ಗೋವಾ ಸರಕಾರದೊಂದಿಗೆ (ಮೀನುರಫ್ತು) ಕರಾವಳಿ ನಿಯೋಗದ ಮಾತುಕತೆ ಫಲಪ್ರದ, ಯಶಸ್ವಿ!
ರಾಜ್ಯದಿಂದ ರಫ್ತಾಗುವ ಮೀನಿಗೆ ಫಾರ್ಮಾಲಿನ್ ಬೆರೆಸಲಾಗುತ್ತದೆ ಎಂದು ಗೋವಾ ಸರಕಾರ ಕರ್ನಾಟಕದಿಂದ ಮೀನು ಆಮದಿಗೆ ನಿಷೇಧ ಹೇರಿದ್ದನ್ನು ರದ್ದುಗೊಳಿಸುವ ಸಂಬಂಧ ಅಲ್ಲಿನ ಸರಕಾರದೊಂದಿಗೆ ನಡೆಸಿದ ಮಾತುಕತೆ ಯಶಸ್ವಿ ಮತ್ತು ಫಲಪ್ರದವಾಗಿದೆ ಎಂದು ಕರಾವಳಿಯ ಸಂಸದರು, ಬಿಜೆಪಿ ಶಾಸಕರು ಹಾಗೂ ಮೀನುಗಾರಿಕಾ ಮುಖಂಡರನ್ನೊಳಗೊಂಡ ನಿಯೋಗ ಹರ್ಷ ವ್ಯಕ್ತಪಡಿಸಿದೆ.
ಗೋವಾದ ಸ್ಪೀಕರ್ ಪ್ರಮೋದ್ ಸಾವಂತ್, ಆರೋಗ್ಯ ಸಚಿವ ವಿಶ್ವಜೀತ್ ಪಿ ರಾಣೆ, ಮೀನುಗಾರಿಕಾ ಸಚಿವ ವಿನೋದ್ ಪಾಲಿನರ್ಸ್ ಅವರೊಂದಿಗೆ ಗೋವಾ ರಾಜ್ಯ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿಗಳೊಂದಿಗೆ ಗೋವಾದಲ್ಲಿ ನಡೆದ ಮಹತ್ವದ ಮಾತುಕತೆಯಲ್ಲಿ ಗೋವಾ ಸರಕಾರ ಕೆಲವು ಷರತ್ತುಗಳನ್ನು ಹೇಳಿದ್ದು ಅದನ್ನು ಕರ್ನಾಟಕದ ನಿಯೋಗ ಒಪ್ಪಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬರುವ ಮೀನು ಸಾಗಾಣಿಕಾ ವಾಹನಗಳನ್ನು ಇನ್ಸುಲೇಟೆಡ್ ಮಾದರಿಯಲ್ಲಿಯೇ ತರಬೇಕು. ಯಾವುದೇ ಕಾರಣಕ್ಕೂ ಒಪನ್ ವಾಹನಗಳಲ್ಲಿ ತರಬಾರದು. ಇನ್ನು ದಕ್ಷಿಣ ಕನ್ನಡ, ಉಡುಪಿಯಿಂದ ಬರುವ ಮೀನುಗಳನ್ನು ಗೋವಾ ರಾಜ್ಯಕ್ಕೆ ತರುವಾಗ ಎಫ್ ಎಸ್ ಎಸ್ ಎ ಐ ಪ್ರಮಾಣಪತ್ರವನ್ನು ತರಬೇಕು ಎಂದು ಗೋವಾ ಸರಕಾರ ಹೇಳಿದೆ. ಅದನ್ನು ನಿಯೋಗದಲ್ಲಿದ್ದ ಮೀನುಗಾರ ಮುಖಂಡರು ಒಪ್ಪಿಕೊಂಡಿದ್ದಾರೆ.
ಅದೇ ರೀತಿ ಗೋವಾದಲ್ಲಿ ತಡೆಹಿಡಿಯಲಾಗಿದ್ದ ಕರ್ನಾಟಕದ ಮೀನುಗಾರಿಕಾ ಲಾರಿಗಳನ್ನು ತಕ್ಷಣ ಬಿಡುಗಡೆ ಮಾಡಲು ಗೋವಾ ಸರಕಾರ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ಹೊರಡಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಗೋವಾ ರಾಜ್ಯದಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಗೋವಾ ಸರಕಾರದಿಂದ ನೊಂದಾವಣೆ (ರಿಜಿಸ್ಟ್ರೇಶನ್) ಮಾಡಿ ಪ್ರಮಾಣಪತ್ರ ಪಡೆದಿರಬೇಕು. ಮೇಲೆ ಹೇಳಿದ ಎಲ್ಲಾ ನಿಯಮಗಳು ಮೂರು ಜಿಲ್ಲೆಗಳಿಗೆ ಸಮಾನವಾಗಿದ್ದರೂ ಕಾರವಾರದ ಕಡೆಯಿಂದ ಬರುವ ಸಣ್ಣ ಸಣ್ಣ ತಾಜಾ ಮೀನು ವ್ಯಾಪಾರಸ್ಥರು ತಮ್ಮ ಹೆಸರು, ಫೋನ್ ನಂಬ್ರ ಮತ್ತು ದಾಖಲೆಗಳನ್ನು ಪಟ್ಟಿ ಮಾಡಿ ಗೋವಾದ ಸಂಬಂಧಪಟ್ಟ ಇಲಾಖೆಗೆ ನೀಡಬೇಕು. ಪಟ್ಟಿಯಲ್ಲಿ ಹೆಸರಿದ್ದ ತಾಜಾ ಮೀನು ವ್ಯಾಪಾರಸ್ಥರಿಗೆ ಮಾಡಲು ಯಾವ ತೊಂದರೆ ಇಲ್ಲದಂತೆ ನೋಡಲಾಗುವುದು. ಮುಂದಿನ ಹತ್ತು-ಹನ್ನೆರಡು ದಿನಗಳೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಗೋವಾ ಸರಕಾರ ಭರವಸೆ ನೀಡಿದೆ.
ನಿಯೋಗದ ನೇತೃತ್ವವನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಹಿಸಿದ್ದರು. ನಿಯೋಗದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಂಗಳೂರು ನಗರ ಉತ್ತರ ಶಾಸಕ ಡಾ|ಭರತ್ ಶೆಟ್ಟಿ, ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ್, ಮೀನುಗಾರರ ಹಿರಿಯ ಮುಖಂಡ, ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರರ ಫೇಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಪರ್ಶಿಯನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಅಖಿಲ್ ಕರ್ನಾಟಕ ಕ್ರಿಯಾ ಸಮಿತಿಯ ಅಧ್ಯಕ್ಷ ಮನೋಹರ ಬೋಳುರು, ಮಾಜಿ ಅಧ್ಯಕ್ಷ ನವೀನ್ ಬಂಗೇರ, ಮಾಜಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಮಾಜಿ ಕಾರ್ಯದರ್ಶಿ ಅನಿಲ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಲ್ಪೆ ಮೀನುಗಾರರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲಿಯಾನ್, ಮುಖಂಡರಾದ ದಯಾನಂದ ಸುವರ್ಣ ಮಲ್ಪೆ, ಕರುಣಾಕರ ಸಾಲ್ಯಾನ್ ಮಲ್ಪೆ, ವಿನಯ ಕರ್ಕೇರ, ಇಬ್ರಾಹಿಂ ಬೆಂಗ್ರೆ, ವಿಠಲ ಕರ್ಕೇರ ಮಲ್ಪೆ, ರವಿರಾಜ್ ಮಲ್ಪೆ ನಿಯೋಗದಲ್ಲಿದ್ದರು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ .
Leave A Reply