ಚಹಾ ಮಾರುವವರು ಪ್ರಧಾನಿಯಾದರು, ಈಗ ಚಹಾ ಮಾರುವವರ ಪುತ್ರಿ ಯೋಧೆಯಾದ ಹೆಮ್ಮೆಯ ಕತೆ ಕೇಳಿ…
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವ ಉನ್ನತ ಸಾಧನೆಯಾದರೂ ಮಾಡಬಹುದು. ಟೀ ಮಾರುವವರೊಬ್ಬರು ಪ್ರಧಾನಿಯಾಗಬಹುದು. ಯೋಗಿಯೊಬ್ಬರು ಮುಖ್ಯಮಂತ್ರಿಯಾಗಬಹುದು. ಸಮುದ್ರದ ದಂಡೆಯಲ್ಲಿ ನಿಂತು ಪಾನಿಪೂರಿ ಮಾರುವವರು ದೇಶದ ನಂಬರ್ ಒನ್ ಉದ್ಯಮಿಯಾಗಬಹುದು. ಇಂತಹ ಹಲವು ಉದಾಹರಣೆಗಳಿಗೆ ಭಾರತ ಸಾಕ್ಷಿಯಾಗಿದೆ.
ಈಗ ಇಂತಹುದೇ ಸಾಕ್ಷಿಯೊಂದು ಲಭಿಸಿದ್ದು, ಮಧ್ಯಪ್ರದೇಶದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬರ ಮಗಳು ವಾಯುಸೇನೆಗೆ ಆಯ್ಕೆಯಾಗುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾಳೆ. ಹೌದು, 24 ವರ್ಷದ ಅಂಚಾಲ್ ಗಂಗ್ವಾಲ್ ಅಂತಹ ಸಾಧನೆ ಮೆರೆದಿದ್ದಾರೆ.
ಇತ್ತೀಚೆಗೆ ವಾಯುಸೇನೆ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಅಂಚಾಲ್ ಗಂಗ್ವಾಲ್ ಆಯ್ಕೆಯಾಗಿದ್ದಾರೆ. ಆ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಧ್ಯಪ್ರದೇಶದ ಏಕೈಕ ಮಹಿಳೆ ಎನಿಸಿದ್ದಾರೆ.
ತಂದೆ ಸುರೇಶ್ ಗಂಗ್ವಾಲ್ ಹಾಗೂ ಕುಟುಂಬ ಮಧ್ಯಪ್ರದೇಶದ ಮಿಮುಜ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಸುರೇಶ್ ಗಂಗ್ವಾಲ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಚಹಾದ ಅಂಗಡಿ ನಡೆಸುತ್ತಿದ್ದಾರೆ. ಅಲ್ಲದೆ ಮಗಳು ಮಾಡಿರುವ ಸಾಧನೆ ಕಂಡು ಈಗ ಚಹಾದ ಅಂಗಡಿ ಬರುವ ಗ್ರಾಹಕರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ.
ಈ ಕುರಿತು ಅಂಚಾಲ್ ಗಂಗ್ವಾಲ್ ಸಹ ಮಾತನಾಡಿದ್ದು, 2013ರಲ್ಲಿ ಉತ್ತರಾಖಂಡದಲ್ಲಿ ಉಂಟಾದ ಪ್ರಕೃತಿ ವಿಕೋಪದ ವೇಳೆ ಭಾರತೀಯ ರಕ್ಷಣಾ ಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆದೆ. ನಾನಾಗ ಪಿಯುಸಿಯಲ್ಲಿದ್ದು, ಹಲವು ಬಾರಿ ವಾಯುಸೇನೆ ಪರೀಕ್ಷೆ ಬರೆದು ಈಗ ಉತ್ತೀರ್ಣಳಾಗಿದ್ದೇನೆ ಎಂದು ನಗೆ ಬೀರುತ್ತಾರೆ.
ಹಾಗಂತ ಪರೀಕ್ಷೆಯೇನೂ ಸರಳವಾಗಿರಲಿಲ್ಲ. ದೇಶಾದ್ಯಂತ ಸುಮಾರು 6 ಲಕ್ಷ ಅಭರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಆಯ್ಕೆಯಾಗಿದ್ದು ಕೇವಲ 22 ಮಂದಿ. ಅದರಲ್ಲಿ ಅಂಚಾಲ್ ಸಹ ಒಬ್ಬರಾಗಿದ್ದಾರೆ ಎಂಬುದು ವಿಶೇಷ. ಆಲ್ ದಿ ಬೆಸ್ಟ್ ಅಂಚಾಲ್.
Leave A Reply