ಭಾರತೀಯ ನೌಕಾಪಡೆಯಲ್ಲಿ ಮೂರನೇ ಉನ್ನತ ಹುದ್ದೆಗೇರಿದ ಕೊಡಗಿನ ವೀರ ಉತ್ತಯ್ಯ!
ಕೊಡಗು ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ಅಲ್ಲಿನ ನಿಸರ್ಗ ಸಂಪತ್ತು. ಅದಾದ ನಂತರ ನಮ್ಮ ಸ್ಮೃತಿಪಟಲಕ್ಕೆ ಬರುವುದು ಜನರಲ್ ಕಾರ್ಯಪ್ಪ. ಇವರ ಬಳಿಕ ದೇಶಕ್ಕಾಗಿ ಹೋರಾಡಿದ ಕೊಡಗಿನ ಕುಟುಂಬಗಳು, ವೀರ ಸೈನಿಕರು, ಮಳೆ, ಕೊಡವ ಸಂಸ್ಕೃತಿ ನೆನಪಾಗುತ್ತದೆ. ಕೊಡಗು ಎಂದಾಕ್ಷಣ ಸೈನಿಕರು ನೆನಪಾಗುವ ಹಾಗೆ ಇಲ್ಲಿನ ವೀರರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.
ಸೈನ್ಯದ ವಿಷಯಕ್ಕೆ ಸಂಬಂಧಿಸಿದಂತೆ ಇಂತಹ ವೀರ ಇತಿಹಾಸ ಇರುವ ಕೊಡಗಿನಿಂದ ಈಗ ವೀರನೊಬ್ಬ ಭಾರತೀಯ ನೌಕಾಪಡೆಯಲ್ಲಿ ಮೂರನೇ ಅತ್ಯುನ್ನತ ಸ್ಥಾನಕ್ಕೆ ಏರುವ ಮೂಲಕ ಕೊಡಗು ಹಾಗೂ ಕರ್ನಾಟಕದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಅವರ ಹೆಸರು ಐಚ್ಚೆಟ್ಟಿರ ಬಿ. ಉತ್ತಯ್ಯ.
ಹೌದು, ಬಿ. ಉತ್ತಯ್ಯ ಅವರು ಭಾರತೀಯ ನೌಕಾಪಡೆಯ ರಿಯರ್ ಅಡ್ಮಿರಲ್ ಆಗಿ ನೇಮಕವಾಗಿದ್ದು, ಆ ಮೂಲಕ ಭಾರತೀಯ ನೌಕಾಪಡೆಯಲ್ಲಿ ಈ ಹುದ್ದೆಗೇರಿದ ಕೊಡಗಿನ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಅಲ್ಲದೆ ನೌಕಾಪಡೆಯಲ್ಲಿ ರಿಯರ್ ಅಡ್ಮಿರಲ್ ಹುದ್ದೆ ಅಲಂಕರಿಸಿರುವುದು ಭೂ ಸೇನೆಯಲ್ಲಿ ಮೇಜರ್ ಜನರಲ್ ಹುದ್ದೆಗೆ ಸಮ ಎಂಬುದು ಗಮನಾರ್ಹವಾಗಿದೆ.
1984ರಿಂದಲೇ ಸೇನೆಯಲ್ಲಿ ಸೇವೆ ಮಾಡುತ್ತಿರುವ ಬಿ, ಉತ್ತಯ್ಯ ಅವರು ಬಿ.ಟೆಕ್., ಎಂ.ಟೆಕ್ ಹಾಗೂ ಎಂಫಿಲ್ ಪದವಿ ಪಡೆದಿದ್ದಾರೆ. ಉತ್ತಯ್ಯ ಅವರ ಕಾರ್ಯಕ್ಷೇತ್ರ ದೆಹಲಿಯಾಗಿದ್ದು, ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದೆ. ಉತ್ತಯ್ಯ ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಇದಕ್ಕೂ ಮುನ್ನ ನೌಕಾಪಡೆಯಲ್ಲಿ ಕಮಾಡೋರ್ ಆಗಿ ಕಾರ್ಯನಿರ್ವಹಿಸಿದ್ದರು. ಉತ್ತಯ್ಯ ಅವರು ನೌಕಾಪಡೆಯ ಅಡ್ಮಿರಲ್ ಆಗಿ ಹೊರಹೊಮ್ಮುವ ಮೂಲಕ ಪ್ರತಿ ಕನ್ನಡಿಗೂ ಮತ್ತಷ್ಟು ಹೆಮ್ಮೆಪಡುವಂತಾಗಲಿ ಎಂದು ಆಶಿಸೋಣ.
Leave A Reply