ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ದಿಢೀರ್ ಭೇಟಿ !
ಮಂಗಳೂರು : ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಇಂದು ದಿಢೀರ್ ಭೇಟಿ ನೀಡಿ ವೈದ್ಯರು ಹಾಗು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಆಸ್ಪತ್ರೆಗೆ ಏಕಾಏಕಿ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಕುಂದುಕೊರತೆಯ ಪರಿಶೀಲನೆ ನಡೆಸಿದರು.
ವಿಶ್ವನಾಥ್ ಶೆಟ್ಟಿ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಕಂಡು ಅವರಲ್ಲಿ ಚರ್ಚೆ ನಡೆಸಿದರು. ತಾವು ಸರಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದು ಆರೋಗ್ಯ ತಪಾಸಣೆಗೆ ಆಗಮಿಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆದರೆ, ಅವರ ಜೊತೆ ಯಾರೂ ವಾರ್ಡನ್ ಇರಲಿಲ್ಲ. ಅದನ್ನು ಗಮನಿಸಿದ ವಿಶ್ವನಾಥ್ ಶೆಟ್ಟಿ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್‍ಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೆನ್ಲಾಕ್ ಆಸ್ಪತ್ರೆಯ ಹೊಸ ಕಟ್ಟಡ, ಐಸಿಯು ಹಾಗೂ ರೋಗಿಗಳ ವಿಭಾಗವನ್ನು ವೀಕ್ಷಿಸಿದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ. ರೋಗಿಗಳಿಗೆ ಕೊಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ನಂತರ ನಗರದ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿದರು. ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದ್ದರೂ ಹಳೇ ಕಟ್ಟಡದಲ್ಲೇ ರೋಗಿಗಳನ್ನು ಉಪಚರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನೂತನ ಆಸ್ಪತ್ರೆಯ ಕಟ್ಟಡಕ್ಕೆ ಬೇಕಾಗಿರುವ ಮೂಲ ಸೌಕರ್ಯ ಮತ್ತು ಸಿಬ್ಬಂದಿಗಳನ್ನು ಈ ಕೂಡಲೇ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಬರೆಯುವುದಾಗಿ ಅವರು ತಿಳಿಸಿದರು.
Leave A Reply