ಹಜ್ ಭವನಕ್ಕೆ ಟಿಪ್ಪು ಹೆಸರು ಇಡುವುದರಲ್ಲಿ ತಪ್ಪಿಲ್ಲ: ಮೋಟಮ್ಮ
ಮಂಗಳೂರು : ಹಜ್ ಭವನಕ್ಕೆ ಟಿಪ್ಪು ಹೆಸರು ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ಶ್ರೇಷ್ಠ ವ್ಯಕ್ತಿಯ, ಹೋರಾಟಗಾರನ ಹೆಸರನ್ನು ಹಜ್ ಭವನಕ್ಕೆ ಇಡುವುದು ತಪ್ಪಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡೆ ಮೋಟಮ್ಮ ಅಭಿಪ್ರಾಯ ಪಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿ ವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ಮೋಟಮ್ಮ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಸಚಿವ ಜಮೀರ್ ಅಹಮ್ಮದ್ ಅವರ ಹೇಳಿಕೆಯನ್ನು ಸಮರ್ಥಿಸಿದರು. “ಹಜ್ ಭವನಕ್ಕೆ ಟಿಪ್ಪು ಹೆಸರು ಇಡೋದ್ರಲ್ಲಿ ತಪ್ಪೇನಿಲ್ಲ. ಒಬ್ಬ ಶ್ರೇಷ್ಠ ವ್ಯಕ್ತಿಯ, ಹೋರಾಟಗಾರರ ಹೆಸರು ಹಜ್ ಭವನಕ್ಕೆ ಇಡೋದ್ರಲ್ಲಿ ತಪ್ಪಿಲ್ಲ. ಆದರೆ ಹಠಕ್ಕೆ ಬಿದ್ದು ಹೆಸರಿಡೋದು ಸರಿಯಲ್ಲ,” ಎಂದು ಅವರು ಅಭಿಪ್ರಾಯಪಟ್ಟರು. “ನಿಜವಾದ ಗೌರವದಿಂದ ಶ್ರೇಷ್ಠ ನಾಯಕರ ಹೆಸರಿಡೋದು ಒಳ್ಳೆಯದು. ಟಿಪ್ಪು ಜಯಂತಿಯಂತೆ ಎಲ್ಲಾ ಮಹಾನ್ ವ್ಯಕ್ತಿಗಳ ಜಯಂತಿ ಸರ್ಕಾರ ಮಾಡುತ್ತಿದೆ. ಕೆಲವೊಂದನ್ನು ಮಾತ್ರ ಯಾಕೆ ಕೆಟ್ಟ ದೃಷ್ಠಿಯಿಂದ ನೋಡಬೇಕು ಎಂದು ಪ್ರಶ್ನಿಸಿದ ಅವರು ಟಿಪ್ಪು ಹೆಸರಿಂದಲೇ ಕಾಂಗ್ರೆಸ್ ಗೆ ಸೋಲಾಗಿದೆ ಅನ್ನೋದು ತಪ್ಪು,” ಎಂದು ಅವರು ಹೇಳಿದರು. ರಾಜ್ಯಕ್ಕಾಗಿ, ರಾಜ್ಯದ ಒಳಿತಿಗಾಗಿ, ಸಮಾಜಕ್ಕಾಗಿ ಬಹಳಷ್ಟು ಒಳ್ಳೆ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಟ್ಟ ಭಾಗ್ಯಗಳಿಗೆ ಬೆಲೆ ಇಲ್ಲವಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
Leave A Reply