ಮದೆನಾಡುಗಳಲ್ಲಿ ಸಂಭವಿಸಿದ ಜಲಪ್ರಳಯ; ಎದುರಾಗುತ್ತಿದೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯುವ ಭೀತಿ!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳ ಹಾಗು ಮದೆನಾಡುಗಳಲ್ಲಿ ಸಂಭವಿಸಿದ ಜಲಪ್ರಳಯ ನಂತರ ಸುಳ್ಯ ಗಡಿಭಾಗಗಳಲ್ಲೂ ಗುಡ್ಡಗಳು ಕುಸಿಯುವ ಆತಂಕ ವ್ಯಕ್ತವಾಗುತ್ತಿವೆ . ಪಶ್ಚಿಮ ಘಟ್ಟದ ತಪ್ಪಲು ಕುಸಿಯುವ ಭೀತಿ ಈಗ ಎದುರಾಗುತ್ತಿದೆ. ಸುಳ್ಯದ ಗಡಿಭಾಗ ಕೂಜುಮಲೆ, ಕಲ್ಮಕಾರು ಅರಣ್ಯದ ಬೆಟ್ಟ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಭಾಗದಲ್ಲಿ ನೆಲೆಸಿರುವ ಜನರಲ್ಲಿ ಆತಂಕ ಅರಂಭವಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿಗೆ ಸಮೀಪದ ಮಾಯಿಲ ಕೋಟೆ ಎಂಬಲ್ಲಿ ಭೂಮಿ ಅಡಿ ಭಾರೀ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಭಯದಿಂದ ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದರು. ಈಗಾಗಲೇ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಇಲ್ಲಿಯ ಬಾಡಡ್ಕ ಸುಂದರ ಮಲೆಕುಡಿಯರವರ ಮನೆಯ ಹಿಂಬದಿಯ ಗುಡ್ಡ ಸುಮಾರು 1 ಕಿ.ಮೀ. ದೂರ ಬಿರುಕು ಬಿಟ್ಟಿದೆ. ಗುಡ್ಡ ಜರಿದರೆ ಸುಂದರ ಮಲೆಕುಡಿಯರ ಮನೆ ಸಹಿತ ನೂರಾರು ಎಕರೆ ಕೃಷಿ ಜಮೀನು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ನಡುವೆ ಸುಬ್ರಹ್ಮಣ್ಯ ಸಮೀಪದ ಅರಣ್ಯ ಪ್ರದೇಶ ಗುತ್ತಿಗಾರಿನ ದೇವಚಳ್ಳ, ಕರಂಗಲ್ಲು ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ. ಬೆಟ್ಟದ ಮೇಲಿಂದ ಭಾರೀ ಪ್ರಮಾಣದಲ್ಲಿ ಕಲ್ಲು ಮಣ್ಣು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟ ಕುಸಿಯುವ ಭೀತಿ ಎದುರಾಗಿದ್ದು, ಬೆಟ್ಟದ ತಪ್ಪಲಿನಲ್ಲಿರುವ ಹತ್ತಾರು ಎಕರೆ ಅಡಿಕೆ, ರಬ್ಬರ್ ತೋಟ ನಾಶವಾಗುವ ಆತಂಕ ಕಾಡಲಾರಂಭಿಸಿದೆ. ಪರಿಣಾಮ ದೇವಚಳ್ಳ, ಕರಂಗಲ್ಲು ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.