ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಮತ್ತೆ ಮಾಡಿ, ಮೊದಲು ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿ ಖಾದರ್!!
ನಗರಾಭಿವೃದ್ಧಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯುಟಿ ಖಾದರ್ ಅವರಿಗೆ ಸಡನ್ನಾಗಿ ಕುದ್ರೋಳಿ ಕಸಾಯಿ ಖಾನೆಯನ್ನು ಹೈಜೆನಿಕ್ ಮಾಡಬೇಕೆಂದು ಕನಸು ಬಿದ್ದಿದೆ. ಸರಿಯಾಗಿ ನೋಡಿದರೆ ಕುದ್ರೋಳಿ ಕಸಾಯಿಖಾನೆಗಿಂತ ಮಂಗಳೂರಿನಲ್ಲಿರುವ ಅಸಂಖ್ಯಾತ ಇತರ ಅನಧಿಕೃತ ಕಸಾಯಿಖಾನೆಗಳಲ್ಲಿಯೇ ಗೋವು ಸಹಿತ ಇತರ ಪ್ರಾಣಿಗಳ ವಧೆ ಅವ್ಯಾಹತವಾಗಿ ನಡೆಯುತ್ತದೆ. ಅಲ್ಲೆಲ್ಲ ಯಾವ ಹೈಜೆನಿಕ್ ವ್ಯವಸ್ಥೆ ಮಾಡಲು ಖಾದರ್ ಮುಂದಾಗುತ್ತಾರೆ ಎನ್ನುವುದು ನೋಡಬೇಕು. ಅದು ಬಿಡಿ, ಕ್ರಿಶ್ಚಿಯನ್ನರು ಹೆಚ್ಚಾಗಿ ತಿನ್ನುವ ಹಂದಿಯನ್ನು ವಧೆ ಮಾಡಲು ನಮ್ಮಲ್ಲಿ ಯಾವ ವ್ಯವಸ್ಥೆ ಇದೆ. ಹಾಗಾದರೆ ಕ್ರಿಶ್ಚಿಯನ್ನರು ಹೈಜೆನಿಕ್ ಆಹಾರವನ್ನು ಸೇವಿಸುವುದು ಬೇಡವೇ. ಇನ್ನು ಕೋಳಿ ಮಾಂಸ ಸಿಗುವ ಸೆಂಟ್ರಲ್ ಮಾರುಕಟ್ಟೆಯ ಸಮೀಪ ಮತ್ತು ಉರ್ವಾ ಮಾರುಕಟ್ಟೆಯಲ್ಲಿ ಹೋಗಿ ನೋಡಿದರೆ ವಾಕರಿಕೆ ಬಂದಿತು. ಅಷ್ಟು ಗಲೀಜು ಇದೆ. ಅದು ಖಾದರ್ ಅವರಿಗೆ ಕಾಣಿಸಲ್ವ. ಜನರು ಅದರಲ್ಲಿಯೂ ಮುಖ್ಯವಾಗಿ ಮುಸ್ಲಿಮರು ಹೈಜೆನಿಕ್ ಮಾಂಸವನ್ನೇ ತಿನ್ನಬೇಕು ಎಂದು ಖಾದರ್ ಬಯಸುವುದಾದರೆ ಮೊದಲು ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಿ. ಕುದ್ರೋಳಿಯಲ್ಲಾದರೆ ಒಂದು ಚಪ್ಪರದಂತಹ ಮಾಡಾದರೂ ಇದೆ. ಅನಧಿಕೃತ ಕಸಾಯಿಖಾನೆಗಳ ಮಾಂಸ ತಿನ್ನುವ ಜನರನ್ನು ದೇವರೇ ಕಾಪಾಡಬೇಕು.
ಯಾವುದೂ ನಿಯಮ ಪ್ರಕಾರ ನಡೆಯಲ್ಲ ಇಲ್ಲಿ..
ಕುದ್ರೋಳಿ ಕಸಾಯಿಖಾನೆ ಮಂಗಳೂರಿನ ಮಟ್ಟಿಗೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಅಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುವಾಗ ಕಾರಿಗೆ ಡಿಕ್ಕಿ ಹೊಡೆದ ಪ್ರಕರಣವೊಂದರಲ್ಲಿ ಮಂಗಳೂರು ಬಂದ್ ಆಗಿ ನಂತರ ನಡೆದ ಘಟನೆಯಲ್ಲಿ ವಾರಗಟ್ಟಲೆ ಮಂಗಳೂರು ಪ್ರಕ್ಷುದ್ಧ ಆದದ್ದನ್ನು ಇವತ್ತಿಗೂ ಮಂಗಳೂರಿಗರು ಮರೆತಿರಲಿಕ್ಕಿಲ್ಲ. ಮಂಗಳೂರಿನ ಮಟ್ಟಿಗೆ ಇರುವ ಏಕೈಕ ಅಧಿಕೃತ ಕಸಾಯಿ ಖಾನೆ ಎಂದರೆ ಅದು ಕುದ್ರೋಳಿ ಕಸಾಯಿ ಖಾನೆ. ಉಳಿದ ಲೆಕ್ಕವಿಲ್ಲದಷ್ಟು ಕಸಾಯಿಖಾನೆಗಳು ಅನಧಿಕೃತ. ಕುದ್ರೋಳಿ ಕಸಾಯಿಖಾನೆ ಹೈಜೆನಿಕ್ ಆಗಿ ಇಲ್ಲ ಎಂದು ಸುಮಾರು ಎಂಟು ವರ್ಷಗಳ ಹಿಂದೆ ಪರಿಸರವಾದಿಗಳು ರಾಜ್ಯ ಸರಕಾರಕ್ಕೆ ದೂರು ಕೊಟ್ಟಿದ್ದರು. ಒಂದು ಅಧಿಕೃತ ಕಸಾಯಿಖಾನೆ ಹೇಗಿರಬೇಕು ಎಂದರೆ ಅಲ್ಲಿ ಯಾವುದೇ ಪ್ರಾಣಿಯನ್ನು ವಧೆ ಮಾಡಲು ತಂದಾಗ ಅದನ್ನು ಮೊದಲು ಪಶು ವೈದ್ಯಾಧಿಕಾರಿ ಅದನ್ನು ಪರೀಕ್ಷಿಸಬೇಕು. ಪ್ರಾಣಿಯ ದೇಹದಲ್ಲಿ ಯಾವುದೇ ಗಾಯ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಬೇಕು. ವೈದ್ಯರು ಓಕೆ ಮಾಡಿ ಪ್ರಮಾಣಪತ್ರ ನೀಡಿದ ಬಳಿಕ ಪ್ರಾಣಿಯನ್ನು ಕತ್ತರಿಸಲಾಗುತ್ತದೆ. ಒಂದು ಪ್ರಾಣಿಯ ಹತ್ಯೆ ನಡೆಯುವಾಗ ಮತ್ತೊಂದು ಪ್ರಾಣಿ ಅದನ್ನು ನೋಡುವುದು ಕೂಡ ನಿಯಮ ಪ್ರಕಾರ ತಪ್ಪು. ನಂತರ ಪ್ರಾಣಿಯ ಮಾಂಸವನ್ನು ಚೀಲದಲ್ಲಿ ಹಾಕಿದ ಬಳಿಕ ಮತ್ತೊಮ್ಮೆ ವೈದ್ಯರು ಅದನ್ನು ಪರೀಕ್ಷಿಸಿ ಪಾಲಿಕೆಯ ಕಡೆಯಿಂದ ಸೀಲ್ ಹಾಕಿ ಪ್ರಮಾಣಪತ್ರ ನೀಡಬೇಕು. ಅದರ ನಂತರವೇ ಅದು ಮಾರಾಟಕ್ಕೆ ಹೋಗುತ್ತದೆ. ಆದರೆ ಇಲ್ಲಿ ಕಾನೂನು ಪ್ರಕಾರ ಯಾವುದೂ ನಡೆಯುವುದಿಲ್ಲ ಎಂದು ಪರಿಸರವಾದಿಗಳು ವರದಿ ಕೊಟ್ಟ ಬಳಿಕ ಮಂಗಳೂರಿನ ಹೊರವಲಯದಲ್ಲಿ ಹೊಸ ಕಸಾಯಿಖಾನೆ ಮಾಡೋಣ ಎಂದು ರಾಜ್ಯ ಸರಕಾರದಿಂದ ತೀರ್ಮಾನವಾಯಿತು. ಅದರಂತೆ ಎಡಿಬಿಯಿಂದ ಬಂದ ಮೊದಲ ಹಂತದ ಸಾಲದಲ್ಲಿ ನಲ್ವತ್ತು ಕೋಟಿಯನ್ನು ಇದಕ್ಕಾಗಿ ಮೀಸಲಿಡಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಣ್ಣೂರಿನಲ್ಲಿ ಇದಕ್ಕಾಗಿ ಸ್ಥಳ ಪರಿಶೀಲನೆ ಮಾಡಲಾಯಿತು. ಆದರೆ ಕಣ್ಣೂರಿನಲ್ಲಿ ಮುಸ್ಲಿಮರೇ ಪ್ರತಿಭಟನೆ ನಡೆಸಿದರು. ನಮ್ಮ ಏರಿಯಾದಲ್ಲಿ ಯಾವುದೇ ಕಸಾಯಿ ಖಾನೆ ಬೇಡಾ ಎಂದು ಹೋರಾಟ ನಡೆಸಿದರು. ಅದರ ನಂತರ ಅಲ್ಲಿ ಕಸಾಯಿ ಖಾನೆಯ ನಿರ್ಮಾಣದ ಪ್ರಕ್ರಿಯೆಗಳು ಆರಂಭವಾಗಲೇ ಇಲ್ಲ. ಅದಾಗಿ ಸ್ವಲ್ಪ ಕಾಲದ ಬಳಿಕ ಕುಡುಪು ಗ್ರಾಮದಲ್ಲಿ ಕಸಾಯಿಖಾನೆಯನ್ನು ನಿರ್ಮಾಣ ಮಾಡುವುದು ಎಂದು ತೀರ್ಮಾನವಾಯಿತು. ಆದರೆ ಅಲ್ಲಿ ನಿರ್ಮಾಣದ ಪ್ರಸ್ತಾವಕ್ಕೆ ಬಜ್ಪೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಆಕ್ಷೇಪ ಬಂತು. ಕುಡುಪು ಪರಿಸರದಲ್ಲಿ ಕಸಾಯಿಖಾನೆ ನಿರ್ಮಾಣವಾದರೆ ಅಲ್ಲಿ ವಿಮಾನ ನಿಲ್ದಾಣ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಇರುವುದರಿಂದ ತೊಂದರೆಯಾಗುತ್ತದೆ ಎಂದು ಹೇಳಲಾಯಿತು. ಕಸಾಯಿಖಾನೆ ಇರುವ ಸ್ಥಳದಲ್ಲಿ ಹದ್ದು, ಗಿಡುಗಗಳ ಭರಾಟೆ ಇರುವುದರಿಂದ ಅದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆ ಆಗಬಹುದು ಎನ್ನುವ ವಾದ ಮುಖ್ಯವಾಗಿತ್ತು. ಕೊನೆಗೆ ಅಲ್ಲಿ ಕೂಡ ಕಸಾಯಿಖಾನೆ ನಿರ್ಮಾಣವಾಗಲಿಲ್ಲ. ಒಂದು ಹೈಜೆನಿಕ್ ಕಸಾಯಿಖಾನೆ ನಿರ್ಮಾಣಕ್ಕೆ ಮಿನಿಮಮ್ ಎಪ್ಪತ್ತು ಸೆಂಟ್ಸ್ ಜಾಗವಾದರೂ ಬೇಕು. ಕುದ್ರೋಳಿ ಕಸಾಯಿಖಾನೆಯಲ್ಲಿ ಅಷ್ಟು ಜಾಗ ಇಲ್ಲದೇ ಇರುವಾಗ ಹದಿನೈದು ಕೋಟಿ ರೂಪಾಯಿ ಖರ್ಚು ಮಾಡಿ ಅಲ್ಲಿ ಎನು ಸಾಧಿಸಲು ಖಾದರ್ ಹೊರಟಿದ್ದಾರೆ ಎನ್ನುವುದು ಪ್ರಶ್ನೆ. ಆದ್ದರಿಂದ ಇದು ಕಸಾಯಿಖಾನೆ ಅಭಿವೃದ್ಧಿಯಾಗಿರದೆ ಭ್ರಷ್ಟಾಚಾರಕ್ಕೆ ದಾರಿ ಆಗುತ್ತದಾ ಎನ್ನುವುದು ಜನರ ಸಂಶಯ.
ಇದು ಲೋಕಸಭಾ ಚುನಾವಣೆಗೆ ಖಾದರ್ ಬಿಜೆಪಿಗೆ ಕೊಟ್ಟ ಗಿಫ್ಟ್..
ಖಾದರ್ ಸಾಮಾನ್ಯವಾಗಿ ಸಿಕ್ಕಿ ಬೀಳುವುದು ಕಡಿಮೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಮಂಗಳೂರು ಅಂದರೆ ಹಿಂದಿನ ಉಳ್ಳಾಲ ಕ್ಷೇತ್ರದಲ್ಲಿ ಹಿಂದೂಗಳ ಮನೆಯ ಸಣ್ಣ ಕಾರ್ಯಕ್ರಮವಾದರೂ ಕರೆದರೆ ಅಲ್ಲಿ ಯುಟಿ ಖಾದರ್ ಹಾಜರ್. ಹಿಂದೂಗಳ ದೇವಸ್ಥಾನಗಳಲ್ಲಿ ಜಾತ್ರೆ, ಹಬ್ಬಹರಿದಿನ, ಕೋಲ, ನೇಮದಂತಹ ಕಾರ್ಯಕ್ರಮದಲ್ಲಿಯೂ ಖಾದರ್ ಹೋಗಿ ಭಕ್ತಿಭಾವ ಪ್ರದರ್ಶಿಸುವುದು ಇದೆ. ಆದ್ದರಿಂದ ಕೋಮಿನ ವಿಷಯಗಳು ಬಂದಾಗ ಖಾದರ್ ಎಷ್ಟು ಬ್ಯಾಲೆನ್ಸ್ ಆಗುತ್ತದೋ ಅಷ್ಟು ಮಾತನಾಡಿ ಎಸ್ಕೇಪ್ ಆಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಆದರೆ ಲೋಕಸಭಾ ಚುನಾವಣೆಗೆ ಆರು ತಿಂಗಳು ಇರುವಾಗ ಯಾರಿಗೂ ಹೇಳದೇ ಕೇಳದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುದ್ರೋಳಿ ಕಸಾಯಿ ಖಾನೆಗೆ ಹದಿನೈದು ಕೋಟಿ ಘೋಷಿಸಿ ವಿವಾದ ಉಂಟು ಮಾಡಿದ್ದಾರೆ. ಅವರ ಈ ನಡೆ ರಾಜಕೀಯವಾಗಿ ಅವರಿಗೆ ಅಂತಹ ಪೆಟ್ಟು ಕೊಡದಿದ್ದರೂ ಕಾಂಗ್ರೆಸಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಈಗಲೇ ಮೈನಸ್ ಉಂಟು ಮಾಡಿರುವುದು ಸ್ಪಷ್ಟ.
Leave A Reply