ಇದೇನು ಸಮ್ಮಿಶ್ರ ಸರ್ಕಾರವೋ? ಅಧಿಕಾರ, ಮುನ್ನಡೆಗಾಗಿ ನಡೆಯುತ್ತಿರುವ ಬೀದಿ ರಂಪವೋ?
ಈ ಬಾರಿಯ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡದೆ, ಎಲ್ಲ ಪಕ್ಷಗಳಿಗೂ ತಕ್ಕ ಪಾಠ ಕಲಿಸಿದರು ಎಂದು ಖುಷಿಪಟ್ಟೆವು. ಆದರೆ ಈಗ ಯಾಕಾದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂತೋ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಲಸು ರಾಜಕಾರಣ ಮಾಡುತ್ತಿವೆ. ಆ ಮೂಲಕ ಜನ ಹೇಸಿಗೆಪಡುವಷ್ಟು ಸಣ್ಣತನ ಮಾಡುತ್ತಿವೆ.
ಕಳೆದ ಒಂದು ವಾರದ ರಾಜಕೀಯ ಪ್ರಹಸನವನ್ನೇ ನೋಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ಹೋಗಿ, ಅಲ್ಲೂ ರಾಜಕೀಯ ಮಾಡುತ್ತದ್ದಾರೆ. ತಮ್ಮ ಬೆಂಬಲಿಗ ಶಾಸಕರು, ಸಚಿವರನ್ನು ಕರೆಯಿಸಿ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಹೊಲಸು ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಉರುಳಿಸಲು ತಂತ್ರ ರೂಪಿಸುತ್ತಿದ್ದಾರೆ.
ಇಷ್ಟಾದರೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತ್ರ ನಮ್ಮ ಸರ್ಕಾರ ಐದು ವರ್ಷ ಉಳಿಯತ್ತದೆ, ನಮ್ಮ ಮೈತ್ರಿ ಯಶಸ್ವಿಯಾಗಿ ಐದು ವರ್ಷ ರಾಜ್ಯಭಾರ ಮಾಡುತ್ತದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳಿಂದ ಭಯಭೀತರಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿಪ್ಪೆ ಸಾರಿಸುತ್ತಿದ್ದಾರೆ.
ಇನ್ನು ಶಾಸಕರು, ಸಚಿವರೇನೂ ಸಾಚಾ ಇಲ್ಲ. ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿಕೊಳ್ಳುವ ನೆಪದಲ್ಲಿ ಸಿದ್ದರಾಮಯ್ಯನವರ ಜತೆ ಸೇರಿ, ಸರ್ಕಾರ ಹೇಗೆ ಉರುಳಿಸಬೇಕು, ಹೇಗೆ ಕುಮಾರಸ್ವಾಮಿ ಅವರನ್ನು ಪೇಚಿಗೆ ಸಿಲುಕಿಸಬೇಕು ಎಂದು ಆಲೋಚಿಸುತ್ತಿದ್ದಾರೆ. ಮತ್ತೆ ಇವರು ಸರ್ಕಾರ ಉಳಿಸುವುದು ಸಿದ್ದರಾಮಯ್ಯ ಮಾತ್ರ ಎನ್ನುತ್ತಿದ್ದಾರೆ. ಅಲ್ಲಿಗೆ ಯಾರೋ ಸರ್ಕಾರ ಉರುಳಿಸಲು ತಯಾರಿ ನಡೆಸುತ್ತಿದ್ದಾರೆ ಎಂದಾಯಿತಲ್ಲ.
ಅತ್ತ ಕುಮಾರಸ್ವಾಮಿಯವರೂ ಏನೂ ಕಡಿಮೆ ಇಲ್ಲ. ನಾವೇ ಆಡಳಿತ ನಡೆಸುತ್ತೇವೆ, ನಾನೇ ಮುಖ್ಯಮಂತ್ರಿ, ಇನ್ನೊಂದು ವರ್ಷ ನನ್ನ ಸೀಟು ಅಲ್ಲಾಡಿಸಲು ಆಗುವುದಿಲ್ಲ ಎನ್ನುತ್ತಾರೆ. ದೇವೇಗೌಡರು ಇದೇ ಮಾತು ಆಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಹ ಇಂಥದ್ದೇ ಮಾತನಾಡುತ್ತಿದ್ದಾರೆ.
ಆದರೆ ಇದೆಲ್ಲದರ ಮಧ್ಯೆ ರಾಜ್ಯದ ಆಡಳಿತ ಯಂತ್ರ ಸ್ಥಗಿತವಾಗಿದೆ. ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿಲ್ಲ. ರೈತರಿಗೆ ನೀಡಿದ ಸಾಲ ಮನ್ನಾ ಭರವಸೆ ಈಡೇರಿಸಿಲ್ಲ. ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಹೇಳಿ ಇದೇನು ಸಮ್ಮಿಶ್ರ ಸರ್ಕಾರವೋ, ಅಧಿಕಾರ, ಮುನ್ನಡೆಗಾಗಿ ನಡೆಯುತ್ತಿರುವ ರಂಪಾಟವೋ?
Leave A Reply