ಮ್ಯೂಸಿಯಂನಲ್ಲಿ ಇಡಬಹುದಾದ ಪಾಲಿಕೆಯ ಇಂಜಿನಿಯರ್ ಗಳ ಮೆದುಳು!!
ಕೆಲವು ಕಾಮಗಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ಸ್ ಗಳೇ ಮಾಡಿರಬೇಕು ಎಂದು ಎಷ್ಟು ದೂರದಿಂದ ಬೇಕಾದರೂ ಅಥವಾ ಎಷ್ಟು ಮೇಲೆಯಿಂದಲೂ ನೋಡಿ ಹೇಳಿಬಿಡಬಹುದು. ಅಷ್ಟು ಖರಾಬಾಗಿರುತ್ತದೆ. ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ ಎನ್ನುವ ಕಾರಣಕ್ಕೆ ಆದಷ್ಟು ರಸ್ತೆ ಅಗಲ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದು ನಗರದಲ್ಲಿ ವಾಸಿಸುವ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಾಗಿ ಸಾಕಷ್ಟು ಜನ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಮಂಗಳೂರಿನ ಶ್ವಾಸಕೋಶದಂತಿರುವ ಪ್ರಮುಖ ಭಾಗವೊಂದರಲ್ಲಿ ಇರುವ ಜಾಗವನ್ನು ಪಾಲಿಕೆಯ ಇಂಜಿನಿಯರ್ಸ್ ಹೇಗೆ ವೇಸ್ಟ್ ಮಾಡಿದ್ದಾರೆ ಎಂದರೆ ವೇಸ್ಟ್ ಆಗಿರುವ ಜಾಗದಲ್ಲಿ ಒಂದು ಮಳಿಗೆಯನ್ನು ಕಟ್ಟಬಹುದು. ಭವಿಷ್ಯದಲ್ಲಿ ಆ ಖಾಲಿ ಜಾಗದಲ್ಲಿ ಯಾವುದೋ ಮಾಲ್ ನ ವಾಹನಗಳು ನಿಲ್ಲಲಿವೆ. ನಾಲ್ಕು ಗೂಡಂಗಡಿಗಳು ತಲೆ ಎತ್ತಲಿವೆ. ಅದರೊಂದಿಗೆ ಆ ರಸ್ತೆ ಬ್ಲಾಕ್ ಆಗಲಿದೆ. ವಾಹನ ಚಾಲಕರು ತಮ್ಮ ಪಾಡಿಗೆ ತಾವು ಯಾರನ್ನೋ ಶಪಿಸಲಿದ್ದಾರೆ. ಕೆಲವರು ಇದೆಲ್ಲಾ ಶಾಸಕರ ತಪ್ಪು ಎನ್ನಬಹುದು. ಕೆಲವರು ಸಂಸದರ ತಪ್ಪು ಎನ್ನಬಹುದು. ಒಟ್ಟಿನಲ್ಲಿ ಪಾಲಿಕೆಯ ಇಂಜಿನಿಯರ್ಸ್ ಗಳು ಮಾಡುವ ಹುಚ್ಚಾಟಕ್ಕೆ ಜನರು ಯಾರನ್ನೋ ಬೈಯಲಿದ್ದಾರೆ.
ಹೌದು, ಜನರ ದೂರುಗಳು ಈಗಾಗಲೇ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಕಚೇರಿಗೆ ಬಂದು ತಲುಪಿದೆ. ನಾಗರಿಕರು ಶಾಸಕರಿಗೆ ಫೋನ್ ಮಾಡಿ ತೊಂದರೆಯನ್ನು ವಿವರಿಸುತ್ತಿದ್ದಾರೆ. ಇದರ ಗಂಭೀರತೆ ಜನರಿಗೆ ಹೆಚ್ಚು ತಟ್ಟುವ ಮೊದಲೇ ಶಾಸಕರು ಆ ಪ್ರದೇಶಕ್ಕೆ ಧಾವಿಸಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಷ್ಟಕ್ಕೂ ನಾನು ಹೇಳುತ್ತಿರುವ ಪ್ರದೇಶ ಯಾವುದು ಎಂದು ಗೊತ್ತಾಯಿತಾ? ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮೂಗಿನ ನೇರಕ್ಕೆ ಇರುವ ಗಾಂಧಿ ಪ್ರತಿಮೆಯ ಪಾಶ್ವದಲ್ಲಿರುವ ಚರಂಡಿ ಕಾಮಗಾರಿ. ನೀವು ಆ ಭಾಗಕ್ಕೆ ಇತ್ತೀಚೆಗೆ ಯಾವತ್ತಾದರೂ ಹೋಗಿದ್ದಿರಾದರೆ ನಿಮಗೆ ಅದು ಗಮನಕ್ಕೆ ಬಂದಿರಬಹುದು. ಲಾಲ್ ಭಾಗ್ ನಿಂದ ಸರಕಾರಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಮಹಿಳಾ ಹಾಸ್ಟೆಲ್ ನ ಗೇಟ್ ಎದುರಿಗೆ ಈ ಅವ್ಯವಸ್ಥೆ ಕಾಣಬಹುದು. ಪಾಲಿಕೆ ಅಲ್ಲೊಂದು ಉದ್ಯಾನವನ ಮಾಡುತ್ತಿದೆಯೇನೋ ಎಂದು ಅನಿಸುವಂತೆ ಸಾಕಷ್ಟು ಜಾಗ ಬಿಟ್ಟಿದೆ. ರಸ್ತೆಗೆ ತಾಗಿ ಅಂದಾಜು ಐದು ಮೀಟರ್ ಅಗಲದ ಚರಂಡಿ ನಿರ್ಮಾಣವಾಗಿದೆ. ಅದರ ಮೇಲೆ ಚಪ್ಪಡಿ ಎಳೆದರೆ ವಾಹನಗಳು ಅತ್ತ ಪಾರ್ಕ್ ಮಾಡಿಬಿಡಬಹುದು. ಇದರಿಂದ ಲೇಡಿಹಿಲ್ ನಿಂದ ಬಿಜೈ ಕಡೆಗೆ ಹೋಗುವವರಿಗೆ ಈ ಭಾಗದಲ್ಲಿ ಅದು ಸಿಂಗಲ್ ರೋಡ್ ಆಗಲಿದೆ. ನಟ್ಟ ನಡುಭಾಗದಲ್ಲಿ ಸಿಂಗಲ್ ರೋಡ್ ಆದರೆ ವಾಹನಗಳ ಗತಿ ಏನು?
ಇಂತಹ ಒಂದು ಕೆಟ್ಟ ಪ್ರಯತ್ನವನ್ನು ಆರ್ ಟಿಒ ವೃತ್ತದ ಬಳಿ ಮಾಡಲಾಗಿತ್ತು. ಅಲ್ಲಿ ಅಗ್ನಿಶಾಮಕ ದಳದ ಕಚೇರಿ ಕಡೆ ಹೋಗುವ ಫ್ರೀ ಲೆಪ್ಟ್ ತೆಗೆದು ಹಾಕಲಾಗಿತ್ತು. ಅದರಿಂದ ಆಗಿರುವ ತೊಂದರೆ ಒಂದೆರಡಲ್ಲ. ಆ ಸಮಸ್ಯೆ ಗೊತ್ತಿದ್ದು ಲಾಲ್ ಭಾಗ್ ನಲ್ಲಿ ಅದನ್ನು ಪುನರಾವರ್ತಿಸಲಾಗಿದೆ. ಪಾಲಿಕೆಯ ಇಂಜಿನಿಯರ್ಸ್ ಗಳ ತಲೆಯನ್ನು ಯಾವ ಮ್ಯೂಸಿಯಂನಲ್ಲಿ ಇಡಬಹುದು ಎಂದು ಯೋಚಿಸುತ್ತಿದ್ದೇನೆ!
Leave A Reply