಗಿರುವ ಅಭಿವೃದ್ಧಿಯಿಂದ ನಕ್ಸಲರು ಶಸ್ತ್ರ ಶರಣಾಗತಿ ಮಾಡಿ ಕೇಂದ್ರದ ಸರಕಾರದ ಸಾಧನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ನಕ್ಸಲರ ನಡುವಿನ ಕೆಲವು ಗುಂಪುಗಳು ಮೋದಿಯವರನ್ನು ದ್ವೇಷಿಸುವುದೇ ತಮ್ಮ ಗುರಿ ಎಂದು ಅಂದುಕೊಂಡಿರುವುದರಿಂದ ನಕ್ಸಲ್ ಹೋರಾಟ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಗೊತ್ತಾಗುತ್ತಿದೆ ಎಂದರು.
ಸುಳ್ಯದ ಬಲ್ಪದಲ್ಲಿ ತಮ್ಮ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈಗಾಗಲೇ 20 ಕೋಟಿ ಅನುದಾನದಲ್ಲಿ ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಸೋಲಾರ್ ಲ್ಯಾಂಪ್, ಆರು ಸರಕಾರಿ ಶಾಲೆಗಳಲ್ಲಿ ಈ-ಕ್ಲಾಸ್, ಕಮ್ಯೂನಿಟಿ ಹಾಲ್, ಮಾದರಿ ಗ್ರಾಮ ಪಂಚಾಯತ್ ಕಟ್ಟಡ, ಎರಡು ಅಂಗನವಾಡಿ ಮತ್ತು ಆರು ಶಾಲೆಗಳನ್ನು ಅಭಿವೃದ್ಧಿ, ಮನೆಗಳಲ್ಲಿ ವಿದ್ಯುತ್ ಸಂಪರ್ಕ, ಗುಡಿಸಲು ಮುಕ್ತ, ಸೀಮೆಎಣ್ಣೆ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದರೊಂದಿಗೆ ಶಾಸಕ ಎಸ್ ಅಂಗಾರ, ಕ್ಷೇತ್ರದ ಅಧ್ಯಕ್ಷ ವೆಂಕಟ್ ಒಳಲಂಬೆ ಮತ್ತಿತ್ತರರು ಉಪಸ್ಥಿತರಿದ್ದರು. ನಕ್ಸಲರ ಉಪಟಳದಿಂದ ಆತಂಕಗೊಂಡಿದ್ದ ಹಳ್ಳಿಗರು ಸಂಸದರ ದೀಢೀರ್ ಭೇಟಿಯಿಂದ ಸಮಾಧಾನಗೊಂಡಿದ್ದಾರೆ .
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply