ಕರಾವಳಿಯ ಕಾಂಗ್ರೆಸ್ ನಾಯಕ ಬಿ.ಎ ಮೊಹಿದೀನ್ ಆತ್ಮಕಥೆ ‘ನನ್ನೊಳಗಿನ ನಾನು ಪುಸ್ತಕ ಬಿಡುಗಡೆ- ಕಾಂಗ್ರೆಸ್ ಪಾಳಯದಲ್ಲಿ ಸಂಚಲನ
ಮಂಗಳೂರು : ಮತ್ತೆ ರಾಜ್ಯದ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸುತ್ತಿದೆ ಕರಾವಳಿಯ ಕಾಂಗ್ರೆಸ್ ಹಿರಿಯ ನಾಯಕ ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’. ಇತ್ತೀಚೆಗೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರ ಆತ್ಮಕಥೆ ‘ಸಾಲ ಮೇಳದ ಸಂಗ್ರಾಮ’ ಬಿಡುಗಡೆಯಾಗಿತ್ತು. ಆದರೆ ಕೇಂದ್ರದ ಸಚಿವರಾಗಿ ಕಾಂಗ್ರೆಸ್ ನ ಹಲವು ಹುದ್ದೆಗಳನ್ನು ಅಲಂಕರಿಸಿದ್ದರೂ ಪೂಜಾರಿ ಅವರ ಆತ್ಮಕಥೆಯಲ್ಲಿ ಯಾವುದೇ ರೀತಿಯ ವಿವಾದಾತ್ಮಕ ಅಂಶಗಳಿರದೇ ಅದು ಸಂಪೂರ್ಣ ಸಪ್ಪೆಯಾಗಿತ್ತು.
ಆದರೆ ಈಗ ಕರಾವಳಿಯ ಹಿರಿಯ ಕಾಂಗ್ರೆಸ್ ನಾಯಕ ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’ ಬಿಡುಗಡೆಗೆ ಮುನ್ನವೇ ಕುತೂಹಲ ಸೃಷ್ಠಿಸಿದೆ. ಕರಾವಳಿಯಲ್ಲಿ ಕಾಂಗ್ರೆಸ್ ನಾಯಕರ ಸ್ಫೋಟಕ ಮಾಹಿತಿಗಳನ್ನು ತಮ್ಮ ಆತ್ಮಕಥೆಯಲ್ಲಿ ಬರೆದಿರುವ ಮೊಹಿದೀನ್ ಅವರು, ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ತಮ್ಮ ಆತ್ಮಕಥೆಯಲ್ಲಿ ತಮ್ಮ ನೋವನ್ನು ತೆರೆದಿಟ್ಟಿದ್ದಾರೆ. ನನಗೀಗ 80 ವರ್ಷ ಪ್ರಾಯ. ಬದುಕಿನ ಮುಸ್ಸಂಜೆಯ ಹೊತ್ತು ಎಂದು ಆರಂಭಿಸುವ ಮೊಹಿದೀನ್ ಅವರು ತನ್ನ ಬಾಲ್ಯ, ಶಿಕ್ಷಣ, ಕಾಲೇಜಿನ ದಿನಗಳು , ಮದುವೆ ಎಲ್ಲವನ್ನೂ ಆತ್ಮಕಥೆಯಲ್ಲಿ ವಿವರಿಸಿದ್ದಾರೆ.
ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡ ಮೊಹಿದಿನ್ ಅವರು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ಹಿರಿಯ ನಾಯಕರ ವಿರುದ್ಧವೇ ತಮ್ಮ ಆತ್ಮಕಥೆಯಲ್ಲಿ ಗುಡುಗಿದ್ದಾರೆ. ನನ್ನ ರಾಜಕೀಯ ಜೀವನವನ್ನು ಮುಗಿಸಿದ್ದೇ ಜನಾರ್ಧನ ಪೂಜಾರಿ, ವೀರಪ್ಪ ಮೊಯ್ಲಿ ಹಾಗೂ ಆಸ್ಕರ್ ಫರ್ನಾಂಡಿಸ್ ಎಂದು ಆರೋಪಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸನ್ನು ಜಾತ್ಯಾತೀತವಾಗಿ ಕಟ್ಟಿ ಬೆಳೆಸಿದ ನನ್ನನ್ನು ಸೇರಿ, ಅನೇಕ ಕಾಂಗ್ರೆಸ್ ಮುಖಂಡರು ರಾಜಕೀಯ ಜೀವನವನ್ನೇ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಸರ್ವನಾಶ ಮಾಡಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮುವಾದಿ ರಾಜಕೀಯಕ್ಕೆ ಮುನ್ನುಡಿ ಬರೆದವರು ಜನಾರ್ಧನ ಪೂಜಾರಿ ಎಂಬ ಸ್ಪೋಟಕ ಮಾಹಿತಿಯನ್ನು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ.
ದೇವರಾಜು ಅರಸು ನಿಕಟವರ್ತಿಯಾಗಿ ರಾಜಕೀಯ ಪ್ರವೇಶಿಸಿದ ಮೊಹಿದೀನ್ ಅವರು ಕಾಂಗ್ರೆಸ್ ಹಾಗೂ ಜನತಾ ಪಾಳಯದಲ್ಲಿ ಸಮವಾಗಿ ಮಿಂಚಿದರು. 1978ರಲ್ಲಿ ಬಂಟ್ವಾಳದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ನ ಬಂಡಾಯ ಕಾಲದಲ್ಲಿ ಅರಸು ಪಾಳಯದಲ್ಲಿದ್ದ ಕಾರಣ ಅವರಿಗೆ ನಂತರ ಚುನಾವಣೆಯಲ್ಲಿ ಟಿಕೇಟ್ ನಿರಾಕರಿಸಲಾಗಿತ್ತು. ಬಿ.ಎ ಮೊಹಿದೀನ್ ಅವರು ಒಂದು ಬಾರಿ ಶಾಸಕರಾಗಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅರಸು ಕಾಂಗ್ರೆಸ್ ನಿಂದ ಬಂದವರಿಗೆ ಪೂಜಾರಿ, ಮೊಯ್ಲಿ ಮತ್ತು ಆಸ್ಕರ್ ಮಾಡಿದ ಅನ್ಯಾಯದ ಬಗ್ಗೆ ಆತ್ಮಕಥನದುದ್ದಕ್ಕೂ ವಿವರಿಸಿರುವ ಮೊಹಿದ್ದಿನ್ ಅವರು , ಒಂದು ಹಂತದಲ್ಲಿ ನನ್ನ ರಾಜಕೀಯ ಜೀವನವನ್ನು ಮುಗಿಸಿದ ಈ ಮೂವರು ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಮೂವರು ಈ ರೀತಿಯಾಗಿ ನನಗೇಕೆ ಅನ್ಯಾಯ ಮಾಡಿದ್ದಾರೆ ಎಂದು ಈಗಲೂ ನಾನು ಒಮ್ಮೊಮ್ಮೆ ಯೋಚಿಸುತ್ತೇನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ತೊಂದರೆಕೊಟ್ಟಿಲ್ಲ. ಆದರೆ ಈ ಮೂವರು ನನಗೆ ಮಾಡಿದ ಅನ್ಯಾಯ ನೆನಪಾದಾಗ ಒಂದು ರೀತಿಯ ನೋವು ಕಾಡುತ್ತದೆ ಎನ್ನುವ ಸಾಲುಗಳು ಈ ಆತ್ಮಕಥನದಲ್ಲಿ ಒಳಗೊಂಡಿದೆ. ‘ನನ್ನೊಳಗಿನ ನಾನು’ ಆತ್ಮಕಥೆಯ ನಿರೂಪಣೆಯ ಕಾರ್ಯವನ್ನು ಮಹಮ್ಮದ್ ಕುಳಾಯಿ ಮತ್ತು ಬಿ.ಎ. ಮೊಹಮ್ಮದ್ ಆಲಿ ವಹಿಸಿದ್ದಾರೆ. ರಾಜಕೀಯದಲ್ಲಿ ಉಂಡ ಸಿಹಿ – ಕಹಿ ಘಟನೆಗಳನ್ನು ಮೊಹಿದೀನ್ ಅವರು 232 ಪುಟಗಳ ತನ್ನ ಆತ್ಮಕಥನದಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ. ಈ ಆತ್ಮಕಥೆ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
Leave A Reply