ಶಬರಿಮಲೆ ತೀರ್ಪಿನ ವಿರುದ್ಧ ಅ.9ರಂದು ಮಂಗಳೂರಿನಲ್ಲಿ ಬೃಹತ್ ಸಭೆ….!
ಕದ್ರಿ ಮೈದಾನದಲ್ಲಿ ಸೇರಲಿದ್ದಾರೆ ಸಹಸ್ರಾರು ಮಂದಿ..!!!
ಮಂಗಳೂರು: ಶಬರಿಮಲೆ ಪ್ರವೇಶ ಕುರಿತಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ ನಡೆಸಲು ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ನಿರ್ಧರಿಸಿದೆ.
ಹೋರಾಟದ ಪೂರ್ವಭಾವಿ ಸಭೆ ಶನಿವಾರ ನಗರದ ಸಂಘನಿಕೇತನದಲ್ಲಿ ನಡೆದಿದ್ದು, ಮೊದಲ ಹಂತವಾಗಿ ಅ.೯ರಂದು ಸಂಜೆ ೫ ಗಂಟೆಗೆ ಕದ್ರಿ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಹಿಂದು ಬಾಂಧವರು ಒಟ್ಟು ಸೇರಿ ಹೋರಾಟದ ರೂಪುರೇಷೆಯ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಭಜನೆಯ ಮೂಲಕ ಶ್ರೀ ಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರಕ್ಕೆ ಸಮಿತಿ ಬಂದಿದೆ. ಸಭೆಯಲ್ಲಿ ಪಾಲ್ಗೊಂಡ ವಿವಿಧೆಡೆಯ ಅಯ್ಯಪ್ಪಸ್ವಾಮಿ ಭಕ್ತರು, ಸಂಘಟನೆಗಳ ಪ್ರಮುಖರು ಹಾಗೂ ಹಿಂದು ಬಾಂಧವರು ತಮ್ಮ ತಮ್ಮ ವ್ಯಾಪ್ತಿಯ ಪುಣ್ಯ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ಆ ಬಳಿಕ ೫ ಗಂಟೆಗೆ ಸರಿಯಾಗಿ ಕದ್ರಿ ಮೈದಾನದಲ್ಲಿ ಸೇರುವಂತೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಾಪ್ತಿಯಿಂದ ಸುಮಾರು ೪೦೦-೫೦೦ ಮಂದಿಯನ್ನು ಕರೆತರುವ ಭರವಸೆ ನೀಡಿದ್ದು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ವಿಶ್ವಹಿಂದು ಪರಿಷತ್ ದಕ್ಷಿಣ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಆರೆಸ್ಸೆಸ್ ಮಹಾನಗರ ಸಂಘಚಾಲಕ್ ಸುನಿಲ್ ಆಚಾರ್, ಬಜರಂಗದಳ ಪ್ರಾಂತ ಸಂಚಾಲಕ ಶರ್‌ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.
Leave A Reply