ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿ
ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ವಿರುದ್ದ ಹೀನಾಯವಾಗಿ ಸೋತಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ್ ರೈಗೆ ತಮ್ಮ ಸೋಲನ್ನು ಜೀರ್ಣಿಸಿಕೊಳ್ಳಲು ಬಹಳ ದಿನಗಳೇ ಬೇಕಾಯಿತು. ದೇವಸ್ಥಾನ, ದೈವಸ್ಥಾನಕ್ಕೆ ಹೋಗಿ, ನಾನೇನು ತಪ್ಪು ಮಾಡಿಲ್ಲ, ಎಲ್ಲಾ ಬಿಜೆಪಿಯವರ ಅಪಪ್ರಚಾರ ಎಂದು ದೇವರ ಮೊರೆಹೋಗಿದ್ದರು.
ಅಲ್ಪಸಂಖ್ಯಾತರ ಮತದಿಂದಲೇ ಜಯಗಳಿಸಿದ್ದು ಎಂದು ಹಿಂದೊಮ್ಮೆ ಹೇಳಿದ್ದ ರಮಾನಾಥ ರೈಗೆ, ಬಂಟ್ವಾಳದ ಜನತೆ ಅಸೆಂಬ್ಲಿ ಚುನಾವಣೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಿದರು ಎನ್ನುವುದು ಅಲ್ಲಿನ ಜನತಯೇ ಮಾತನಾಡಿಕೊಳ್ಳುವ ವಿಚಾರ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ, ಮುಂಬರುವ ಲೋಕಸಭಾ ಚುನಾವಣೆಗೆ ರಮಾನಾಥ್ ರೈ, ದಕ್ಷಿಣಕನ್ನಡ ಜಿಲ್ಲೆಯ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಹೆಚ್ಚುಕಮ್ಮಿ ಅವರ ಹೆಸರೇ ಫೈನಲ್ ಆಗಿರುವ ಹೊತ್ತಿನಲ್ಲಿ, ಜಿಲ್ಲೆಯ ಇನ್ನೊಬ್ಬ ಹಿರಿಯ ಮುಖಂಡರು, ನಾನೂ ಟಿಕೆಟ್ ಆಕಾಂಕ್ಷಿಯೆಂದಿರುವುದು ರೈ ಸಾಹೇಬ್ರಿಗೆ ಹೊಸ ಮಂಡೆಬಿಸಿ ತಂದು ಹಾಕಿದೆ.
ಕೇಸರಿ ಮತ್ತು ಮೋದಿ ಹವಾ ಜಾಸ್ತಿ ಇರುವ ಕ್ಷೇತ್ರಗಳಲ್ಲಿ ನಿಸ್ಸಂದೇಹವಾಗಿ ದಕ್ಷಿಣಕನ್ನಡ ಕೂಡಾ ಒಂದು. ಇಲ್ಲಿ ಸಂಸದರಿಂದ ಕ್ಷೇತ್ರದ ಅಭಿವೃದ್ದಿ ಎಷ್ಟಾಯಿತು ಎನ್ನುವುದಕ್ಕಿಂತ, ಜಾತಿ ಮತ್ತು ಕೋಮು ಲೆಕ್ಕಾಚಾರವೇ ಹೆಚ್ಚು ವರ್ಕೌಟ್ ಆಗುವುದು. ಕಳೆದ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಮೋದಿಯವರ ಹವಾದಿಂದಲೇ ಎನ್ನುವುದು ಒತ್ತಿ ಹೇಳುವ ಅವಶ್ಯಕತೆಯಿಲ್ಲ.
ಬಿಜೆಪಿಗೆ ಸರಿಸಾಟಿಯಾಗಿ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಈ ಕ್ಷೇತ್ರದಿಂದ ಯಾರು ಎಂದು ಕಾಂಗ್ರೆಸ್ ತೀವ್ರ ಹುಡುಕಾಟದಲ್ಲಿದ್ದಾಗ, ಪಕ್ಷಕ್ಕೆ ಸಿಕ್ಕ ಹೆಸರು ರಮಾನಾಥ್ ರೈ. ಖುದ್ದು, ರೈಗಳೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ, ಕಾಂಗ್ರೆಸ್ಸಿಗಿದ್ದ ದೊಡ್ಡ ತಲೆನೋವು ಕಮ್ಮಿಯಾದಂಗಾಗಿತ್ತು. ಆದರೆ, ಟಿಕೆಟ್ ಕೊಟ್ಟರೆ ನಾನೂ ಕಣಕ್ಕಿಳಿಯಲು ಸಿದ್ದ ಎಂದು ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಿರಿಯ ಮುಖಂಡರೊಬ್ಬರು ಹೇಳಿರುವುದು, ಪಕ್ಷದ ಲೆಕ್ಕಾಚಾರವನ್ನು ಇನ್ನೊಂದು ಪುಟಕ್ಕೆ ತಿರುಗಿಸಿದೆ.
Leave A Reply