ಮಳೆರಾಯನ ಆರ್ಭಟ ಮತ್ತೆ ಶುರು, ಮನೆಪಕ್ಕದಲ್ಲೇ ಗುಡ್ಡ ಕುಸಿತ: ಕುದುರೆಮುಖ ಸಂಪೂರ್ಣ ಬಂದ್
ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಮೂರು ಗ್ರಾಮಗಳಲ್ಲಿ ಮನೆಪಕ್ಕದಲ್ಲೇ ಗುಡ್ಡ ಕುಸಿದಿದೆ. ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮದಲ್ಲಿ ಗುಡ್ಡ ಕುಸಿದು ಮಣ್ಣು ಮನೆಗೆ ಅಪ್ಪಳಿಸಿದೆ. ರವಿಶಂಕರ್, ಶ್ರೀಪಾಲ್, ವರ್ಧಮಾನಯ್ಯಾನವರ ನಿವಾಸಕ್ಕೆ ಮಣ್ಣು ಅಪ್ಪಳಿಸಿದ್ದು, ಮನೆಯವರಲ್ಲಿ ಆತಂಕ ಉಂಟಾಗಿದೆ.
ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ರಸ್ತೆಯ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಕುಸಿತದಿಂದಾಗಿ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಪರಿಣಾಮ ಕಳಸ ಸಂಚಾರ ಕೂಡ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕುದುರೆಮುಖ ಸಮೀಪದ ರಸ್ತೆಯಲ್ಲಿ ಗುಡ್ಡ ಕುಸಿದು ಬೀಳುತ್ತಿದೆ. ಹಾಗಾಗಿ ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ ವಾಹನ ಸಂಚಾರ ಮಾಡದಂತೆ ತಡೆಯುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಲಾರಿಗಳಿಗೆ ನಿಷೇಧವಾದ ಹಿನ್ನೆಲೆಯಲ್ಲಿ ಶನಿವಾರದಿಂದ ಭಾರೀ ಗಾತ್ರದ ವಾಹನಗಳು ಈ ಮಾರ್ಗವಾಗಿ ಮಂಗಳೂರು ತಲುಪುತ್ತಿದ್ದವು. ಆದರೆ ಆದರೆ ಈಗ ಗುಡ್ಡ ಕುಸಿದು ಬೀಳುತ್ತಿರುವ ಕಾರಣ ಕುದುರೆಮುಖ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
Leave A Reply