ಯುವ ಮತದಾರನ ಎದುರು ಒಂದು ಕಡೆ ಮೋದಿ ಮತ್ತೊಂದೆಡೆ ಯಾರು ಎನ್ನುವ ಪ್ರಶ್ನೆ ಇದೆ!!
ಪ್ರಥಮ ಬಾರಿಗೆ 1991 ನೇ ಇಸವಿಯಲ್ಲಿ ಇಲ್ಲಿ ಕಾಂಗ್ರೆಸ್ ಸಾಕು ಎಂದು ಮತದಾರ ಯೋಚಿಸಿದ್ದನೋ ಅಥವಾ ಲೋಕಸಭೆಗೆ ದಕ್ಷಿಣ ಕನ್ನಡದಿಂದ ಕಾಂಗ್ರೆಸ್ಸಿನ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಲ್ಲ ಎಂದು ಆಗಿನ ಮತದಾರ ನಿಶ್ಚಯಿಸಿಬಿಟ್ಟನೋ, ಒಟ್ಟಿನಲ್ಲಿ ಆವತ್ತೇ ಕೊನೆ. ನಂತರ ಇಲ್ಲಿಂದ ಕಾಂಗ್ರೆಸ್ಸಿನ ಯಾವ ಸಂಸದನೂ ಲೋಕಸಭೆಯಲ್ಲಿ ಕಾಲಿಟ್ಟಿಲ್ಲ. ಅಂತಹ ಭದ್ರಕೋಟೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತಷ್ಟು ಸಿಮೆಂಟ್, ಮರಳು ಹದವಾಗಿ ಬೆರೆತು ಗಟ್ಟಿಯಾಗುತ್ತಾ ಇದೆ. ಆದರೆ ಈ ಕೋಟೆಯನ್ನು ಕೊರೆದು ಚಿಂದಿ ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಮಾಡುತ್ತಿರುವ ಪ್ರಯತ್ನ ಕೈಗೂಡುತ್ತಿಲ್ಲ. ಯಾಕೆಂದರೆ ಹೊಸ ಮತದಾರರ ಸಂಖ್ಯೆ. ಈ ಬಾರಿ ಸುಮಾರು 23 ಸಾವಿರ ಹೊಸ ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಲು ಕ್ಯೂನಲ್ಲಿ ನಿಲ್ಲಲಿದ್ದಾರೆ. ಅದರಲ್ಲಿ 95% ಜನ ನರೇಂದ್ರ ಮೋದಿಯವರನ್ನು ನೋಡಿಯೇ ಮತ ಚಲಾಯಿಸುವುದು ಎನ್ನುವುದು ಅವರ ಬಾಯಿಂದಲೇ ಬರುತ್ತಿರುವ ಮಾತು. 23 ಸಾವಿರ ದೊಡ್ಡ ಮೊತ್ತ ಅಲ್ಲ ಎಂದು ಕಾಂಗ್ರೆಸ್ಸಿಗರು ಅಂದುಕೊಳ್ಳಬಹುದು. ಆದರೆ ನೆನಪಿಡಿ, ಪ್ರಥಮ ಮತದಾರನನ್ನು ಬಿಟ್ಟು 19 ತುಂಬಿ, 20ಕ್ಕೆ ಕಾಲಿಟ್ಟ ಅನೇಕ ಯುವ ಮತದಾರರು ಒಂಭತ್ತು ತಿಂಗಳ ಹಿಂದೆ ಪ್ರಥಮ ಬಾರಿ ಮತ ಚಲಾಯಿಸಿದ್ದಾರೆ. ಅದರಲ್ಲಿ ತೊಂಬತ್ತೆಂಟು ಶೇಕಡಾ ಆವತ್ತಿನ ಮೊದಲ ಮತದಾರರು ಬಿಜೆಪಿಗೆನೆ ಮತ ಚಲಾಯಿಸಿದ್ದು ಎಂದು ಅಂಕಿ ಅಂಶಗಳೇ ಹೇಳುತ್ತವೆ. ವಿಧಾನಸಭಾ ಚುನಾವಣೆಯಲ್ಲಿಯೇ ಯಡಿಯೂರಪ್ಪ, ಈಶ್ವರಪ್ಪ, ಶೋಭಾ, ಅಶೋಕ್, ಸಿಟಿರವಿ ಮುಖ ನೋಡಿಕೊಂಡು ಮತ ಚಲಾಯಿಸಿದ ಹೊಸ ಮತದಾರ ಈ ಬಾರಿಯಂತೂ ಇನ್ನಷ್ಟು ಹುಮ್ಮಸ್ಸಿನಿಂದ ಮೋದಿ ಮುಖ ನೋಡಿ ಮತ ಚಲಾಯಿಸಲಿದ್ದಾನೆ. ಆದ್ದರಿಂದ ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯ ಬಿಜೆಪಿಯ ಏಳು ಜನ ಶಾಸಕರಿಗೆ ತಮ್ಮ ಗೆಲುವಿಗೆ ಸುರಿಸಿದ ಬೆವರಿಗಿಂತಲೂ 50 ಶೇಕಡಾ ಕಡಿಮೆ ಬೆವರು ಸುರಿಸಿದರೂ ಸಾಕು ಎನ್ನುವ ವಾತಾವರಣ ಇದೆ.
ರಾಹುಲ್ ಜೊತೆ ಸಂಬಂಧಕ್ಕೆ ನಹೀಜೀ…
ಅಷ್ಟಕ್ಕೂ ಮೊದಲ ಬಾರಿ ಮತ ಹಾಕುವ ಮತದಾರ ಏನು ನೋಡುತ್ತಾನೆ. ಸಂಶಯವೇ ಇಲ್ಲ. ತನಗೆ ಯಾರು ಪ್ರಧಾನಿಯಾದರೆ ಒಳ್ಳೆಯದು ಎಂದು ನೋಡುತ್ತಾನೆ. ಅವನ ಎದುರಿಗೆ ಒಂದು ಕಡೆ ನರೇಂದ್ರ ಮೋದಿ ನಿಂತಿದ್ದರೆ ಮತ್ತೊಂದು ಕಡೆ ರಾಹುಲ್ ಗಾಂಧಿ ನಿಂತಿದ್ದಾರೆ. ಬಿಜೆಪಿ ಅತ್ಯಧಿಕ ಸೀಟುಗಳನ್ನು ಗಳಿಸಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಮೋದಿ ಮುಂದಿನ ಪ್ರಧಾನಿಯಾಗುತ್ತಾರೆ. ಒಂದು ವೇಳೆ ಹಾಗೆ ಆಗದೇ ಕಾಂಗ್ರೆಸ್ ನೂರೈವತ್ತರ ಗಡಿ ದಾಟಿತು ಎಂದೇ ಇಟ್ಟುಕೊಳ್ಳೋಣ, ಆಗ 273 ರ ಸಂಖ್ಯೆ ತಲುಪಲು ಅದಕ್ಕೆ ಇನ್ನೂ 124 ಸೀಟುಗಳು ಬೇಕಾದವು ಎಂದು ಅಂದಾಜು ಹಾಕಿದರೆ ಆ ಸೀಟುಗಳನ್ನು ತುಂಬುವವರು ಯಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಚಂದ್ರಬಾಬು ನಾಯ್ಡು ಪರಿಸ್ಥಿತಿ ಆಂಧ್ರದಲ್ಲಿಯೇ ಚೆನ್ನಾಗಿಲ್ಲ. ಈ ಬಾರಿ ಅವರು ತಮ್ಮದೇ ಒರಗೆಯ ಕಸಿನ್ ತೆಲಂಗಾಣದಲ್ಲಿ ಸ್ಪರ್ಧಿಸುತ್ತಿಲ್ಲ. ಮಾಯಾವತಿಯವರು ರಾಹುಲ್ ಜೊತೆ ಅಧಿಕಾರ ಹಂಚಿಕೊಳ್ಳುವುದು ಬಿಡಿ, ಬೈಟು ಕಾಫಿ ಕೂಡ ಕುಡಿಯಲ್ಲ ಎಂದಿದ್ದಾರೆ. ಅದೇ ಮಾತು ರಾಹುಲ್ ಚಡ್ಡಿದೋಸ್ತ್ ಅಖಿಲೇಶ್ ಸಿಂಗ್ ಯಾದವ್ ಕೂಡ ಹೇಳಿದ್ದಾರೆ. ನಮ್ಮ ತಂದೆ ಕಾಲಕ್ಕೆ ಕಾಂಗ್ರೆಸ್ಸ್ ಜೊತೆ ಇದ್ದ ಸಂಬಂಧ ಈಗ ಬಿಲ್ ಕುಲ್ ಇಲ್ಲ ಎಂದಿದ್ದಾರೆ. ಸ್ಟಾಲಿನ್ ಹೆಚ್ಚೆಂದರೆ ಹತ್ತರಿಂದ ಹನ್ನೆರಡು ಸೀಟು ಕಷ್ಟದಲ್ಲಿ ಪಡೆದುಕೊಂಡರೂ ಗೃಹ, ಸಾರಿಗೆಯಂತಹ ಮಹತ್ವದ ಖಾತೆ ಪಡೆದುಕೊಳ್ಳಲು ದೆಹಲಿಯಲ್ಲಿಯೇ ಬಿಡಾರ ಹೂಡಬಹುದು. ಕರುಣಾನಿಧಿ ಹೋದ ಮೇಲೆ ಸ್ಟಾಲಿನ್ ವರ್ಚಸ್ಸು ಹಾಲು ಬೆರೆಸದ ಕಣ್ಣು ಕಾಫಿ ತರಹ ಹಾಗಿದೆ. ಕುಡಿಯಬಹುದು, ಆದರೆ ರುಚಿ ವ್ಯಾ..
ಡಿಕೆಶಿಯ ಹಣ ಕರಗಿಸಲು ಸರ್ಕಸ್ಸ್..
ಇನ್ನು ದೀದಿ ಮಮತಾ ಬ್ಯಾನರ್ಜಿ ಕಡೆ ರಾಹುಲ್ ನೋಡಿದರೆ ನಿಮ್ಮಮ್ಮನನ್ನೇ ಕ್ಯಾರ್ ಮಾಡದೇ ಅಟಲ್ ಜಿಯೊಂದಿಗೆ ಹೋಗಿರುವ ನನಗೆ ನೀನು ಯಾವ ಪುಟಗೋಸಿ, ಬೇಕಾದರೆ ನನ್ನನ್ನು ಪ್ರಧಾನ ಮಂತ್ರಿ ಮಾಡು, ಇಲ್ಲದಿದ್ದರೆ ನಿನ್ನ ದಾರಿ ನಿನಗೆ ಎಂದು ಮಮತಾ ಗರ್ಜಿಸಬಹುದು. ಇನ್ನು ಒಮರ್ ಅಬ್ದುಲ್ಲಾ ತಾವು “ಕಾಶ್ಮೀರ”ದ ಪ್ರಧಾನಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಅದನ್ನು ರಾಹುಲ್ ಈಡೇರಿಸಿದರೆ ಕಾಂಗ್ರೆಸ್ ಇತಿಹಾಸದಲ್ಲಿ ಅದೊಂದು ಪಕ್ಷ ಹಿಂದೆ ಅಸ್ತಿತ್ವದಲ್ಲಿತ್ತು ಎನ್ನುವ ಲೆವೆಲ್ಲಿಗೆ ಬರುತ್ತದೆ. ಹಾಗಾದರೆ ರಾಹುಲ್ ಪ್ರಧಾನಿಯಾಗುವುದಾದರೂ ಹೇಗೆ? ಕಮ್ಯೂನಿಸ್ಟರ ಕಡೆ ಕೈ ಬೀಸೋಣ ಎಂದರೆ ರಾಹುಲ್ ವೈಯನಾಡ್ ನಲ್ಲಿ ಸ್ಪರ್ಧಿಸಿರುವುದಕ್ಕೆ ಕಮ್ಯೂನಿಸ್ಟರು ಎಷ್ಟು ಉಗ್ರರಾಗಿದ್ದಾರೆ ಎಂದರೆ ಚುನಾವಣೆ ಮುಗಿದ ನಂತರ ಅಲ್ಲಿನ ಕಾಂಗ್ರೆಸ್ಸಿಗರಿಗೆ ಇದೇ ಮಾರಿಹಬ್ಬ. ಇಷ್ಟೆಲ್ಲ ಕಿರಿಕಿರಿ ಇರುವಾಗ ತಾವು ಮೋದಿಗೆ ಮತ ಕೊಡದೇ ಇದ್ದರೆ ಭಾರತದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತೆ ಎಂದು ಅಂದುಕೊಂಡಿರುವ ಯುವ ಮತದಾರ ಮೋದಿಯವರಿಗೆನೆ ಮತ ಚಲಾಯಿಸಿ ದೇಶದ ಭದ್ರತೆಯ ಕಾರಣದಿಂದ ತಾನೂ ಭದ್ರನಾಗಲಿದ್ದಾನೆ. ಇದೆಲ್ಲ ಗೊತ್ತಿದ್ದೆ ದಕ್ಷಿಣ ಕನ್ನಡ ಕಾಂಗ್ರೆಸ್ ಸೋಲುವ ಮಾರ್ಜಿನ್ ಆದರೂ ಕಡಿಮೆ ಆಗಲಿ ಎಂದು ಯುವಕನನ್ನು ರಣಾಂಗಣಕ್ಕೆ ಇಳಿಸಿದೆ. ಡಿಕೆಶಿಯ ಹಣ ಕರಗಬಹುದೇ ವಿನ: ಕಳೆದ ಬಾರಿ ನಳಿನ್ ಗೆದ್ದ ಅಂತರ ಕಡಿಮೆ ಆಗುವ ಲಕ್ಷಣ ಕಾಣಿಸುತ್ತಿಲ್ಲ!
Leave A Reply