ಶಕ್ತಿನಗರದಲ್ಲಿ ಕಟ್ಟಲಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಜಾತಕ ಇಲ್ಲಿ ದಾಖಲೆಯೊಂದಿಗೆ ಇಟ್ಟಿದ್ದೇನೆ!!
ಮಂಗಳೂರು ನಗರ ದಕ್ಷಿಣದ ಮಾಜಿ ಶಾಸಕರು ಬುಧವಾರ ಸುದ್ದಿಗೋಷ್ಟಿ ಮಾಡಿದ್ದಾರೆ. ಶಕ್ತಿನಗರದ ಜಿಪ್ಲಸ್ ತ್ರೀ ವಸತಿ ಯೋಜನೆಯ ಬಗ್ಗೆ ವಿಷಯ ಎತ್ತಿದ್ದಾರೆ. ಅದನ್ನು ಪೂರ್ಣಗೊಳಿಸಲಾಗದಿದ್ದರೆ ರಾಜೀನಾಮೆ ನೀಡಿ ಎಂದು ಹಾಲಿ ಶಾಸಕ ಡಿ ವೇದವ್ಯಾಸ ಕಾಮತ್ ಅವರಿಗೆ ಸವಾಲು ಎಸೆದಿದ್ದಾರೆ. ಅವರು ಸುದ್ದಿಗೋಷ್ಟಿ ಮಾಡಿ ಆ ವಿಷಯ ಪ್ರಸ್ತಾಪಿಸಿರುವುದರಿಂದ ನಾನು ಕೂಡ ಅನಿವಾರ್ಯವಾಗಿ ದಾಖಲೆಗಳನ್ನು ಹುಡುಕಬೇಕಾಯಿತು. ಸೂಕ್ತ ದಾಖಲೆಗಳನ್ನು ಹಿಡಿದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ. ಅದನ್ನು ಇವತ್ತಿನ ಜಾಗೃತ ಅಂಕಣದಲ್ಲಿ ಪೋಸ್ಟ್ ಮಾಡಿದ್ದೇನೆ. ಈ ದಾಖಲೆ ನೋಡಿದರೆ ಜನರಿಗೆ ಮನದಟ್ಟಾಗುತ್ತದೆ. ಯಾರಿಗೆ ಚೀಟಿ ಕೊಟ್ಟು ಜನ ಮನೆಗೆ ಕಳುಹಿಸಿದ್ದಾರೆ ಮತ್ತು ಯಾರು ರಾಜೀನಾಮೆ ಕೊಡಬೇಕು ಎನ್ನುವುದು. ಇಲ್ಲಿ ಮೂರು ಆಯಾಮಗಳಲ್ಲಿ ವಿಷಯವನ್ನು ನನ್ನ ಓದುಗರಿಗೆ ಮನದಷ್ಟು ಮಾಡಲು ನಾನು ಬಯಸುತ್ತೇನೆ. ಮೊದಲನೇಯದಾಗಿ ರಾಜಕೀಯ ಉದ್ದೇಶ.
ಪ್ರಕ್ರಿಯೆ ಏನಿರುತ್ತದೆ ಎಂದರೆ…
ಆವತ್ತು ವಿಧಾನಸಭೆಗೆ ಚುನಾವಣೆಗೆ ಕೆಲವೇ ದಿನಗಳು ಇದ್ದಾಗ ಆಗಿನ ಶಾಸಕರು ಏನು ಮಾಡಿದ್ದಾರೆ ಎಂದರೆ ಕಾಂಗ್ರೆಸ್ಸಿನ ಹೈಕಮಾಂಡ್ ಸದಸ್ಯರಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರನ್ನು ಕರೆಸಿ ಅವರ ಕೈಯಲ್ಲಿ ಶಕ್ತಿನಗರದ ವಸತಿ ಸಮುಚ್ಚಯಕ್ಕೆ ಕುಲಶೇಖರದಲ್ಲಿ ಶಿಲಾನ್ಯಾಸ ಮಾಡಿದ್ದರು. ಒಂದು ವೇಳೆ ಶಕ್ತಿನಗರದಲ್ಲಿ ಕಟ್ಟಡ ಕಟ್ಟುವುದಿದ್ದರೆ ಅಲ್ಲಿಯೇ ಭೂಮಿಪೂಜೆ ಮಾಡಬಹುದಿತ್ತಲ್ಲ. ಆದರೆ ಇವರು ಮಾಡಿಲ್ಲ. ಯಾಕೆಂದರೆ ಇವರಿಗೆ ಮುಖ್ಯವಾಗಿದ್ದದ್ದು ಪಬ್ಲಿಸಿಟಿ ವಿನ: ಯೋಜನೆ ಅನುಷ್ಟಾನಕ್ಕೆ ಬರಬೇಕು ಎಂದಲ್ಲ. ಎರಡನೇಯದಾಗಿ ಆಗಿನ ಶಾಸಕರು ಜನರನ್ನು ಹೇಗೆ ಮಂಗ ಮಾಡಲು ಯತ್ನಿಸಿದ್ದರು ಎನ್ನುವುದನ್ನು ಕೂಡ ನೋಡಬೇಕು. ಯಾವುದೇ ಒಂದು ಭೂಮಿಯ ಹಕ್ಕುಪತ್ರ ನೀಡುವಾಗ ಏನು ಪ್ರಕ್ರಿಯೆ ಇರುತ್ತದೆ ಎಂದರೆ ಮೊದಲು ಜಾಗವನ್ನು ನೀಡಿ ನಂತರ ಹಕ್ಕುಪತ್ರ ಹಸ್ತಾಂತರಿಸಲಾಗುತ್ತದೆ. ಅದರ ಮೊದಲು ಜಾಗವನ್ನು ನಿಗದಿಗೊಳಿಸಿ ಅದರ ಅಳತೆ ಮಾಡಿ, ಸ್ಕೆಚ್ ತಯಾರಿಸಿ, ಯಾವ ಸೈಟ್ ಯಾರಿಗೆ ಕೊಡಬೇಕು ಎಂದು ಅಂಕಿ ಸಂಖ್ಯೆಯನ್ನು ನಮೂದಿಸಿ, ಸೈಟ್ ನಂಬ್ರ ಹಾಕಿ ಕೊಡಲಾಗುತ್ತದೆ. ಹಾಗೆ ವಸತಿ ಸಮುಚ್ಚಯ ನಿರ್ಮಾಣವಾದ ನಂತರ ಫಲಾನುಭವಿಗಳಿಗೆ ಸರ್ವೆ ನಂಬ್ರ, ಮೊದಲ ಮಹಡಿ, ಮನೆ ನಂಬ್ರ ಎಲ್ಲವನ್ನು ನಮೂದಿಸಿ ಹಕ್ಕುಪತ್ರ ನೀಡಲಾಗುತ್ತದೆ. ಆದರೆ ಆಗಿನ ಶಾಸಕರಿಗೆ ಅದೆಲ್ಲಾ ಬೇಕಾಗಿರಲೇ ಇಲ್ಲ. ಅವರಿಗೆ ಅರ್ಜೆಂಟಾಗಿ ಮಾಧ್ಯಮಗಳಿಗೆ ಫೋಟೋ ಕೊಟ್ಟು ಪ್ರಚಾರ ಪಡೆಯಬೇಕಾಗಿತ್ತು. ಅದಕ್ಕಾಗಿ ಕಾಟಾಚಾರಕ್ಕೆ ಶಿಲಾನ್ಯಾಸ ಮಾಡಿದ್ರು. ಇದೆಲ್ಲಾ ಒಂದು ಕಡೆ. ಈಗ ನಿಜವಾದ ಕಥೆಗೆ ಬರೋಣ. ಹೊಸ ಶಾಸಕರು ಆಯ್ಕೆಯಾಗಿ ಈಗ ಒಂಭತ್ತು ತಿಂಗಳು ಆಗಿವೆ. ಮನೆ ನಿರ್ಮಾಣ ಯೋಜನೆಯನ್ನು ಸಮರ್ಪಕವಾಗಿ ಮಾಡಿಲ್ಲ, ಅವರಿಗೆ ಯೋಜನೆ ಪೂರ್ಣ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ, ತಾನು ಮಾಡುತ್ತೇನೆ ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ. ಅವರು ಅಷ್ಟು ಹೇಳಿದ ಮೇಲೆ ಶಕ್ತಿನಗರದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಜಾತಕವನ್ನು ಬಿಚ್ಚದಿದ್ದರೆ ಹೇಗೆ?
ವಿಷಯ ಏನೆಂದರೆ…
ಈ ಯೋಜನೆಯನ್ನು ಜಾರಿಗೆ ತರುವ ಗುತ್ತಿಗೆಯನ್ನು ಕೊಟ್ಟಿರುವುದು ಕ್ರಿಯೇಟಿವ್ ಇಂಜಿನಿಯರ್ಸ್ ಅವರಿಗೆ. ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ ಇವರ ಕಚೇರಿ ಇದೆ. ನನ್ನ ಬಳಿ ಈ ಸಂಸ್ಥೆಯವರು ಬರೆದ ಪತ್ರ ಇದೆ. ಆ ದಾಖಲೆಯ ಸಾರಾಂಶವನ್ನು ನಿಮಗೆ ಹೇಳುತ್ತಿದ್ದೇನೆ. ಅದರಲ್ಲಿ ಆ ಸಂಸ್ಥೆಯವರು ಸ್ಪಷ್ಟವಾಗಿ ಏನು ಬರೆದಿದ್ದಾರೆ ಎಂದರೆ ನಾವು ಈ ಕಾಮಗಾರಿಯನ್ನು ಸ್ವೀಕರಿಸಿದ ಪ್ರಕಾರ 23/5/2018 ರಂದು ನಮ್ಮ ಬ್ಯಾಂಕ್ ಗ್ಯಾರಂಟಿಯನ್ನು ಕೊಟ್ಟಿದ್ದೇವೆ. 5/9/2018 ರಂದು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ 3,700 ರೂಪಾಯಿ ಸ್ಟ್ಯಾಂಪ್ ಪೇಪರ್ ನಲ್ಲಿ ಒಪ್ಪಂದ ಕೂಡ ಮಾಡಿದ್ದೇವೆ. ಆದರೆ ಇಲ್ಲಿಯ ತನಕ ನಮಗೆ ಕೆಲಸ ಆರಂಭಿಸಲು ಮಹಾನಗರ ಪಾಲಿಕೆ ಭೂಮಿಯನ್ನು ಹಸ್ತಾಂತರಿಸಿಲ್ಲ ಎಂದು ಹೇಳಿದೆ. ಹಾಗಾದರೆ ಯಾರ ತಪ್ಪು. ಕ್ರಿಯೇಟಿವ್ ಇಂಜಿನಿಯರ್ಸ್ ನವರಿಗೆ ಭೂಮಿ ಪಾಲಿಕೆ ಕೊಡದಿದ್ದರೆ ಅವರು ಕಟ್ಟುವುದಾದರೆ ಹೇಗೆ? ಆ ಸಂಸ್ಥೆಯವರು ಪಾಲಿಕೆಗೆ ಬರೆದ ಪತ್ರವನ್ನು ಪಾಲಿಕೆಯವರು ಕುರ್ಚಿ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಂಡಿದ್ದಾರೆ. 930 ಮನೆಗಳನ್ನು ಹೊಂದಿರುವ ಐದು ಕಟ್ಟಡಗಳನ್ನು ಜಿಫ್ಲಸ್ ತ್ರೀ ಮಾದರಿಯಲ್ಲಿ ಕಟ್ಟಲು ನಾವು ಆವತ್ತು ಒಪ್ಪಿಕೊಂಡ ರೇಟ್ ಬೇರೆ ಮತ್ತು ಇವತ್ತಿಗೂ ಭೂಮಿ ಹಸ್ತಾಂತರಿಸದೇ ಇದ್ದ ಕಾರಣ ನಮಗೆ ಆವತ್ತು ಒಪ್ಪಿಕೊಂಡ ಬೆಲೆಗೆ ಈಗ ಕಟ್ಟಲು ಆಗುವುದಿಲ್ಲ ಎಂದು ಕ್ರಿಯೇಟಿವ್ ಇಂಜಿನಿಯರ್ಸ್ ಹೇಳುತ್ತಿದ್ದಾರೆ. ಹಾಗಾದರೆ ಯಾರ ತಪ್ಪು ಮಾಜಿ ಶಾಸಕರೇ? ಅಷ್ಟಕ್ಕೂ ಪಾಲಿಕೆಯಲ್ಲಿ ಆಡಳಿತದಲ್ಲಿರುವುದು ಯಾವ ಪಕ್ಷ? ನಿಮ್ಮದೇ ಕಾಂಗ್ರೆಸ್ ಪಕ್ಷ ತಾನೇ? ನಿಮ್ಮ ಪಕ್ಷದ ತಪ್ಪನ್ನು ಮುಚ್ಚಿ ಹಾಕಿ ಅದೇ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಮಟಮಟ ಮಧ್ಯಾಹ್ನ ಸುದ್ದಿಗೋಷ್ಟಿ ಮಾಡಿ ಸತ್ಯದ ಕೊಲೆ ಮಾಡಿಬಿಟ್ಟಿರಲ್ಲ. ನಮಗೇನೂ ದಾಖಲೆ ಸಿಗಲ್ಲ ಎಂದು ಅಂದುಕೊಂಡ್ರಾ ಅಥವಾ ತಾವು ಏನು ಹೇಳಿದ್ರೂ ಜನ ನಂಬುತ್ತಾರೆ ಎಂದು ಅಂದುಕೊಂಡ್ರಾ. ಒಟ್ಟಿನಲ್ಲಿ ನಾನು ಹೇಳುವುದಿಷ್ಟೇ. ಬಡವರ ಹೆಸರಿನಲ್ಲಿ ರಾಜಕೀಯ ಬೇಡಾ. ಮಾಜಿ ಶಾಸಕರು ಮತ್ತು ಹಾಲಿ ಶಾಸಕರು ರಾಜಕೀಯ ದೂರದೃಷ್ಟಿ ಬಿಟ್ಟು ಜನರಿಗೆ ಮನೆ ಕಟ್ಟಿ ಕೊಡಲಿ. ಅಷ್ಟೇ!
Leave A Reply