ಕಾಂಕ್ರೀಟಿಕರಣದ ನಡುವೆ ಹೀಗೊಂದು ಹೊಸ ಡಸ್ಟ್ ಬಿನ್!!
ಇವತ್ತು ನಾನು ಈ ಜಾಗೃತ ಅಂಕಣದೊಂದಿಗೆ ಪೋಸ್ಟ್ ಮಾಡಿರುವ ಫೋಟೋಗಳನ್ನು ಸರಿಯಾಗಿ ನೋಡಿದರೆ ನಿಮಗೆ ನಾನು ಏನು ಹೇಳಲು ಹೊರಟಿದ್ದೇನೆ ಎನ್ನುವುದು ಅರ್ಥವಾಗುತ್ತದೆ. ಈ ಫೋಟೋ ನಾನು ತೆಗೆದದ್ದು ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಒಂದು ಪಾಶ್ವದಲ್ಲಿರುವ ಟೆಂಪಲ್ ಸ್ಕೇರ್ ಎನ್ನುವ ಕಾಂಪ್ಲೆಕ್ಸಿನ ಮೆಟ್ಟಿಲು ಮತ್ತು ಕಾಂಕ್ರೀಟ್ ರಸ್ತೆಗೆ ನಡುವೆ ಇರುವ ಜಾಗ. ಅಲ್ಲಿ ತುಂಬಿರುವ ಕಸ, ಕಡ್ಡಿ, ತ್ಯಾಜ್ಯ ನೋಡಿ. ಅದೇ ಕಟ್ಟಡದ ಎದುರಿಗೆ ಇರುವ ಶ್ರೀರಾಮ ಮಂದಿರದಿಂದ ಈ ರಸ್ತೆ ಹೊರಟು ಪುರಭವನದ ಎದುರಿನ ತನಕ ಅಗಲವಾಗಿ ಕಾಂಕ್ರೀಟಿಕರಣವಾಗುವ ಪ್ರಕ್ರಿಯೆ ನಡೆದಿದೆ. ಆದರೆ ಈ ಪ್ರಾಬ್ಲಂ ನೋಡಿ. ನೂತನ ಕಾಂಕ್ರೀಟ್ ರಸ್ತೆಯ ಒಂದು ಕಡೆ ಚರಂಡಿ ಮತ್ತು ಫುಟ್ ಪಾತ್ ನಿರ್ಮಾಣವಾಗಿದೆ. ಇನ್ನೊಂದು ಕಡೆ ಚರಂಡಿ, ಫುಟ್ ಪಾತ್ ನಿರ್ಮಾಣವಾಗಿಲ್ಲ. ಅದಕ್ಕೆ ಕಾರಣ ಟೆಂಪಲ್ ಸ್ಕೇರ್ ಕಟ್ಟಡಕ್ಕೆ ತಾಗಿಕೊಂಡಿರುವ ಒಂದು ಸಣ್ಣ ಬಂಗಾರದ ಅಂಗಡಿಯವರು ರಸ್ತೆ ಅಗಲವಾಗುವಾಗ ತಮ್ಮ ಅಂಗಡಿಯ ಜಾಗ ಒಂದಿಷ್ಟು ಹೋಗುತ್ತೆ ಎಂದು ರಾಜಕಾರಣಿಗಳಿಂದ ಒತ್ತಡ ತಂದು ಕೆಲಸ ನಿಲ್ಲಿಸಿರುವುದು.
ಆಂಟೋನಿಯವರು ಇತ್ತ ತಿರುಗಿಯೂ ನೋಡುವುದಿಲ್ಲ…
ಇಲ್ಲಿ ಕಟ್ಟಡದ ಮೆಟ್ಟಿಲು ಮತ್ತು ಕಾಂಕ್ರೀಟ್ ರಸ್ತೆಯ ನಡುವೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗಿದೆ. ಆದರೆ ಇಲ್ಲಿ ಜಾಗ ಹೀಗೆ ಬಿಟ್ಟಿರುವುದರಿಂದ ಜನ ಕಸ ತಂದು ಇಲ್ಲಿಗೆ ಹಾಕುತ್ತಾರೆ ಅಥವಾ ಸಹಜವಾಗಿ ತನ್ನಿಂದ ತಾನೆ ಇಲ್ಲಿ ರಸ್ತೆಯ ಕಸ ಬಂದು ಬೀಳುತ್ತಿದೆ. ನಮ್ಮ ಪಾಲಿಕೆಯಲ್ಲಿ ಗುತ್ತಿಗೆ ವಹಿಸಿಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ಸರಿಯಾಗಿ ಯಾವುದೇ ರಸ್ತೆಯನ್ನೇ ಗುಡಿಸುವುದಿಲ್ಲ. ಹಾಗಿರುವಾಗ ಇಂತಹ ಜಾಗದಲ್ಲಿ ಬಿದ್ದಿರುವ ಕಸ, ತ್ಯಾಜ್ಯವನ್ನು ಅವರು ತೆಗೆಯುತ್ತಾರೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಒಂದೂವರೆ ಅಡಿ ಅಗಲದ ಚರಂಡಿಯನ್ನು ಸ್ವಚ್ಚ ಮಾಡದ ಆಂಟೋನಿ ವೇಸ್ಟ್ ನವರು ಇಂತಹ ಜಾಗದಲ್ಲಿ ಇಣುಕಿಯೂ ನೋಡುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ಇಲ್ಲಿ ಇವತ್ತು ಇಷ್ಟಿರುವ ಕಸ ಬರಬರುತ್ತಾ ತುಂಬಿಕೊಳ್ಳುತ್ತದೆ. ಮಳೆಗಾಲದ ಸಮಯದಲ್ಲಿ ಈ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗಲು ಇದೇ ಕಾರಣ.
ಏಪ್ ಇದೆ, ಕಸನೂ ಇದೆ…
ಒಂದು ಕಡೆ ಮಂಗಳೂರು ಸ್ವಚ್ಚ ನಗರ ಆಗಬೇಕು ಮತ್ತು ನಾವು ಪ್ರಶಸ್ತಿ ಪಡೆದು ಮಿಂಚಬೇಕು ಎಂದು ಪಾಲಿಕೆಯ ಕಮೀಷನರ್ ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಯಲ್ಲಿ ಆಂಟೋನಿ ವೇಸ್ಟ್ ನವರು ಇವರ ಆಸೆಗೆ ತಣ್ಣೀರನ್ನು ಎರಚುತ್ತಿದ್ದಾರೆ. ಇದರಿಂದ ಏನಾಗುತ್ತಿದೆ ಎಂದರೆ ಮಂಗಳೂರು ಸ್ಚಚ್ಚತೆಯ ದೃಷ್ಟಿಯಲ್ಲಿ ಮುಂದಕ್ಕೆ ಹೋಗುವುದೇ ಇಲ್ಲ ಎನ್ನುವಂತಾಗಿದೆ. ಪಾಲಿಕೆಯವರು ಸ್ವಚ್ಚತೆಯ ಹೆಸರಿನಲ್ಲಿ ಡಸ್ಟ್ ಬಿನ್ ಗಳನ್ನು ಮಂಗಳೂರಿನಲ್ಲಿ ತೆಗೆಸಿದ್ದಕ್ಕೋ ಏನೋ ಈಗ ಕಸದ ರಾಶಿ ಇಂತಹ ಜಾಗದಲ್ಲಿ ಬೀಳುತ್ತಿದೆ. ಇದನ್ನೆಲ್ಲಾ ಸರಿ ಮಾಡಬೇಕಾದವರಿಗೆ ಇದೆಲ್ಲಾ ಅರಿವಿಗೆ ಬರುವುದಿಲ್ಲ. ಯಾಕೆಂದರೆ ಕಾರಿನಲ್ಲಿ ಹೋಗುವ ಪಾಲಿಕೆಯ ಮೇಯರ್ ಆಗಲಿ, ಅಧಿಕಾರಿಗಳಿಗಾಗಲಿ ಇದೆಲ್ಲಾ ಕಾಣುವುದಿಲ್ಲ. ಮಾತನಾಡಿದರೆ ಸ್ಚಚ್ಚ ಭಾರತ್ ಏಪ್ ಇದೆ ಎನ್ನುತ್ತಾರೆ. ಆದರೆ ಇಲ್ಲಿ ಬಿದ್ದಿರುವ ಕಸ ಯಾವ ಆಪ್ ಗೂ ಗೊತ್ತಾಗುವುದಿಲ್ಲ. ಇದು ಜನನಿಬಿಡ ರಸ್ತೆಯಾಗಿರುವುದರಿಂದ ಇಲ್ಲಿ ಆದಷ್ಟು ಬೇಗ ಫುಟ್ ಪಾತ್ ನಿರ್ಮಾಣವಾಗಲೇಬೇಕಿದೆ. ಆದರೆ ಜ್ಯುವೆಲ್ಲರಿ ಅಂಗಡಿಯವರ ಕಿರಿಕಿರಿಯಿಂದ ತೊಂದರೆಯಾಗಿದೆ. ಸದ್ಯ ಒಂದೂವರೆ ಲಕ್ಷ ಖರ್ಚು ಮಾಡಿ ಕಟ್ಟಿರುವ ತಡೆಗೋಡೆ ಇಲ್ಲಿ ವೇಸ್ಟ್. ಆದಷ್ಟು ಬೇಗ ಸಂಬಂಧಪಟ್ಟವರು ಇತ್ತ ಗಮನ ಕೊಡದಿದ್ದರೆ ಮುಂದಿನ ಮಳೆಗಾಲಕ್ಕೆ ಇಲ್ಲಿ ಕೃತಕ ಕೆರೆಯ ಉದ್ಘಾಟನೆಯನ್ನು ಜನಪ್ರತಿನಿಧಿಗಳು ಮಾಡಬೇಕು!
Leave A Reply