ಮಾನವೀಯತೆ ಮೆರೆದ ಭಾರತೀಯ ಸೇನೆ, ಪಾಕ್ ಬಾಲಕನನ್ನು ಸಿಹಿ ನೀಡಿ ಹಸ್ತಾಂತರಿಸಿದ ಸೈನಿಕರು
ಶ್ರೀನಗರ: ಭಾರತೀಯ ಸೇನೆಯ ಅಧಿಕಾರಿಗಳು ಕ್ರೌರ್ಯ ಮೆರೆದವರಿಗೆ ಅದಕ್ಕೆ ತಕ್ಕಂತೆ ಉತ್ತರ ನೀಡುತ್ತಾರೆ. ಆದರೆ ಮಾನವೀಯತೆ ನೆಲೆಯಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಭಾರತದೊಂದಿಗೆ ಸದಾ ಸೆಣಸಾಟಕ್ಕೆ ಇಳಿಯುವ ಪಾಕಿಸ್ತಾನದ ಬಾಲಕನೊಬ್ಬ ನಾಲ್ಕು ದಿನಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ. 11 ವರ್ಷದ ಆ ಬಾಲಕನನ್ನು ಭಾರತೀಯ ಸೈನಿಕರು ಪಾಕಿಸ್ತಾನದ ಅಧಿಕಾರಿಗಳಿಗೆ ಸಿಹಿಯೊಂದಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
11 ವರ್ಷದ ಬಾಲಕ ಅಬ್ದುಲ್ಲಾ ಜೂನ್ 24ರಂದು ಭಾರತದ ಗಡಿಯೊಳಗೆ ಪ್ರವೇಶಿಸಿದ್ದ. ಅಕ್ರಮವಾಗಿ ಪ್ರವೇಶಿಸಿದ ಬಾಲಕನ್ನನ್ನು ಪೂಂಛ್ ಜಿಲ್ಲೆಯ ದೇಗ್ವಾರ್ ವಲಯದಲ್ಲಿ ಭಾರತೀಯ ಸೇನೆ ಪತ್ತೆ ಹಚ್ಚಿತ್ತು. ಆತನನ್ನು ಅದೇ ದಿನ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಒಪ್ಪಿಸಲಾಗಿತ್ತು.
ನಂತರ ಪೊಲೀಸರು ಬಾಲಕನನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಂಡರು. ಅಲ್ಲದೇ ಆತನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಿ, ಸ್ನೇಹವೃದ್ಧಿಯತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.
ಬಾಲಕನ ವಯಸ್ಸು ಪರಿಗಣಿಸಿ, ಭಾರತ ಮತ್ತು ಪಾಕಿಸ್ತಾನದ ಮಧ್ಯ ಬಾಂಧವ್ಯ ವೃದ್ಧಿ ಉತ್ತೇಜಿಸಲು ಅಬ್ದುಲ್ಲಾನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ ಎಂದು ಭಾರತೀಯ ಸೇನೆಯ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
Leave A Reply