ಕೇಬಲ್ ಆಪರೇಟರ್ಸ್ ಕೂಡ ತುಳುನಾಡಿನವರು, ಅವರಿಗೆ ನಷ್ಟ ಮಾಡುವ ಉದ್ದೇಶ ಇಲ್ಲ!!
ನಾನು ಈ ವಾರ ಬರೆದಿದ್ದ “ಗ್ರಾಹಕರೇ ಎಚ್ಚರ” ಜಾಗೃತ ಅಂಕಣಕ್ಕೆ ರಾಜ್ಯದ ವಿವಿದೆಡೆಯಿಂದ ಪ್ರತಿಕ್ರಿಯೆ ಬಂದಿವೆ. ಕನ್ನಡ ಓದಬಲ್ಲ ಅನೇಕರು ನನ್ನ ಅಂಕಣವನ್ನು ಶೇರ್ ಮಾಡಿದ್ದಾರೆ. ಅಸಂಖ್ಯಾತ ಗ್ರೂಪ್ ಗಳಲ್ಲಿ ಲೆಕ್ಕವಿಲ್ಲದಷ್ಟು ಜನ ಆ ಅಂಕಣವನ್ನು ಕಾಪಿ, ಪೇಸ್ಟ್ ಮಾಡಿ ಪ್ರಚಾರ ಮಾಡಿದ್ದಾರೆ. ಬೀದರ್, ಗುಲ್ಬರ್ಗಾದಂತಹ ಪ್ರದೇಶದಿಂದ ಕರೆ ಮಾಡಿದ ಅನೇಕರು ಮೊದಲು ಸಹಜವಾಗಿ ನಂತರ ಅಲ್ಲಿನ ಮಣ್ಣಿನ ಗುಣದ ಭಾಷೆಯಲ್ಲಿ ಮಾತನಾಡಿದ್ದಾರೆ. ಅಂತಹ ಕರೆಗಳಲ್ಲಿ ಹೆಚ್ಚಿನವು ನಾನು ಮಾಹಿತಿ ವಿನಿಮಯ ಅಥವಾ ನನ್ನ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಲು ಮಾಡಿರುವ ಕರೆಗಳಾಗಿದ್ದವು ಎಂದೇ ಅಂದುಕೊಂಡಿದ್ದೇನೆ. ಒಟ್ಟಿನಲ್ಲಿ ಒಂದಿಷ್ಟು ಚಿಂತನೆಗೆ ಆ ಅಂಕಣ ಹಲವರನ್ನು ಬಡಿದೆಬ್ಬಿಸಿದೆ. ಹಲವಾರು ನಾಗರಿಕರು ಪ್ರೀತಿಯಿಂದ ಆ ಅಂಕಣದ ಬಗ್ಗೆ ತಮ್ಮ ತಮ್ಮಲ್ಲಿ ಮಾತನಾಡಿಕೊಂಡಿದ್ದಾರೆ. ಆ ಅಂಕಣ ಎಷ್ಟು ಸುದ್ದಿಯಾಯಿತು ಎಂದರೆ ಅದರ ನಂತರ ಮಂಗಳೂರಿನ ಒಂದಿಷ್ಟು ಕೇಬಲ್ ಟಿವಿ ಆಪರೇಟರ್ಸ್ ಗಳು ನನ್ನಲ್ಲಿ ಮಾತನಾಡಲು ಬಯಸಿದ್ದರು. ಆತ್ಮೀಯರೊಬ್ಬರಿಗೆ ಕರೆ ಮಾಡಿ ನನ್ನ ಜೊತೆ ಮಾತನಾಡಲು ಅವಕಾಶ ಕೇಳಿದ ಕಾರಣ ನಾನು ಒಪ್ಪಿ ಮಾತನಾಡಿದ್ದೇನೆ.
ಅವರ ದಾಖಲೆ ಅವರಿಗೆ ಸರಿ….
ಅವರು ಮೂರ್ನಾಕು ಜನ ಮಾತನಾಡಲು ನನ್ನ ಬಳಿ ಬಂದಿದ್ದರು. ಅವರ ಬಳಿ ಒಂದಿಷ್ಟು ದಾಖಲೆಗಳಿವೆ. ಅದಕ್ಕೆ ಸರಿಯಾಗಿ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ನಾನು ನನ್ನ ಬಳಿ ಇರುವ ದಾಖಲೆಗಳೊಂದಿಗೆ ಅಚಲವಾಗಿದ್ದೇನೆ. ಆ ಪ್ರಕಾರ ಮೊನ್ನೆ ಬರೆದ ಅಂಕಣಕ್ಕೆ ಈಗಲೂ ಬದ್ಧವಾಗಿದ್ದೇನೆ. ಆದರೆ ಅವರು ತಮ್ಮ ಬಳಿ ಟ್ರಾಯ್ ಹೇಳಿರುವಂತಹ ಅಂಶಗಳನ್ನು ಹಿಡಿದುಕೊಂಡು ತಮ್ಮದೇ ಸರಿ ಎಂದು ಹೇಳುತ್ತೀದ್ದಾರೆ. ಇಲ್ಲಿ ಹಲವು ಬಾರಿ ಏನು ಆಗುತ್ತದೆ ಎಂದರೆ ಇದು ಸರಕಾರದ ವಿಚಾರ ಆಗಿರುವುದರಿಂದ ಇಲ್ಲಿ ಕಾಲಕಾಲಕ್ಕೆ ಟ್ರಾಯ್ ತನ್ನ ನಿಲುವುಗಳಲ್ಲಿ ಬದಲಾವಣೆ ಅಥವಾ ಪರಿಷ್ಕರಣೆ ಮಾಡುವಂತಹ ಸಾಧ್ಯತೆ ಇರುತ್ತದೆ. ನಾನು ನನಗೆ ಸಿಕ್ಕಿರುವ ಮಾಹಿತಿ ಯಾವ ಆಧಾರದಲ್ಲಿ ಎಂದು ಅವರಿಗೆ ತಿಳಿಸಿದ್ದೇನೆ. ಅದನ್ನು ಹಿಂದಿನ ಅಂಕಣದಲ್ಲಿ ನಿಮಗೂ ತಿಳಿಸಿದ್ದೇನೆ. ಆ ಬಗ್ಗೆ ಟ್ರಾಯ್ ಅವರಲ್ಲಿ ಮಾತನಾಡಿ ಎಂದು ಅವರಿಗೆ ಹೇಳಿದ್ದೇನೆ. ಟ್ರಾಯ್ ಅವರಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ. ನಾನು ಇವತ್ತು ನಮ್ಮ ನಾಗರಿಕರಿಗೆ ಕೆಲವು ಫೋನ್ ನಂಬ್ರಗಳನ್ನು ಕೊಡುತ್ತಿದ್ದೇನೆ. ಅದಕ್ಕೆ ಕರೆ ಮಾಡಿ ಕೇಬಲ ಆಪರೇಟರ್ಸ್ ಅವರಿಗೆ ನೀವು ಎಷ್ಟು ಹಣ ಕೊಡಬೇಕು ಎನ್ನುವ ನಿಮ್ಮ ಗೊಂದಲವನ್ನು ನೀವು ಪರಿಹರಿಸಬಹುದು. ಇನ್ನು ಕೇಬಲ್ ಆಪರೇಟರ್ಸ್ ತಮ್ಮ ಬಳಿ ಇರುವ ದಾಖಲೆಯಂತೆ ಹಣ ವಸೂಲಿ ಮಾಡಲು ಬದ್ಧರಾಗಿದ್ದರೆ ಅವರು ಕೂಡ ಒಂದು ಕೆಲಸ ಮಾಡಬೇಕು. ಏನೆಂದರೆ ಟ್ರಾಯ್ ನ ಯಾವ ನಿಯಮದ ಅಡಿಯಲ್ಲಿ ಇಷ್ಟು ಹಣವನ್ನು ಅವರು ವಸೂಲಿ ಮಾಡಲು ಬದ್ಧರಾಗಿದ್ದಾರೆ ಎನ್ನುವುದನ್ನು ಅವರು ತಮ್ಮ ವಾಹಿನಿಯಲ್ಲಿ ಡಿಸ್ ಪ್ಲೇ ಮಾಡಲಿ. ತಮ್ಮ ಕಚೇರಿಯಲ್ಲಿ ಬೋರ್ಡ್ ಹಾಕಿ ಸಾರ್ವಜನಿಕರಿಗೆ ತಿಳಿಸಲಿ. ಹಣ ವಸೂಲಿ ಮಾಡಲು ಬರುವ ಹುಡುಗರ ಕೈಯಲ್ಲಿ ಕರಪತ್ರ ಮಾಡಿ ಅದರಲ್ಲಿ ಯಾವ ನಿಯಮಗಳ ಅಡಿಯಲ್ಲಿ ತಾವು ಇಂತಿಷ್ಟು ಹಣ ವಸೂಲಿ ಮಾಡುತ್ತೇವೆ ಎಂದು ತಿಳಿಸಲಿ. ಅದನ್ನು ಓದಿದ ಜನರಿಗೂ ಸಮಾಧಾನ ಆದರೆ ಆಗಬಹುದು. ಅದು ಬಿಟ್ಟು ಸುಮ್ಮನೆ ತಮಗೆ ಅಷ್ಟು ಖರ್ಚು ಇದೆ, ಇಷ್ಟು ಸಂಬಳ, ನಿರ್ವಹಣೆ ಎಂದು ಬರುತ್ತೆ. ಅದಕ್ಕೆಲ್ಲ ಯಾರು ಹಣ ಕೊಡುವುದು ಎಂದು ಹೇಳುತ್ತಾ ಬಂದರೆ ಅದು ಸರಿಯಾದ ಉತ್ತರ ಅಲ್ಲ.
ಯಾರಿಗೂ ನಷ್ಟ ಮಾಡುವ ಉದ್ದೇಶ ಇಲ್ಲ…
ನಾನು ಮೊನ್ನೆ ತುಳುನಾಡು ನ್ಯೂಸ್ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ನಲ್ಲಿ ಕೂಡ ಇದನ್ನೇ ಹೇಳಿದ್ದೇನೆ. ಕೇಬಲ್ ಆಪರೇಟರ್ಸ್ ನವರಿಗೆ ನಷ್ಟವಾಗಬೇಕು ಎನ್ನುವುದು ನನ್ನ ಉದ್ದೇಶ ಅಲ್ಲ. ಅವರು ಕೂಡ ತುಳುನಾಡಿನವರು. ಅವರು ಕೂಡ ಬದುಕಬೇಕು. ಅವರು ನಷ್ಟ ಮಾಡಿ ನಮಗೆ ಸೇವೆ ಮಾಡಬೇಕು ಎಂದು ಹೇಳಲು ಆಗುತ್ತಾ? ಹಾಗಂತ ಕೇಬಲ್ ಟಿವಿ ಬಳಕೆದಾರರು ಕೂಡ ನಮ್ಮವರೇ. ಅವರು ಯಾರದ್ದೋ ತಿಜೋರಿ ತುಂಬಿಸಲು ತಮ್ಮ ಜೇಬು ಹಗುರ ಮಾಡಿಕೊಳ್ಳಬೇಕಂತಿಲ್ಲ. ಇದರ ನಡುವೆ ಒಂದು ತೀರ್ಮಾನ ಆಗಬೇಕು. ಆ ಕಾರಣಕ್ಕಾಗಿಯೂ ನೀವು ಈ ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ನಿರ್ಧಾರ ನೀವು ತೆಗೆದುಕೊಳ್ಳಿ.
ಎಸ್ ಕೆ ಗುಪ್ತ ಸೆಕ್ರೆಟರಿ , ಟ್ರಾಯ್ 09013139400
ಎಸ್ ಕೆ ಸಿಂಘಲ್, ಪಾಲಿಸಿ ವಿಶ್ಲೇಷಕರು 01123221509, 9013131144
ಅರವಿಂದ ಕುಮಾರ್, ಸಲಹೆಗಾರರು, ಬಿಅಂಡ್ ಸಿಎಸ್ 01123220209, 9810428700
ಅನಿಲ್ ಕುಮಾರ್ ಭಾರದ್ವಾಜ್, ಸಲಹೆಗಾರರು, ಬಿಅಂಡ್ ಸಿಎಸ್ 01123237922
Leave A Reply