ದ.ಕ.ದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ತುಂಬಿದ ನದಿಗಳು
ಮಂಗಳೂರು : ಕರಾವಳಿಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮೀಣ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಾದ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸೇರಿದಂತೆ ಇನ್ನಿತರ ಕಡೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಮಳೆ ಪರಿಸ್ಥಿತಿ ನೋಡಿಕೊಂಡು ಶಾಲೆಗೆ ಆಯಾ ಶಾಲಾಡಳಿಕ್ಕೆ ರಜೆ ನೀಡಲು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪುತ್ತೂರು, ಬೆಳ್ತಂಗಡಿಯ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟದಲ್ಲಿದೆ. ಮಂಗಳೂರಿನ ತೊಕ್ಕೊಟ್ಟು ಕೆರೆಬೈಲಿನಲ್ಲಿ ಶಾರಾದಾ ಪೂಜಾರಿ ಎಂಬವರ ಮನೆ ಮಳೆಗೆ ಕುಸಿದಿದು ಬಿದ್ದಿದೆ. ಘಟನೆ ಸಂದರ್ಭ ಶಾರಾದಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಗುಡ್ಡಜರಿದ ಘಟನೆಗಳು ನಡೆದಿವೆ. ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ರಸ್ತೆ ಬದಿಯ ಗುಡ್ಡ ಜರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಜುಲೈ 2 ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಡಳಿತಕ್ಕೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಹೊರಡಿಸಲಾಗಿದೆ.
Leave A Reply