ಸ್ಯಾಂಡಲ್ ವುಡ್ ಮೇಲೆ ಸಿಸಿಬಿ ಕಣ್ಣು; ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ಗೆ ಬಂಧನದ ಭೀತಿ!
ಬೆಂಗಳೂರು: ಸ್ಯಾಂಡಲ್ ವುಡ್ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಚಂದನ್ ಶೆಟ್ಟಿ ನಂತರ ಈಗ ‘ರ‍್ಯಾಂಬೋ -2’ ಚಿತ್ರದ ತಂಡಕ್ಕೆ ಸಂಕಷ್ಟ ಎದುರಾಗಿದೆ. ರ‍್ಯಾಂಬೋ -2 ಚಿತ್ರದ ಧಮ್ ಮಾರೋ ಧಮ್ ಹಾಡಿನ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಧಿತಿ ಸಾಗರ್ ಗೆ ಸಮನ್ಸ್ ನೀಡಲು ಸಿಸಿಬಿ ತಂಡ ಸಿದ್ಧತೆ ನಡೆಸುತ್ತಿದೆ. ಚಂದನ್ ಶೆಟ್ಟಿ ಅವರ ವಿಚಾರಣೆಯ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತುಗೆ ಸಂಕಷ್ಟ ಎದುರಾಗಲಿದೆ. ಚಿತ್ರದ ಈ ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ರ‍್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ‘ಅಂತ್ಯ’ ಸಿನಿಮಾದ “ಗಾಂಜಾ ಕಿಕ್” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವೀಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದರು. ಇಂದು ಚಂದನ್ ವಿಚಾರಣೆಗೆ ಹಾಜರಾಗಿದ್ದಾರೆ.
ಚಂದನ್ ಶೆಟ್ಟಿ ವಿಚಾರಣೆ ಆದ ಬಳಿಕ ರ‍್ಯಾಂಬೋ-2 ಚಿತ್ರದ ‘ಧಮ್ ಮಾರೋ ಧಮ್’ ಹಾಡಿನ ಸಾಹಿತ್ಯ ಬರೆದ ಮುತ್ತು ಸೇರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಅಧಿತಿ ಸಾಗರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್‍ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಕರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ.
ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡುವ ಮೊದಲು ಫಿಲಂ ಚೇಂಬರ್ ಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ `ಈ ರೀತಿಯ ಹಾಡುಗಳು ಸಮಾಜದಲ್ಲಿ ಸಾಕಷ್ಟು ಕೆಡುಕು ಉಂಟು ಮಾಡುತ್ತಿದೆ. ಅಲ್ಲದೇ ಯುವಜನತೆಗೆ ಗಾಂಜಾ ಸೇವನೆ ಮಾಡಲು ಆಕರ್ಷಿಸುತ್ತದೆ. ಹಾಗಾಗಿ ನೀವು ಈ ರೀತಿಯ ಹಾಡುಗಳ ಬಗ್ಗೆ ನಿಗಾವಹಿಸಿ ಎಂದು ತಿಳಿಸಿದ್ದರು. ಅಲ್ಲದೇ ಈ ರೀತಿಯ ಹಾಡುಗಳ ಲಿಂಕ್‍ಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‍ನಲ್ಲಿ ಡಿಲೀಟ್ ಮಾಡಬೇಕೆಂದು ಸಿಸಿಬಿ ಪೊಲೀಸರು ಹೇಳಿದ್ದರು ಎನ್ನಲಾಗಿದೆ.
Leave A Reply