ಸಿಎಂ ನೀಡಿದ ಐಫೋನ್ ಮರಳಿಸಲು ನಿರ್ಧರಿಸಿ, ಮಾದರಿಯಾದ ಬಿಜೆಪಿ ಸಂಸದರು
ಬೆಂಗಳೂರು: ರಾಜ್ಯದಲ್ಲಿರುವ ಸಾಲು ಸಾಲು ಸಮಮಸ್ಯೆಗಳ ಮಧ್ಯೆ ರಾಜ್ಯದ ಸಂಸದರಿಗೆ ಐಫೋನ್ ಬ್ಯಾಗ್ ಮತ್ತು ಮೋಚಿ ಲೆದರ್ ಬ್ಯಾಗ್ ಉಡುಗೊರೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ತೀವ್ರ ವಿವಾದ ಸೃಷ್ಟಿಸಿದೆ. ರಾಜ್ಯದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ ನಮಗೆ ಉಡುಗೊರೆ ಬೇಡ ಎಂಬ ಸಂದೇಶವನ್ನು ನೀಡಲು ಬಿಜೆಪಿ ಸಂಸದರು ನಿರ್ಧರಿಸಿದ್ದಾರೆ. ಈ ಮೂಲಕ ತೆರಿಗೆ ಹಣ ಜನಪ್ರತಿನಿಧಿಗಳ ಐಷಾರಾಮಿ ಜೀವನಕ್ಕೆ ಬಳಸಬಾರದು ಎಂಬ ಸಂದೇಶವನ್ನು ನೀಡಿದ್ದಾರೆ.
ರಾಜ್ಯ ಸರ್ಕಾರ ದೆಹಲಿಯಲ್ಲಿ ಬುಧವಾರ ನಡೆಯಲಿರುವ ಸಂಸದರ ಸಭೆಗೆ ಆಮಂತ್ರಣ ನೀಡುವ ಜೊತೆಗೆ ಆ್ಯಪಲ್ ಐಫೋನ್ ಎಕ್ಸ್ ಮತ್ತು ಮೋಚಿ ಲೆದರ್ ಬ್ಯಾಗ್ ನ್ನು ಉಡುಗೊರೆಯಾಗಿ ನೀಡಿದ್ದು, ಅದನ್ನು ಬಿಜೆಪಿ ಸಂಸದರು ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿದ್ದಾರೆ.
‘ನಾನು ಈಗಾಗಲೇ ಐಫೋನ್ ಮತ್ತು ಬ್ಯಾಗ್ ನ್ನು ಮರಳಿ ನೀಡಿದ್ದೇನೆ. ಜೊತೆಗೆ ರಾಜ್ಯ ಬಿಜೆಪಿಯ ಎಲ್ಲ ಸಂಸದರು ಐ ಫೋನ್ ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ ಸಿಎಂ ಕುಮಾರಸ್ವಾಮಿಗೆ ಟ್ವೀಟ್ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿಯವರೇ, ನನ್ನ ಬೆಂಗಳೂರು ಕಚೇರಿಗೆ ಕಾವೇರಿ ನದಿಗೆ ಸಂಬಂಧಪಟ್ಟ ದಾಖಲೆ ಹಾಗೂ ದುಬಾರಿ ಬೆಲೆಯ ಐ ಫೋನ್ ಅನ್ನು ಬ್ಯಾಗ್‌ನಲ್ಲಿ ನೀಡಲಾಗಿತ್ತು. ಆದರೆ, ನನ್ನ ಆದೇಶದ ಮೇರೆಗೆ ನನ್ನ ಕಾರ್ಯದರ್ಶಿ ಸೋಮವಾರವೇ ಬ್ಯಾಗ್ ವಾಪಸ್ ಕಳಿಸಿದ್ದಾರೆ. ಈ ರೀತಿಯ ಉಡುಗೊರೆಗಳಿಗೆ ಸರಕಾರದ ಹಣ ಬಳಕೆ ಸರಿಯಲ್ಲ ಎಂದು ಅನಂತಕುಮಾರ ಟ್ವೀಟ್ ಮಾಡಿದ್ದಾರೆ.
ಸರಿಯಾಗಿ ಸಂಬಳ ಸಿಗದೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿದೆ. ರೈತರ ಹಾಗೂ ಜನರ ಜೀವನವನ್ನು ಹಾಳು ಮಾಡುತ್ತಿದೆ. ಹೀಗಾಗಿ, ರಾಜ್ಯ ಸರಕಾರ ತನ್ನ ಬೊಕ್ಕಸದಲ್ಲಿರುವ ಹಾಗೂ ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ಜನರ ಕಷ್ಟವನ್ನು ಪರಿಹರಿಸಲು ವಿನಿಯೋಗಿಸಿ ಎಂದು ಸಲಹೆ ನೀಡಿದ್ದಾರೆ.
Leave A Reply