ಚೌಕಿದಾರ್ ಕೋ ಚೋರ್ ಬೋಲೆ ತೋ ಶೇರ್ ಜಾಗ್ ಗಯಾ!!
ಈ ಬಾರಿಯ ಲೋಕಸಭಾ ಚುನಾವಣೆಯ ಘೋಷವಾಕ್ಯ ಮೇ ಬಿ ಚೌಕಿದಾರ್ ಎನ್ನುವುದು ಖಾತ್ರಿಯಾಗಿದೆ. ಅಷ್ಟಕ್ಕೂ ಚೌಕೀದಾರ್ ಎನ್ನುವ ಶಬ್ದ ಈ ಬಾರಿ ಆಕಸ್ಮಿಕವಾಗಿ ಹುಟ್ಟಿದ್ದು ಎನ್ನುವುದರಲ್ಲಿ ಸಂಶಯವಿಲ್ಲ. ದೇಶದ ಸಂಪತ್ತನ್ನು ಲೂಟಿ ಮಾಡುವವರನ್ನು ಬಿಡುವುದಿಲ್ಲ. ರಾಷ್ಟ್ರದ ಸಂಪತ್ತನ್ನು ರಕ್ಷಿಸುವ ಚೌಕೀದಾರ್ ಆಗಿ ನಾನು ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಅದರ ನಂತರ ಮೋದಿಯವರಿಗೆ ಟಾಂಗ್ ಕೊಡಬೇಕು ಎನ್ನುವ ದೂರದೃಷ್ಟಿಯಿಂದ ರಾಹುಲ್ ಗಾಂಧಿ ರಫೇಲ್ ಡೀಲ್ ವಿಷಯದಲ್ಲಿ ಚೌಕಿದಾರ್ ಚೋರ್ ಹೇ ಎನ್ನುವ ವಾಕ್ಯ ಬಳಸಿದರು. ಮೋದಿ ಸಾಮರ್ತ್ಯ ಏನು ಎಂದರೆ ಅವರು ವಿರೋಧಿಗಳು ಬಿಸಾಡುವ ಕಲ್ಲುಗಳಿಂದಲೇ ಗೋಡೆ ಕಟ್ಟಿಕೊಳ್ಳುತ್ತಾರೆ. ಟೀಕೆಗಳನ್ನೇ ಆಭರಣವನ್ನಾಗಿಸಿಕೊಳ್ಳುತ್ತಾರೆ. ಅದರಿಂದ ಅಲೆ ಎಬ್ಬಿಸುತ್ತಾರೆ. ಯಾವಾಗ ಚೌಕೀದಾರ್ ಚೋರ್ ಹೇ ಎನ್ನುವ ಮಾತನ್ನು ರಾಹುಲ್ ಆದಿಯಾಗಿ ಕಾಂಗ್ರೆಸ್ಸಿಗರು ಎಲ್ಲಾ ಕಡೆ ಹೇಳುತ್ತಾ ಬಂದರೋ ಮೋದಿ ದೃತಿಗುಂದಲಿಲ್ಲ. ತನ್ನ ಘೋಷಣೆಯನ್ನು ಹೀಯಾಳಿಸಿದರು ಎಂದು ಟೆನ್ಷನ್ ಮಾಡಿಕೊಳ್ಳಲಿಲ್ಲ. ಚೌಕೀದಾರ್ ಶಬ್ದವನ್ನೇ ಸರವನ್ನಾಗಿ ಮಾಡಿಕೊಂಡರು. ಮೇ ಚೌಕೀದಾರ್ ಎಂದರು. ನೀವು ನನಗೆ ಏನು ಬೇಕಾದ್ರೂ ತಮಾಷೆ ಮಾಡಿ, ಭಾರತದ ನೂರು ಕೋಟಿ ಜನರ ಸಂಪತ್ತಿನ ಚೌಕಿದಾರ್ ತಾನು ಎಂದು ಎದೆತಟ್ಟಿ ಹೇಳಿದರು. ಅದಕ್ಕೆ ಸರಿಯಾಗಿ ಸೋರಿಕೆಯಾಗುತ್ತಿದ್ದ ಸಾವಿರಾರು ಕೋಟಿಯನ್ನು ಹೇಗೆಲ್ಲ ಉಳಿಸಿದೆ ಎನ್ನುವುದನ್ನು ಅಂಕಿಸಂಖ್ಯೆಗಳ ಮೂಲಕ ತಿಳಿಸಿದರು. ಸಬ್ಸಿಡಿ ಹೇಗೆ ದಲ್ಲಾಳಿಗಳ ಪಾಲಾಗುತ್ತಿತ್ತು ಎನ್ನುವುದನ್ನು ವಿವರಿಸಿ ಡೈರೆಕ್ಟ್ ಟ್ರಾನ್ಸಫರ್ ಟು ಬ್ಯಾಂಕ್ ವ್ಯವಸ್ಥೆ ತಂದರು. ಗ್ಯಾಸ್ ಸಬ್ಸಿಡಿ ಅವರವರ ಬ್ಯಾಂಕ್ ಖಾತೆಗೆ ಹೋಗುವಂತೆ ನೋಡಿಕೊಂಡರು. ಅವರ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ಮಧ್ಯವರ್ತಿ ಹೆಗ್ಗಣಗಳಿಗೆ ತಿನ್ನಲು ಸಿಗುವುದು ತಪ್ಪಿಹೋಯಿತು.
ಯಾರೋ ದೇಶದ್ರೋಹಿ ಕೆಲಸ ಮಾಡಿದ್ದಕ್ಕೆ….
ಅದಕ್ಕೆ ಸರಿಯಾಗಿ ಯಾರೋ ಮಧ್ಯದಲ್ಲಿ ಆಡಿಬಿಟ್ಟ. ರಕ್ಷಣಾ ಇಲಾಖೆಯ ಕಚೇರಿಯಿಂದ ರಫೇಲ್ ಒಪ್ಪಂದಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಲ್ಲಿಯೇ ಝೆರಾಕ್ಸ್ ಮಾಡಿ ಕದ್ದು ಸಾಗಿಸಿಬಿಟ್ಟ. ಅದು ದಕ್ಷಿಣ ಭಾರತದ ಪ್ರಖ್ಯಾತ ಇಂಗ್ಲೀಷ್ ಪತ್ರಿಕೆಯ ಪಾಲಾಯಿತು. ಅವರು ಸರಣಿಯಲ್ಲಿ ಲೇಖನಗಳನ್ನು ಪ್ರಕಟಿಸಲು ಶುರು ಮಾಡಿದರು. ಅದನ್ನು ಹಿಡಿದುಕೊಂಡು ಕಾಂಗ್ರೆಸ್ ಥಿಂಕ್ ಟ್ಯಾಂಕ್ ಗಳು ವಿಷಯವನ್ನು ಸ್ಟಡಿ ಮಾಡಿದವು. ಏನು ಮಾಡಿದರೂ ಹುಳುಕು ತೆಗೆಯಲು ಆಗಲಿಲ್ಲ. ಆದರೆ ಸತ್ಯದ ಮೇಲೆ ಸುಳ್ಳಿನ ಪರದೆಯನ್ನು ಎಳೆದು ಆಟವಾಡೋಣ ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದರು. ರಾಹುಲ್ ಗಾಂಧಿಯನ್ನು ಯಾವುದೋ ಮಧ್ಯಾಹ್ನದ ಸವಿನಿದ್ರೆಯಲ್ಲಿ ಇದ್ದವರಿಗೆ ಎಬ್ಬಿಸಿ ಚಾ ಕುಡಿಸಿ ಚಾಯ್ ವಾಲಾನ ಘೋಟಾಲಾ ಎಂದು ಕಿವಿಯೂದಿದರು. ನೀವು ಸರಿಯಾಗಿ ಅಧ್ಯಯನ ಮಾಡಿದ್ದಿರಲ್ಲ ಎಂದು ರಾಹುಲ್ ಎರಡೆರಡು ಸಲ ಕೇಳಿದರು. ವಿಷಯ ತುಂಬಾ ಡೀಪ್ ಹೋಗುವುದು ಬೇಡಾ. 550 ಕೋಟಿಯ ಯುದ್ಧ ವಿಮಾನವನ್ನು 1650ಕ್ಕೆ ಯಾಕೆ ಖರೀದಿಸಿದ್ದಿರಿ ಎಂದು ಕೇಳಿ. ಅಷ್ಟೇ ಸಾಕು, ಜನ ನಂಬುತ್ತಾರೆ ಎಂದು ರಾಹುಲ್ ಅವರಲ್ಲಿ ಧೈರ್ಯ ತುಂಬಿದರು. ಅದನ್ನೇ ಹಿಡಿದು ರಾಹುಲ್ ತಮ್ಮ ಮಾತುಗಾರಿಕೆಯನ್ನು ತೀಕ್ಣಗೊಳಿಸಿದರು.
ಮೋದಿಗೆ ತಿರುಮಂತ್ರ ಮಾಡಲು ಹೋದ ರಾಹುಲ್…
ರಾಹುಲ್ ಗಾಂಧಿಯನ್ನು ಮೋದಿ ಯಾವಾಗಲೂ ಶಹಜಾದಾ ಎಂದೋ, ನಾಮಧಾರ್ ಎಂದೋ ಕರೆದು ಛೇಡಿಸಿದ್ದಾರೆ ವಿನ: ರಾಹುಲ್ ಗಾಂಧಿ ಎನ್ನುವ ಹೆಸರಿನಿಂದ ಕರೆದದ್ದು ಕಡಿಮೆ. ಅದೇ ಶೈಲಿಯನ್ನು ಈ ಬಾರಿ ರಾಹುಲ್ ಅನಿಸಿದರು. ಮೋದಿ ಚೋರ್ ಹೇ ಎಂದರೆ ಸಿಂಪಥಿ ಮೋದಿ ಕಡೆ ಹುಟ್ಟುತ್ತದೆ ಎಂದು ಹೆದರಿ ಚೌಕಿದಾರ್ ಚೋರ್ ಹೇ ಎಂದು ಪರೋಕ್ಷವಾಗಿ ಕುಟುಕಿದರು. ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ರಾಹುಲ್ ಅಂದುಕೊಂಡಿದ್ದರು. ಆದರೆ ಅದು ಉಲ್ಟಾ ಆಯಿತು.
ಚೌಕಿದಾರ್ ಶೇರ್ ಹೇ ಎನ್ನುವ ಘೋಷವಾಕ್ಯ ತನ್ನಿಂದತಾನೆ ಹುಟ್ಟಿಕೊಂಡಿತು. ಮೇ ಬೀ ಚೌಕಿದಾರ್ ಎನ್ನುವ ಸ್ಟಿಕರ್ ಪ್ರಿಂಟ್ ಆದವು. ಅದು ಕಾರಿನ ಹಿಂದೆ ಅಂಟಿಸಲ್ಪಟ್ಟವು. ಅದು ವ್ಯಾಪಕವಾಗಿ ಪ್ರಚಾರವಾಗುತ್ತಿದ್ದ ಹಾಗೆ ಕಾಂಗ್ರೆಸ್ಸಿನವರು ಚೌಕಿದಾರ್ ಚೋರ್ ಹೇ ಎನ್ನುವ ಸ್ಟಿಕರ್ ಮಾಡಿ ತಯಾರು ಮಾಡಿ ಇಟ್ಟುಕೊಂಡರು. ಮೊದಲಿಗೆ ಯಾರಾದರೂ ಒಬ್ಬರು ಅಂಟಿಸಲಿ, ನಂತರ ಪ್ರತಿಕ್ರಿಯೆ ನೋಡಿ ನಾವು ಅಂಟಿಸೋಣ ಎಂದು ಅಂದುಕೊಂಡರು. ಹೇಳಿಕೇಳಿ ಕರಾವಳಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಚೋರ್ ಎನ್ನುವ ಶಬ್ದ ಅವಮಾನಕರ ಪದವಾಗಿದೆ. ನೀನು ಕಳ್ಳ ಎಂದು ಯಾರಾದರೂ ಯಾರಿಗಾದರೂ ಹೇಳಿದರೆ ಅದು ದೊಡ್ಡ ಅವಮಾನ ಎನ್ನುವ ದೃಷ್ಟಿಯಲ್ಲಿ ನೋಡಲಾಗತ್ತದೆ. ಯಾವಾಗ ಚೌಕಿದಾರ್ ಚೋರ್ ಎಂದು ಉಡುಪಿಯ ಯುವ ಕಾಂಗ್ರೆಸ್ಸಿಗ ಒಬ್ಬರು ತಮ್ಮ ಕಾರಿನ ಹಿಂದೆ ಅಂಟಿಸಿಕೊಂಡರೋ ಅವರ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್, ಡಿಸೀಲ್ ಯಾರೂ ಹಾಕಿಸಬಾರದು ಎನ್ನುವ ಮೇಸೆಜ್ ಹರಿಯಲಾರಂಭಿಸಿತು. ಅವರು ತಮ್ಮ ವ್ಯಾಪಾರಕ್ಕೆ ಪೆಟ್ಟು ಬೀಳುತ್ತೆ ಎನ್ನುವ ಹೆದರಿಕೆಯಿಂದ ತೆಗೆಸಿಬಿಟ್ಟರು. ನಂತರ ಉಳಿದ ಯಾರೂ ಹಾಗೆ ಧೈರ್ಯ ಮಾಡಲಿಲ್ಲ!
Leave A Reply