ಉತ್ತಮ ಜ್ಞಾಪಕ ಶಕ್ತಿ ಹೊಂದಿದ ಇಬ್ಬರು ಮಕ್ಕಳಿಗೆ ಯೋಗಿ ಆದಿತ್ಯನಾಥರಿಂದ ತಲಾ 51 ಸಾವಿರ ರೂ. ಬಹುಮಾನ!
ಲಖನೌ: ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಅಭಿವೃದ್ಧಿ, ರೈತರ ಸಾಲ ಮನ್ನಾ, ರೋಡ್ ರೋಮಿಯೋಗಳಿಗೆ ಕಡಿವಾಣ, ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಖ್ಯಮಂತ್ರಿಯಾದ ಒಂದೇ ವರ್ಷದಲ್ಲಿ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಇಂತಹ ಹಿನ್ನೆಲೆಯುಳ್ಳ ಯೋಗಿ ಆದಿತ್ಯನಾಥರು ಈಗ ಮತ್ತೊಂದು ಶ್ಲಾಘನೀಯ ಕಾರ್ಯ ಮಾಡಿದ್ದು, ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಜ್ಞಾಪಕ ಶಕ್ತಿ ಹೊಂದಿರುವ ಇಬ್ಬರು ಮಕ್ಕಳಿಗೆ ತಲಾ 51 ಸಾವಿರ ರೂಪಾಯಿ ಘೋಷಿಸಿ ಪ್ರೋತ್ಸಾಹಿಸಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯ ಹನಿ ಸಿಂಗ್ ಹಾಗೂ ಸಿಂಗ್ ಎಂಬ ವಿದ್ಯಾರ್ಥಿಗಳು ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಒಂದೂವರೆ ತಾಸಿನಲ್ಲಿ ಬರೋಬ್ಬರಿ ಎರಡು ಸಾವಿರ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥರು ಬಹುಮಾನ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ, ಈ ಇಬ್ಬರು ಮಕ್ಕಳು ಉತ್ತಮ ಪ್ರತಿಭೆ ಹೊಂದಿದ್ದಾರೆ. ಅವರಿಗೆ ಶುಭಾಶಯ ಕೋರುತ್ತ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. ಅಲ್ಲದೆ ರಾಜ್ಯ ಸರ್ಕಾರ ಅವರ ಶಿಕ್ಷಣಕ್ಕೆ ನೆರವಾಗಲಿದ್ದು, ತಲಾ 51 ಸಾವಿರ ರೂಪಾಯಿ ಬಹುಮಾನ ಹಾಗೂ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತದೆ ಎಂದು ಯೋಗಿ ಆದಿತ್ಯನಾಥರು ಭರವಸೆ ನೀಡಿದ್ದಾರೆ.
Leave A Reply