ಮಿಥುನ್ ರೈಗೆ ಅಳುವ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ!?
ಹಿಂದೆ ಟಿವಿಗಳು ಇಲ್ಲದಂತಹ ಕಾಲದಲ್ಲಿ ಕಾಂಗ್ರೆಸ್ಸಿಗರು ಏನು ಮಾಡಿದ್ರು ನಡೆಯುತ್ತಿತ್ತು. ಈಗ ಅದು ಸಾಧ್ಯವಿಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕು. ಮಿಥುನ್ ರೈ ಒಬ್ಬರು ನಟರಾಗಿ ಬೆಳೆಯುವ ಒಳ್ಳೆಯ ಅವಕಾಶ ಇದೆ. ಯಾಕೆಂದರೆ ನಿರ್ಧೇಶಕರು ಹೇಳಿದ ಹಾಗೆ ಕೇಳುವ ಗುಣ ಅವರಿಗೆ ಇದೆ. ಇಲ್ಲದೇ ಹೋದರೆ ಪುರಭವನದ ವೇದಿಕೆ ಮೇಲೆ ಒಬ್ಬ ವ್ಯಕ್ತಿ ಮಿಥುನ್ ರೈಗೆ “ಅಳುವ ಹಾಗೆ” ಮಾಡಿ ಎಂದು ಸಿಗ್ನಲ್ ತೋರಿಸಿದ ತಕ್ಷಣ ಮಾನಸಿಕವಾಗಿ ತಯಾರಾದ ಮಿಥುನ್ ರೈ ಅಳುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಸ್ವಲ್ಪ ಅತ್ತ ಹಾಗೆ ಮಾಡಿದ್ದಾರೆ. ದೂರದಲ್ಲಿ ಕುಳಿತವರಿಗೆ ಮಿಥುನ್ ರೈ ಕಣ್ಣು ಒರೆಸುತ್ತಿದ್ದದ್ದು ನೋಡಿ ಅಳುತ್ತಿದ್ದಾರೆನೋ ಎಂದು ಅನಿಸಿರಬಹುದು. ಹಾಗೆ ಎದುರಿಗೆ ಕ್ಯಾಮೆರಾಗಳು ಇದ್ದ ಕಾರಣ ತಮ್ಮ ಅಳು ವರ್ಕೌಟ್ ಆಗಬಹುದು ಎಂದು ಮಿಥುನ್ ರೈ ಅವರಿಗೆ ಕೂಡ ಅನಿಸಿತ್ತು. ಆದರೆ ಅವರ ದುರಾದೃಷ್ಟ ಅವರ ಜೊತೆಗೆನೆ ಇತ್ತು. ಇವರು ಅಳುವ ಹಾಗೆ ಮಾಡಿದ್ದು ಮಾತ್ರ ಕ್ಯಾಮೆರಾಗಳಲ್ಲಿ ಚಿತ್ರೀಕರಣ ಆಗಿದ್ದರೆ ತೊಂದರೆ ಇರಲಿಲ್ಲ. ಆದರೆ ಇವರಿಗೆ ಅಳುವ ನಾಟಕ ಮಾಡಲು ಹೇಳಿದ ನಿರ್ದೇಶಕ ಕೂಡ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದ.
ಮಿಥುನ್ ಗೆ ಐಡಿಯಾ ಕೊಟ್ಟವರು ಯಾರು…
ಆ ಮಹಾನುಭಾವರ ಹೆಸರು ಅಶ್ರಫ್. ಸೇವಾದಳದ ಅಧ್ಯಕ್ಷರು. ಸಂದರ್ಭ ಜನಾರ್ಧನ ಪೂಜಾರಿ ಭಾಷಣ. ಬಹುಶ: ಅಶ್ರಫ್ ಕೆಲವು ದಿನಗಳ ಹಿಂದೆ ಹಾಸನದಲ್ಲಿ ದೇವೆಗೌಡರ ಇಡೀ ಕುಟುಂಬ ಪ್ರಜ್ವಲ್ ಅವರನ್ನು ಗೆಲ್ಲಿಸಲು ಅತ್ತದ್ದು ನೋಡಿರಬೇಕು. ಆ ಐಡಿಯಾ ಅಶ್ರಫ್ ತಲೆಯಲ್ಲಿ ಫ್ಲಾಶ್ ಆಗಿದೆ. ಹೇಗೂ ಮೈತ್ರಿ ಸರಕಾರ. ರಾಷ್ಟ್ರೀಯ ಪಕ್ಷವಾಗಿರುವ ನಾವು ಅವರಿಗೆ 28 ರಲ್ಲಿ ಎಂಟು ಸೀಟುಗಳನ್ನು ಧಾರೆ ಎರೆದಿರುವಾಗ (ಅದರಲ್ಲಿ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿ ಸಿಗದೇ ಆ ಸೀಟನ್ನು ದೇವೇಗೌಡರು ಕಾಂಗ್ರೆಸ್ಸಿಗೆ ಹಿಂತಿರುಗಿಸಿದರು) ಜಾತ್ಯಾತೀತ ಜನತಾದಳದ ಐಡಿಯಾವನ್ನು ಎರವಲು ಪಡೆದರೆ ಒಳ್ಳೆಯದು ಎಂದು ಅಶ್ರಫ್ ಅವರಿಗೆ ಅನಿಸಿದೆ. ಅದರೊಂದಿಗೆ ಟಿವಿ ಕ್ಯಾಮೆರಾದವರು ಇರುವಾಗ ಅದನ್ನು ದುರುಪಯೋಗ ಮಾಡದಿದ್ದರೆ ಹೇಗೆ ಎನ್ನುವ ದೂರಾಲೋಚನೆ ಹೊಳೆದಿದೆ. ಇನ್ನು ಈ ಅಳುವಿನಿಂದಲೇ ಸಣ್ಣ ರೈ ಗೆದ್ದರೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬಹುದು ಎಂದು ಅಂದುಕೊಂಡ ಅಶ್ರಫ್ ಅಳುವ ಹಾಗೆ ಮಾಡಿ ಎಂದು ಸಿಗ್ನಲ್ ಮಾಡಿ ತಮ್ಮ ಬುದ್ಧಿವಂತಿಕೆ ತೋರಿಸಿದ್ದಾರೆ. ಹಾಗೆ ನಿರ್ದೇಶಕನೊಬ್ಬ ಹಿಂಟ್ ಕೊಟ್ಟ ಕೂಡಲೇ ಗಬಕ್ಕನೆ ಕ್ಯಾಚ್ ಹಿಡಿಯುವ ನಟನಂತೆ ಮಿಥುನ್ ರೈ ನಟಿಸಿದ್ದಾರೆ. ಆದರೆ ಸಿಕ್ಕಿಬಿದ್ದಿದ್ದಾರೆ. ಟಿವಿ9 ನವರು ಅದನ್ನೇ ಹಿಡಿದು ಪ್ರೋಗ್ರಾಂ ಮಾಡಿದ್ದಾರೆ.
ಮಿಥುನ್ ರಾಹುಲ್ ಹಾದಿಯಲ್ಲಿ…
ರಾಜಕಾರಣಿಗಳು ಬೆಂಬಲಿಗರ ಮಾತುಗಳನ್ನು ಕೇಳಬೇಕು ನಿಜ. ಆದರೆ ತಮ್ಮದು ಎನ್ನುವ ಒಂದಿಷ್ಟು ಬುದ್ಧಿಯನ್ನು ಉಪಯೋಗಿಸಬೇಕು. ಕೇವಲ ಹಿಂದಿನಿಂದ ಚಪ್ಪಾಳೆ ತಟ್ಟುವವರು, ಎಲ್ಲದಕ್ಕೂ ತಲೆ ಆಡಿಸುವವರು, ನೀವೆ ಬುದ್ಧಿವಂತರು ಎಂದು ತಲೆಯ ಮೇಲೆ ಕೂರಿಸುವವರು, ತಮ್ಮ ಹಿಂದೆ ಮುಂದೆ ಕಾಲಬುಡದಲ್ಲಿ ಓಡಾಡುವವರ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಂಡರೆ ಹೀಗೆ ಆಗುವುದು. ಹಾಸನ, ಮಂಡ್ಯಕ್ಕೆ ಹೋಲಿಸಿದರೆ ಘಟ್ಟದ ಕೆಳಗಿನ ಕರಾವಳಿಯ ಜನ ಡಿಫರೆಂಟ್. ಇಲ್ಲಿ ವಿಕ್ಸ್ ಟವೆಲಿಗೆ ಹಾಕಿ ಅತ್ತರೆ ಜನರಿಗೆ ಗೊತ್ತಾಗುತ್ತೆ. ಅಷ್ಟಕ್ಕೂ ಮಿಥುನ್ ರೈ ಅಳುವಂತದ್ದು ಏನೂ ನಡೆಯಲೇ ಇಲ್ಲ. ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ದೇವಸ್ಥಾನ, ಮಸೀದಿ, ಚರ್ಚ್ ಎಲ್ಲಿಗೂ ಕಾಲಿಡುವುದಿಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ ತಕ್ಷಣ ಮಿಥುನ್ ರೈ ಅಳುವಂತದ್ದು ಏನೂ ಇಲ್ಲ. ಅವರಿಗೆ ನಿಜವಾಗಿ ಅಳು ಬರುವುದಿದ್ದರೆ “ಮಿಥುನ್ ರೈ ಗೆಲ್ಲುವುದಿಲ್ಲ, ನನ್ನ ಶಾಪ ಯುಟಿ ಖಾದರ್ ಗೆ ಇದೆ” ಎಂದು ಜನಾರ್ಧನ ಪೂಜಾರಿ ಟಿವಿ ಕ್ಯಾಮೆರಾಗಳ ಮುಂದೆ ಹೇಳಿದಾಗ ಮಿಥುನ್ ರೈ ಅಳಬೇಕಿತ್ತು. ಆಗ ನಗುಮುಖ ಮಾಡುತ್ತಾ ಮಿಥುನ್ ನಿಂತಿದ್ದರು. ಇಲ್ಲಿ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ, ಸ್ವತ: ನಾನೇ ನಿಂತರೂ ಗೆಲ್ಲುತ್ತಿರಲಿಲ್ಲ ಎಂದು ಪೂಜಾರಿ ಹೇಳಿದಾಗ ಮಿಥುನ್ ಅಳಬೇಕಿತ್ತು. ನನಗೆ ಕೆಲಸ ಇಲ್ಲ ಎಂದು ಕಾಯುತ್ತಿದ್ದೇನಾ, ಇವಾಗ್ಲಾ ಬರುವುದು ಎಂದು ಜೋರು ಮಾಡಿದಾಗ ಮಿಥುನ್ ಕಣ್ಣಲ್ಲಿ ನೀರು ಬರಬೇಕಿತ್ತು. ಆಗ ಬಂದಿರಲಿಲ್ಲ. ಆದರೆ ಸಹಚರನೊಬ್ಬ ಅಳಲು ಸರಿಯಾದ ಸಮಯ ಎಂದ ಕೂಡಲೇ ಮಿಥುನ್ ಅತ್ತು ಬಿಟ್ಟಿದ್ದಾರೆ. ಯಾಕೋ ರಾಹುಲ್ ಗಾಂಧಿಯವರ ಶಿಷ್ಯರು ರಾಹುಲ್ ಗಾಂಧಿ ಹಾದಿಯಲ್ಲಿಯೇ ಹೋಗುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ತಬ್ಬಿಕೊಂಡು ಗಾಂಧಿಗಿರಿ ತೋರಿಸಿದ ರಾಹುಲ್ ತಮ್ಮ ಸೀಟಿಗೆ ಬಂದು ಕುಳಿತ ತಕ್ಷಣ ಗೆಳೆಯರತ್ತ ನೋಡಿ ಕಣ್ಣು ಮಿಟುಕಿಸಿದ್ದರು. ಸಂಸತ್ತಿನಲ್ಲಿ ತಮ್ಮ ಮೇಲೆ ಅಷ್ಟೂ ಟಿವಿ ಕ್ಯಾಮೆರಾಗಳ ದೃಷ್ಟಿ ಇರುತ್ತೆ ಎಂದು ಆವತ್ತು ರಾಹುಲ್ ಗೆ ಗೊತ್ತೆ ಇರಲಿಲ್ಲ. ಈಗ ಮಿಥುನ್ ಸರದಿ!
Leave A Reply