ಸಿದ್ಧರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ನಡುವೆ ಸಿಕ್ಕಿಬಿದ್ದ ಟಿಪ್ಪು!!

ಟಿಪ್ಪು ಸುಲ್ತಾನ್ ಕರ್ನಾಟಕದಲ್ಲಿ ಅಪ್ಪಟ ಆಟದ ವಸ್ತುವಾಗಿ ಬಿಟ್ಟಿದ್ದಾರೆ. ಮೂರು ರಾಜಕೀಯ ಪಕ್ಷಗಳ ನಾಯಕರು ಟಿಪ್ಪುವನ್ನು ಬೇಕಾದಾಗ ಬಳಸಿ ನಂತರ ಬಿಸಾಡುತ್ತಿದ್ದಾರೆ. ಆಶ್ಚರ್ಯ ಎಂದರೆ ಟಿಪ್ಪುವಿನಿಂದ ಯಾರಿಗೂ ಲಾಭವಾಗಿಲ್ಲ ಎನ್ನುವುದು ಮಾತ್ರ ಸತ್ಯ. ತಾಂತ್ರಿಕವಾಗಿ ಮೊದಲಿಗೆ ಟಿಪ್ಪುವನ್ನು ಎತ್ತಿ ಆಡಿಸಿದ್ದು ಸಿದ್ಧರಾಮಯ್ಯ.
2015 ರಲ್ಲಿ ಮೊದಲ ಬಾರಿಗೆ ಸರಕಾರಿ ಖರ್ಚಿನಲ್ಲಿ ಟಿಪ್ಪುವಿನ ಹುಟ್ಟಿದ ಹಬ್ಬವನ್ನು ಆಚರಿಸೋಣ ಎಂದು ಸಿದ್ಧರಾಮಯ್ಯ ಹೊರಟಾಗ ಬೇಡಾ ಎನ್ನುವ ಧೈರ್ಯ ಕಾಂಗ್ರೆಸ್ಸಿನಲ್ಲಿ ಯಾರಿಗೂ ಇರಲಿಲ್ಲ. ಯಾಕೆಂದರೆ ಆವಾಗಾಗಲೇ ಎಸ್ ಡಿಪಿಐ ಎನ್ನುವ ಪಕ್ಷ ರಾಜ್ಯದಲ್ಲಿ ಚಿಗುರಿ ಆಗಿತ್ತು. ಕಾಂಗ್ರೆಸ್ಸಿಗೆ ಹಲವು ಕಡೆ ಆವಾಝ್ ಹಾಕುವ ರೀತಿಯಲ್ಲಿ ಎಸ್ ಡಿಪಿಐ ಬೆಳೆದಾಗಿತ್ತು. ಈ ಹಂತದಲ್ಲಿ ಮುಸ್ಲಿಮರ ಮನಸ್ಸನ್ನು ಬೇರೊಂದು ವಿಚಾರದಲ್ಲಿ ಸೆಳೆಯದಿದ್ದರೆ ಕಾಂಗ್ರೆಸ್ ಉಸಿರಾಡುವುದು ಕಷ್ಟವಿತ್ತು. ಆವಾಗಲೇ ಸಿದ್ಧರಾಮಯ್ಯನವರು ಎಚ್ಚೆತ್ತುಕೊಂಡರು. ಹೀಗೆ ಬಿಟ್ಟರೆ ಕಾಂಗ್ರೆಸ್ ಮುಳುಗಿಬಿಡುತ್ತೆ ಎಂದು ಹೆದರಿಸಿದ ಸಿದ್ದು ಮುಸಲ್ಮಾನರನ್ನು ಖುಷಿಪಡಿಸಲು ಏನು ಮಾಡಬೇಕು ಎಂದು ಯೋಚಿಸಿದಾಗ ಅವರಿಗೆ ಹೊಳೆದದ್ದೇ ಟಿಪ್ಪು. ಟಿಪ್ಪುವನ್ನು ಮೆರವಣಿಗೆ ಮಾಡಿ ಮುಸ್ಲಿಮರ ಮತಗಳನ್ನು ಹಾಗೆ ಬುಟ್ಟಿಗೆ ಹಾಕಿಬಿಡೋಣ ಎಂದು ಸಿದ್ದು ನಿಂತುಬಿಟ್ಟಿದ್ದರು. ಹೀಗೆ ಮಾಡಿದರೆ ಏನಾದರೂ ಸಮಸ್ಯೆ ಆಗುತ್ತಾ ಎಂದು ಸಿದ್ದು ಒಮ್ಮೆ ಯೋಚಿಸಿದ್ದು ಹೌದು. ಹಾಗೆ ಅವರು ಯೋಚಿಸುವಾಗಲೇ ಅವರ ಎದುರಿಗೆ ಅವರ ಸಹಾಯಕರು ಒಂದು ಫೋಟೋ ತಂದು ಇಟ್ಟರು. ಅದರ ಮೇಲೆ ಕಣ್ಣಾಡಿಸಿದ ಸಿದ್ದುವಿಗೆ ಆಶ್ಚರ್ಯ ಕಾದಿತ್ತು. ಸ್ವತ: ಟಿಪ್ಪು ಸುಲ್ತಾನ್ ಮೈಮೇಲೆ ಆವಾಹಿಸಿಕೊಂಡವರಂತೆ ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರು ಟಿಪ್ಪುವಿನ ಖಡ್ಗ ತರಹದೊಂದು ಹಿಡಿದು ಹಳೆ ಟೋಪ್ಪಿಯಾಕಾರದ್ದೊಂದು ಹಾಕಿ ಫೋಟೋಗೆ ಫೋಸ್ ಕೊಡುತ್ತಿದ್ದರು. ಇದ್ಯಾವ ಸೀಮೆ ಫೋಟೋ ಕಣ್ರೋ ಎಂದು ಸಿದ್ದು ಆಪ್ತರನ್ನು ಕೇಳಿದಾಗ “ಸರ್, ಇದು ಮೈಸೂರಿಗೆ ಮೊನ್ನೆ ಯಡ್ಡೂರಪ್ಪ ಬಂದು ಟಿಪ್ಪು ಸಮಾಧಿ ಹತ್ತಿರ ನಿಂತು ಹೀಗೆ ಫೋಟೋ ತೆಗೆಸಿಕೊಂಡಾವ್ರೆ” ಎಂದು ಹುಡುಗರು ಹೇಳಿಬಿಟ್ಟಿದ್ದರು.
ಇದು ಸಿದ್ದು ಟೆನ್ಷನ್ ಹೆಚ್ಚಲು ಕಾರಣವಾಯಿತು. ಒಂದು ಕಡೆ ಎಸ್ ಡಿಪಿಐ ಮುಸ್ಲಿಮರ ಮತಗಳನ್ನು ಸೆಳೆಯಲು ಕೈಕಾಲು ಹೊಡೆಯುತ್ತಿದ್ದರೆ ಇತ್ತ ಬಿಎಸ್ ವೈ ಟಿಪ್ಪು ವೇಷ ಹಾಕಿ ಫೋಟೋ ತೆಗೆದದ್ದು ಸಿದ್ದು ಕೋಪದೊಂದಿಗೆ ಬಿಪಿ ಹೆಚ್ಚಲು ಕಾರಣವಾಯಿತು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಷ್ಟೋತ್ತಿಗೆ ಇನ್ನೊಂದು ಫೋಟೋ ಸಿದ್ಧರಾಮಯ್ಯನವರ ಟೇಬಲ್ ಬಂದು ಕುಳಿತಿತ್ತು. ಅದರಲ್ಲಿ ಅಶೋಕ, ಜಗದೀಶ್ ಶೆಟ್ಟರ್ ಕೂಡ ಟಿಪ್ಪು ಗೆಟ್ಟಪಿನಲ್ಲಿ ಮಿಂಚುತ್ತಿದ್ದಾರೆ. ಅವರೊಂದಿಗೆ ಒಂದಿಷ್ಟು ಬಿಜೆಪಿ ನಾಯಕರೂ ಇದ್ದಾರೆ. ಇನ್ನು ಹೆಚ್ಚು ದಿನ ಕಾದರೆ ಬಿಜೆಪಿಯವರು ಒಬ್ಬನೇ ಒಬ್ಬ ಟಿಪ್ಪುವನ್ನು ಹೈಜಾಕ್ ಮಾಡಿ ತಮ್ಮನ್ನು ಅನಾಥರನ್ನಾಗಿ ಮಾಡುತ್ತಾರೆ ಎಂದು ಹೆದರಿದ ಸಿದ್ದು ಮರುದಿನ ಬೆಳಿಗ್ಗೆ ಎದ್ದವರೇ ನಾವು ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಘೋಷಿಸಿಬಿಟ್ಟರು. ಹೀಗೆ ಸಿದ್ದು ಘೋಷಣೆ ಮಾಡಿದ ಕೂಡಲೇ ಯಡ್ಯೂರಪ್ಪನವರ ಧವಳಗಿರಿ ಮನೆಯಲ್ಲಿ ಸೇರಿದ ಬಿಜೆಪಿ ನಾಯಕರು ಈ ಬಗ್ಗೆ ಏನು ನಿರ್ಧಾರ ಮಾಡೋಣ ಎಂದು ಸಭೆ ನಡೆಸಿದರು. ಹೀಗೆ ಬಿಟ್ಟರೆ ಸಿದ್ದು ಮುಸ್ಲಿಮರ ಹೀರೋ ಆಗಿ ಬಿಡುತ್ತಾರೆ. ನಾವೀಗ ಏನಾದರೂ ಮಾಡಿ ಇದನ್ನೇ ಬಳಸಿ ಹಿಂದೂ ಮತಗಳನ್ನು ಒಟ್ಟುಗೂಡಿಸೋಣ ಎಂದು ತೀರ್ಮಾನಿಸಲಾಯಿತು. ಅಷ್ಟೊತ್ತಿಗಾಗಲೇ ಬಿಎಸ್ ವೈಗೆ ತಾವು ಕೆಜಿಪಿಯಲ್ಲಿದ್ದಾಗ ಟಿಪ್ಪು ಛದ್ಮವೇಷ ಹಾಕಿ ಫೋಟೋ ತೆಗೆದದ್ದು ಮರೆತು ಹೋಗಿತ್ತು. ಶೆಟ್ಟರ್, ಅಶೋಕ್ ಹಿಂದೂ ಮತ ಒಟ್ಟಾಗುವ ಖುಷಿಯಲ್ಲಿ ತಾವು ಹಿಡಿದ ಖಡ್ಗ, ಹಾಕಿದ ಟೋಪಿಯೆಲ್ಲಾ ಯಾರಿಗೆ ನೆನಪಿರುತ್ತೆ ಎಂದು ಅಂದುಬಿಟ್ಟರು. ಹೀಗೆ ಒಂದು ಕಡೆ ಸಿದ್ದು ಅಂಡ್ ಟೀಮ್ ಜೈ ಟಿಪ್ಪು ಎನ್ನುತ್ತಿದ್ದರೆ ಕೇಸರಿ ಪಾಳಯದವರು ನೋ ಟಿಪ್ಪು ಎನ್ನುತ್ತಿದ್ದರು. ಈ ನಡುವೆ ಕುಮಾರಸ್ವಾಮಿ ಅವರಿಗೆ ಒಪ್ಪುವುದಾ ಬಿಡುವುದಾ ಎನ್ನುವ ಗೊಂದಲ ಉಂಟಾಯಿತು. ಅವರು ಸೀದಾ ತಂದೆಯವರ ಬಳಿ ಬಂದು “ವಿರೋಧಿಸಿದರೂ ಕಷ್ಟ, ಬಿಟ್ಟರೂ ಕಷ್ಟ” ಎಂದು ಗೋಳಾಡಿಕೊಂಡಾಗ ಒಂದಿಷ್ಟು ಜನ ಇವರ ಮನೆಗೆ ಬಂದು “ಸರ್, ಟಿಪ್ಪು ಮಂಡ್ಯದಲ್ಲಿ ಮಾಡಿರುವ ನರಮೇಧವನ್ನು ಎರಡು ಶತಮಾನ ಹೋದರೂ ನಾವು ಮರೆತಿಲ್ಲ. ಮಂಡ್ಯ ಜೆಡಿಎಸ್ ಪ್ರಬಲ ಕೋಟೆ. ನೀವೇನಾದರೂ ವಿರೋಧ ವ್ಯಕ್ತಪಡಿಸದೇ ಹೋದರೆ ಮಂಡ್ಯದ ಮೇಲೆ ಹತೋಟಿ ಬಿಟ್ಟುಬಿಡಿ” ಎಂದು ಹೇಳಿಬಿಟ್ಟರು. ಆದ್ದರಿಂದ ವಿಧಾನಸಭಾ ಅಧಿವೇಶನದಲ್ಲಿ 2015 ರಲ್ಲಿ ವಿಪಕ್ಷದಲ್ಲಿದ್ದ ಕುಮಾರಣ್ಣ ಎದ್ದು ನಿಂತು ಸಿದ್ಧರಾಮಯ್ಯನವರನ್ನು ಝಾಡಿಸಿಬಿಟ್ಟರು. ಧರ್ಮಾಂಧ ರಾಜನೊಬ್ಬನ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ತೀವ್ರ ವಿರೋಧವಿದೆ ಎಂದುಬಿಟ್ಟರು. ಆ ಮೂಲಕ ತನ್ನ ಸ್ವಕ್ಷೇತ್ರದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾದರು. ಅದೆಲ್ಲ ಆಗಿ ಈಗ ಮೂರು ವರ್ಷ. ವರ್ಷದಿಂದ ವರ್ಷ ಟಿಪ್ಪು ಜಯಂತಿ ನೀರಸವಾಗುತ್ತಿದೆ. ಈ ವರ್ಷವಂತೂ ಕಾಟಾಚಾರಕ್ಕೆ ಮಾಡಿದಂತೆ ಮಾಡಿ ಮುಗಿಸಿದ್ದಾರೆ. ಈ ಬಾರಿಯಂತೂ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಆಚರಣೆಗೆ ಬರದೇ ಕಾಂಗ್ರೆಸ್ಸಿಗೆ ಸಡ್ಡು ಹೊಡೆದಿದ್ದಾರೆ. ತಮಗೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಿ ಇಡೀ ಮಂತ್ರಿ ಮಂಡಲಕ್ಕೆ ದಂಗುಬಡಿಸಿದ್ದಾರೆ. ವೈದ್ಯರು ಟಿಪ್ಪು ಜಯಂತಿಯಂದೇ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿರುವುದು ಮತ್ತು ವೈದ್ಯರು ಹೇಳಿದ ತಕ್ಷಣ ಕುಮಾರಸ್ವಾಮಿಯವರು ವಿಶ್ರಾಂತಿಗೆ ಹೋದದ್ದಕ್ಕೆ ಕಾಂಗ್ರೆಸ್ಸಿನಲ್ಲಿ ಇರಿಸುಮುರುಸಾಗಿದೆ. ಕಾಂಗ್ರೆಸ್ಸಿಗರು ಬೇಕಾದರೆ ಮಾಡಿಕೊಳ್ಳಿ, ನಾನು ನನ್ನ ಕ್ಷೇತ್ರದ ಜನರ ಕೋಪಕ್ಕೆ ಗುರಿಯಾಗಲ್ಲ, ನನಗೆ ಅವರು ಮುಖ್ಯ ಎಂದು ಸಾರುವ ಮೂಲಕ ಎಚ್ ಡಿಕೆ ಟಿಪ್ಪು ಜಯಂತಿ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಬಹುಶ: ಮುಂದಿನ ವರ್ಷವೂ ಇದೇ ಸರಕಾರ ಅಸ್ತಿತ್ವದಲ್ಲಿ ಇದ್ದರೆ ಆಗಲೂ ಟಿಪ್ಪು ಜಯಂತಿಯ ವೇಳೆಗೆ ವೈದ್ಯರು ಕುಮಾರಸ್ವಾಮಿಯವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಬಹುದು!�
Leave A Reply