• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಯಕ್ಷಗಾನದ ಕೊಂಡಿ ಕಳಚಿದ ಹುಡಗೋಡು ಚಂದ್ರಹಾಸ!

Tulunadu News Posted On March 12, 2019
0


0
Shares
  • Share On Facebook
  • Tweet It

” ಥೂ , ನಿಮ್ಮ ಮುಖಕ್ಕೆ ಬೆಂಕಿ ಹಾಕಲಿಕ್ಕೆ . ನರ ಸತ್ತವರೇ , ಇದು ನಿಮ್ಮ ಮುಖವಾ ? ಮುಸುಡು ಇದು ಮುಸುಡು . ಮೀಸೆ ಬಿಟ್ಟದ್ದೋ , ಇಟ್ಟದ್ದೋ ? ಇಟ್ಟದ್ದಾದರೆ ಇಲ್ಲೇ ಬಿಸಾಕು . ಹುಟ್ಟಿದ್ದಾದರೆ ಒಳಗೆ ಹೋಗಿ ವ್ಯವಸ್ಥೆ ಮಾಡು .ನರಮನುಷ್ಯರೋ ನೀವು ? ನಿಮ್ಮ ಜನ್ಮದಲ್ಲಿ ನೀವು ಉದ್ಧಾರವಾಗುವುದಿಲ್ಲ . ಭೀಷ್ಮಾ …”

ಇದು ನಿನ್ನೆ ರಂಗಸ್ಥಳದಲ್ಲೇ ಕುಸಿದು ನಿಧನರಾದ ಹುಡಗೋಡು ಚಂದ್ರಹಾಸರ ಸಾಲ್ವ ಪಾತ್ರದ ಕೊನೆಯ ಮಾತು . ” ಅಭಿನವ ಸಾಲ್ವ ” ಎಂದೇ ಹೆಸರಾಗಿದ್ದ ಹುಡಗೋಡುರವರ ಜೀವಮಾನದ ಕೊನೆಯ ಪಾತ್ರ ಸಾಲ್ವನೇ ಆಗಿದ್ದುದು ವಿಪರ್ಯಾಸ .ಸ್ಪಷ್ಟ ಮಾತುಗಾರಿಕೆ , ತನ್ನದೇ ಶೈಲಿಯ ನಾಟ್ಯ , ರಸಗಳನ್ನು ಲಕ್ಷಿಸಿ ನೀಡುವ ಭಾವಪೂರ್ಣ ಅಭಿನಯ – ಈ ಎಲ್ಲಾ ಮೇಳೈಸಿದ ಹುಡಗೋಡುರವರು ಬಡಗು ತಿಟ್ಟಿನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದ ಶ್ರೇಷ್ಠ ಕಲಾವಿದರಾಗಿದ್ದರು . ಕಾಲನ ಕರೆಗೆ ಓಗೊಟ್ಟು ನಿನ್ನೆ ರಂಗಸ್ಥಳದಲ್ಲೇ ತನ್ನ ಜೀವನ ಯಾತ್ರೆ ಮುಗಿಸಿದಾಗ ಹುಡುಗೋಡುರವರಿಗೆ ಪ್ರಾಯ ಕೇವಲ 52 ವರ್ಷ ಮಾತ್ರವಾಗಿತ್ತು . ರಂಗಸ್ಥಳದಲ್ಲೇ ನಿಧನರಾಗುವುದು ಕಲಾವಿದರ ಪಾಲಿಗೆ ಮಹಾನವಮಿ , ಯುದ್ಧರಂಗದಲ್ಲಿ ಹುತಾತ್ಮರಾದ ಯೋಧರಿಗೆ ಸಿಗುವ ಸ್ವರ್ಗಪ್ರಾಪ್ತಿ , ಕಲಾಜೀವನದ ಸಾರ್ಥಕತೆ – ಇವೆಲ್ಲವೂ ಹೌದಾದರೂ ಹುಡುಗೋಡರದ್ದು ಸಾಯುವ ವಯಸ್ಸಲ್ಲ . ಇದೊಂದು ಯಕ್ಷರಂಗಕ್ಕೆ ದೊಡ್ಡ ನಷ್ಟ .

ರಂಗಸ್ಥಳದಲ್ಲೇ ನಿಧನರಾದವರು ಅನೇಕ ಕಲಾವಿದರಿದ್ದಾರೆ . ಶಿರಿಯಾರ ಮಂಜು ನಾಯ್ಕ , ದಾಮೋದರ ಮಂಡೆಚ್ಚ , ಅರುವ ನಾರಾಯಣ ಶೆಟ್ಟಿ , ಕೆರಮನೆ ಶಂಭು ಹೆಗ್ಡೆ ಹಾಗೂ ಇತ್ತೀಚೆಗೆ ಗೇರುಕಟ್ಟೆ ಗಂಗಯ್ಯ ಶೆಟ್ಟರೂ ರಂಗಸ್ಥಳದಲ್ಲೇ ನಿಧನರಾದವರು .( ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೌಕಿ ಪೂಜೆಯ ಸ್ವಲ್ಪ ಮೊದಲು ನಿಧನರಾಗಿದ್ದರು . ) ಆದರೆ , ಇವರೆಲ್ಲರೂ 60 ಮೇಲಿನ ವಯಸ್ಸಿನವರು .ಆದರೆ , ಹುಡುಗೋಡುರವರು ಇವರನ್ನು ಹೋಲಿಸಿದಾಗ ತುಂಬಾ ಕಿರಿಯರು .ತಮ್ಮ 18 ನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶಿಸಿದ ಹುಡಗೋಡು ಬಚ್ಚಗಾರು , ಮೂಲ್ಕಿ , ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ ಸುಮಾರು 28 ವರ್ಷಗಳ ತಿರುಗಾಟ ಮಾಡಿದ್ದಾರೆ . ಹುಡುಗೋಡುರವರು ಕೊನೆಯ ಪೂರ್ಣ ಪ್ರಮಾಣದ ಕಲಾವಿದರಾಗಿ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಿದ್ದರು.
2013 ರಲ್ಲಿ ನಾನೊಮ್ಮೆ ಸಾಲಿಗ್ರಾಮ ಮೇಳದ ಚೌಕಿಯಲ್ಲಿ ಭೇಟಿಯಾದಾಗ ” ಕುಡ್ವರೇ ,ನಾನು ಮೇಳದ ತಿರುಗಾಟಕ್ಕೆ ವಿದಾಯ ಹೇಳಲಿದ್ದೇನೆ , ನಾನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ” ಎಂದಾಗ ” ನಿಮ್ಮಂಥಹ ಕಲಾವಿದರು ಯಕ್ಷಗಾನಕ್ಕೆ ಬೇಕು ಚಂದ್ರಹಾಸರೇ . ನಿಮ್ಮ ನಿರ್ಧಾರ ಪುನರ್ ಪರಿಶೀಲಿಸಿ ” ಎಂದಾಗ ನಸುನಕ್ಕು ” ಯಕ್ಷಗಾನ ಮೇಳದ ತಿರುಗಾಟ ಮಾತ್ರ ನಿಲ್ಲಿಸುವುದು ಕುಡ್ವರೇ . ಯಕ್ಷಗಾನ ಖಂಡಿತಾ ಬಿಡುವುದಿಲ್ಲ . ಅದು ನನ್ನ ಆರನೇ ಪ್ರಾಣ . ಅತಿಥಿಯಾಗಿ ಭಾಗವಹಿಸುತ್ತೇನೆ .” ಎಂದಿದ್ದರು .ನಂತರ ಅವರು ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆದ್ದು , ಪ್ರಸ್ತುತ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ , ರಾಜಕೀಯ ಕ್ಷೇತ್ರದಲ್ಲಿ ಜನಾನುರಾಗಿಯಾಗಿ ಬೆಳೆದಿದ್ದರು .

ನಿನ್ನೆ ಜಲವಳ್ಳಿ ಮೇಳದವರ ಪ್ರದರ್ಶನ ಬೈಂದೂರು ಸಮೀಪದ ಜೋಗಿಬೆಟ್ಟು ಎಂಬಲ್ಲಿ . ಅತಿಥಿಯಾಗಿ ಹುಡಗೋಡುರವರಿದ್ದರು ‌. ” ಭಿಷ್ಮ ವಿಜಯ ” ಪ್ರಸಂಗದಲ್ಲಿ ಸಾಲ್ವನ ಪಾತ್ರ ಮಾಡಿದ್ದರು .ಬಳ್ಕೂರು ಕೃಷ್ಣಯಾಜಿಯವರು ಭೀಷ್ಮ , ನೀಲ್ಕೋಡುರವರು ಅಂಬೆಯ ಪಾತ್ರದಲ್ಲಿದ್ದರು ‌. ಹುಡಗೋಡುರವರಿಗೆ ಸಾಲ್ವ ಅಪಾರ ಹೆಸರು ತಂದ ಪಾತ್ರ . ಸಾಲ್ವನ ಮಾನಸಿಕ ತುಮುಲ , ಭೀಷ್ಮನ ಮೇಲಿನ ದ್ವೇಷವು ಅಂಬೆಯ ಮೇಲೆ ಕಾರಣೀಭೂತವಾಗುವುದನ್ನು ಚೆನ್ನಾಗಿ ಪ್ರಸ್ತುತಿ ಪಡಿಸುತ್ತಿದ್ದರು . ಈ ಕಾರಣಕ್ಕಾಗಿಯೇ ಅಭಿಮಾನಿ ವಲಯದಲ್ಲಿ ” ಅಭಿನವ ಸಾಲ್ವ ” ಎಂಬ ಹೆಸರನ್ನೂ ಪಡೆದಿದ್ದರು ‌.ರಾತ್ರಿ ಸುಮಾರು 11.30 ರ ಸಮಯ . ಭೀಷ್ಮಾಚಾರ್ಯ ” ಏರಿರಿ ಎನ್ನಯ ರಥವ ” ಎಂದು ಹೇಳಿದಾಗ ಕಾಶೀ ರಾಜಕುಮಾರಿಯರಾದ ಅಂಬೆ , ಅಂಬಿಕೆ ,ಅಂಬಾಲಿಕೆಯರು ರಥವೇರಿಯಾಗಿತ್ತು . ಆಗ ಸಾಲ್ವನು ಸೆಟೆದು ನಿಂತು ಪ್ರತಿಭಟಿಸುವ ಸಂದರ್ಭ . ನೆರೆದ ಅರಸುಮಕ್ಕಳನ್ನು ಹೀಗಳೆಯುವ ಸಂದರ್ಭದಲ್ಲಿ ಮೇಲಿನ ಸಂಭಾಷಣೆ ಮಾಡಿದ್ದರು . ” ಭೀಷ್ಮಾ ” ಎಂದು ತಮ್ಮ ಜೀವನದ ಕೊನೆಯ ಶಬ್ದ ಉಚ್ಛರಿಸಿದಾಗ , ಭಾಗವತಿಕೆಯಲ್ಲಿದ್ದ ಹೊಸಂಗಡಿ ರವೀಂದ್ರ ಶೆಟ್ಟರು ಮುಂದಿನ ಪದ್ಯ ” ಧುರದಿ ಮಾರಾಂತು ನೀವ್ ” ಪದ್ಯ ಎತ್ತುತ್ತಿದ್ದಂತೆ ಹುಡಗೋಡುರವರು ರಂಗಸ್ಥಳದಲ್ಲೇ ಕುಸಿದು ಬಿದ್ದರು . ಕೂಡಲೇ ಸಹ ಕಲಾವಿದರು , ಪ್ರೇಕ್ಷಕರು ಹಾಗೂ ಕಾರ್ಯಕ್ರಮಕ್ಕೆ ಬಂದಿದ್ದ ಅವರ ಪುತ್ರ ಪ್ರದೀಪ್ ಹುಡಗೋಡು ಧಾವಿಸಿ ಬಂದು ಬೈಂದೂರಿನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ನಿಧನ ಹೊಂದಿದರು . ಬಹುಷಃ ಹೃದಯಾಘಾತದಿಂದ ನಿಧನರಾಗಿದ್ದಿರಬೇಕು ‌.

ಹುಡಗೋಡುರವರಿಗೆ ಈ ಮೊದಲು ಹೃದಯೀ ಸಂಬಂಧೀ ಕಾಯಿಲೆ ಇರಲಿಲ್ಲದ ಕಾರಣ ತೀವ್ರತಮವಾದ ಹೃದಯಾಘಾತವಾಗಿರಬೇಕೆಂದು ಊಹಿಸಲಾಗಿದೆ . ಸರಳ , ಸಜ್ಜನಿಕೆ ಸ್ವಭಾವದ ಹುಡುಗೋಡುರವರು ಎದುರು ಪಾತ್ರಗಳಲ್ಲೇ , ಅಂದರೆ ಖಳ ಪಾತ್ರಗಳಲ್ಲೇ ಮಿಂಚಿದವರು . ಸಾಲ್ವ ,ದುಷ್ಟಬುದ್ದಿ , ಕೌರವ , ಕಾರ್ತ್ಯವೀರ್ಯ , ಶನೀಶ್ವರ , ಕೀಚಕ , ರಾವಣ , ಮಾಗಧ ಮುಂತಾದ ಪಾತ್ರಗಳ ಪ್ರಸ್ತುತಿಯಲ್ಲಿ ಪ್ರಸಿದ್ಧರಾಗಿದ್ದಂತೆ , ಶ್ರೀರಾಮ , ಶ್ರೀಕೃಷ್ಣ ಮುಂತಾದ ಸಾತ್ವಿಕ ಪಾತ್ರಗಳಲ್ಲೂ ಅದೇ ಪ್ರಕಾರವಾಗಿ ಮಿಂಚಿದ್ದರು . ಗೋಡೆ ನಾರಾಯಣ ಹೆಗ್ಡೆಯವರ ಶೈಲಿಯಂತೆಯೇ , ಚಿಟ್ಟಾಣಿ , ಜಲವಳ್ಳಿ ಶೈಲಿಯನ್ನೂ ಹೊಂದಿದ ಅಪೂರ್ವ ಕಲಾವಿದರಾಗಿದ್ದರು . ಹಲವಾರು ಕಾಲ್ಪನಿಕ ಪ್ರಸಂಗಗಳ ಖಳ ಪಾತ್ರಗಳಿಗೆ ತನ್ನದೇ ಆದ ಚಿತ್ರಣ ನೀಡಿದ್ದರು . ದುರಂತ ನಾಯಕನ ಪಾತ್ರಗಳಲ್ಲಿಯೂ ಹುಡಗೋಡುರವರ ನಿರ್ವಹಣೆ ಅತ್ಯುತ್ತಮವಾಗಿತ್ತು .

ಫೇಸ್‌ಬುಕ್‌ ಲೈವ್ : ನಿನ್ನೆಯ ಜಲವಳ್ಳಿ ಮೇಳದ ಯಕ್ಷಗಾನ ಪ್ರದರ್ಶನವನ್ನು ಫೇಸ್‌ಬುಕ್‌ ನಲ್ಲಿ ಲೈವ್ ನಲ್ಲಿ ಪ್ರಸಾರ ಮಾಡಿದ್ದು , ಅದರಲ್ಲಿ ಹುಡಗೋಡು ರವರ ಕೊನೆಯ ಪಾತ್ರ ಹಾಗೂ ಕುಸಿದು ಬೀಳುವ ಸನ್ನಿವೇಶ ಇದೀಗ ವೈರಲ್ ಆಗಿದ್ದು , ಸಾವಿರಾರು ಪ್ರೇಕ್ಷಕರು ದುಖಿತರಾಗಿದ್ದಾರೆ . ( ಈ ಹಿಂದೆ ಗೇರುಕಟ್ಟೆ ಗಂಗಯ್ಯ ಶೆಟ್ಟರು ಅರುಣಾಸುರನ ಪಾತ್ರದಲ್ಲಿ ರಂಗಸ್ಥಳದಲ್ಲಿ ಕುಸಿದು ಬಿದ್ದ ಸನ್ನಿವೇಶವೂ ಇದೇ ರೀತಿ ವೈರಲ್ ಆಗಿತ್ತು .)

ಹುಡಗೋಡು ಚಂದ್ರಹಾಸರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಶ್ರೀ ವೆಂಕಟರಮಣ , ಶ್ರೀ ಹನುಮಂತ ದೇವರು ಹಾಗೂ ಕಲಾಮಾತೆಯಲ್ಲಿ ಪ್ರಾರ್ಥಿಸುತ್ತೇನೆ .

ಚಿತ್ರಕೃಪೆ : ಫೇಸ್‌ಬುಕ್‌

ಎಂ.ಶಾಂತರಾಮ ಕುಡ್ವ

ಮೂಡಬಿದಿರೆ

0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Tulunadu News July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search